Asianet Suvarna News Asianet Suvarna News

ಬೆಂಗಳೂರಿನ ಎಲ್ಲ ನೀರು ಪೂರೈಕೆ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೊಪ್ಪಿಸಿ: ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ

ಬೆಂಗಳೂರಿನ ಎಲ್ಲ ಖಾಸಗಿ ನೀರು ಸರಬರಾಜು ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. 

Bengaluru all water supply tankers Handover to government ordered Dy CM DK Shivakumar sat
Author
First Published Mar 2, 2024, 7:12 PM IST

ಬೆಂಗಳೂರು (ಮಾ.2): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಅಭಾವ ನೀಗಿಸಲು ಹಾಗೂ ಕುಡಿಯುವ ನೀರಿನ ದಂಧೆ ತಡೆಯುವ ನಿಟ್ಟಿನಲ್ಲಿ ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದೆ. ಈ ಸಂಬಂಧ ಎಲ್ಲ ನೀರು ಪೂರೈಕೆ ಟ್ಯಾಂಕರ್‌ಗಳ ಮಾಲೀಕರು ತಮ್ಮ ನೀರು ಸರಬರಾಜು ಟ್ಯಾಂಕರ್‌ಗಳನ್ನು ಮಾ.7ರ ಒಳಗಾಗಿ ಸರ್ಕಾರದ ಸುಪರ್ದಿಗೆ ಒಪ್ಪಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. 

ಈ ಸಂಬಂಧ ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ಪಾಲಿಕೆ ಅಧಿಕಾರಿಗಳು ಪ್ರತಿನಿತ್ಯ ಸಭೆ ನಡೆಸುತ್ತಿದ್ದಾರೆ. ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳು ಮಾರ್ಚ್ 7ರ ಒಳಗಾಗಿ https://bbmp.oasisweb.in/TankerManagement/SelfRegistration.aspx ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ವಿಚಾರವಾಗಿ ಮಾರ್ಚ್ 4ರಂದು ಮಧ್ಯಾಹ್ನ 12 ಗಂಟೆಗೆ ಬಿಬಿಎಂಪಿ ಆಯುಕ್ತರು, ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಬಿಬಿಎಂಪಿ ಜೋನಲ್‌ ಕಮಿಷನರ್‌ಗಳು, ಜಂಟಿ ಆಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿಗೆ ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ

ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ಪ್ರತೀ ಕ್ಷೇತ್ರಕ್ಕೆ ತಲಾ  10 ಕೋಟಿ ರೂ. ನೀಡಲಾಗಿದೆ. ನೀರು ಪೂರೈಸುವ ಟ್ಯಾಂಕರ್ ಗಳು ಸಾರ್ವಜನಿಕರಿಂದ ಮಿತಿ ಮೀರಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಸಹಾಯವಾಗುವ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರವೇ ನೀರಿನ ಟ್ಯಾಂಕರ್‌ಗಳಿಗೆ ಬೆಲೆ ನಿಗದಿ:
ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರ ವಲಯದಲ್ಲಿ ನೀರಿನ ಮಾಫಿಯಾ ಆರಂಭವಾಗಿತ್ತು. ಕಾವೇರಿ ಕುರಿಯುವ ನೀರು ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಯ ಉಂಟಾದರೂ ಅದರಿಂದ ದೊಡ್ಡ ಲಾಭವನ್ನೇ ಮಾಡಿಕೊಳ್ಳುವ ಟ್ಯಾಂಕರ್ ಮಾಲೀಕರು ತಮಗೆ ತೋಚಿದ ಬೆಲೆಯನ್ನು ನಿಗದಿ ಮಾಡಿ ಸಾರ್ವಜನಿಕರಿಂದ ಭಾರಿ ಹಣವನ್ನು ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ನೀರಿನ ಟ್ಯಾಂಕರ್‌ಗಳಿಗೆ ಬೆಲೆ ನಿಗದಿ ಮಾಡುವಂತೆ ಸರ್ಕಾರಕ್ಕೆ ಬೆಂಗಳೂರು ನಿವಾಸಿಗಳು ಮನವಿ ಮಾಡಿದ್ದರು. ಆದ್ದರಿಂದ, ಬಿಬಿಎಂಪಿ ನೇತೃತ್ವದಲ್ಲಿ ಸಭೆ ಮಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿರುವ ಎಲ್ಲ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಸಿಕೊಳ್ಳಿ. ನಂತರ ನೀರಿನ ಟ್ಯಾಂಕರ್ ಮಾಲೀಕರೊಂದಿಗೆ ಚರ್ಚೆ ಮಾಡಿ ದರ ನಿಗದಿ ಮಾಡೋಣ ಎಂದು ತಿಳಿಸಿದ್ದರು.

ನೀರಿನ ದಾಹ ತಣಿಸಲು ಕಂದಾಯ ಇಲಾಖೆ ಮುಂದು; 7000 ಬೋರ್ವೆಲ್‌ ಗುರುತು

ನೋಂದಣಿ ಮಾಡಿಸದ ಟ್ಯಾಂಕರ್‌ಗಳು ವಶಕ್ಕೆ: ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಮಾ.7ರ ಒಳಗಾಗಿ ನೋಂದಣಿ ಮಾಡಿಸದೇ ಹೋದಲ್ಲಿ ಅವುಗಳನ್ನು ನೀರು ಸರಬರಾಜು ಮಾಡಲು ಬಳಸುವಂತಿಲ್ಲ. ಒಂದು ವೇಳೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳದ ಯಾವುದೇ ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಿದಲ್ಲಿ ಅವುಗಳನ್ನು ಜಪ್ತಿ ಮಾಡಲಾಗುವುದು. ಈ ಬಗ್ಗೆ ಟ್ರಾಫಿಕ್ ಪೊಲೀಸರು, ಬಿಬಿಎಂಪಿ, ಜಲಮಂಡಳಿ ಇಲಾಖೆಯಿಂದಲೂ ನಿಗಾವಹಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದರು.

Follow Us:
Download App:
  • android
  • ios