Asianet Suvarna News Asianet Suvarna News

ಬೆಂಗಳೂರಲ್ಲಿ ವಾಣಿಜ್ಯೋದ್ಯಮಗಳ ಮೇಲೆ ಶೇ.60 ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಕೆಗೆ 2 ವಾರ ಗಡುವು ವಿಸ್ತರಣೆ

ಬೆಂಗಳೂರಿನ ಎಲ್ಲ ವಾಣಿಜ್ಯೋಮಗಳ ಮುಂದೆ ಶೇ.60 ಕನ್ನಡ ಭಾಷೆ ನಾಮಫಲಕ ಅಳವಡಿಕೆಗೆ ನೀಡಿದ್ದ ಕಾಲವಕಾಶವನ್ನು (ಫೆ.28ರಿಂದ ಮಾ.14ರವರೆಗೆ) ವಿಸ್ತರಣೆ  ಮಾಡಿ ಸಚಿವ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.

Bengaluru All commercial establishment kannada name board installation period extend to march 14 sat
Author
First Published Feb 29, 2024, 10:56 AM IST

ಬೆಂಗಳೂರು (ಫೆ.29): ಬೆಂಗಳೂರಿನ ಎಲ್ಲ ಅಂಗಡಿ, ಮುಂಗಟ್ಟು, ಹೋಟೆಲ್, ಆಸ್ಪತ್ರೆ, ಶಾಪಿಂಗ್ ಮಾಲ್ ಸೇರಿದಂತೆ ವಾಣಿಜ್ಯೋಮಗಳ ಮುಂದೆ ಶೇ.60 ದೊಡ್ಡದಾದ ಕನ್ನಡ ನಾಮಫಲಕ ಅಳವಡಿಕೆಗೆ ನೀಡಿದ್ದ ಕಾಲವಕಾಶ (ಫೆ.28ರಿಂದ ಮಾ.14ರವರೆಗೆ) ವಿಸ್ತರಣೆಯನ್ನು ಮಾಡಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿಕೊಂಡಿದ್ದು, "ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು‌ ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ‌ ಕಾಲ ವಿಸ್ತರಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲ ವಾಣಿಜ್ಯೋದ್ಯಮಿಗಳಿಗೆ ಕಾಲಾವಕಾಶ ನೀಡಿದ್ದಾರೆ. 

ಬೆಂಗಳೂರಲ್ಲಿ ನಿಮ್ಮ ವಾಣಿಜ್ಯ ಮಳಿಗೆಗೆ ಕನ್ನಡ ನಾಮಫಲಕ ಹಾಕಿಲ್ವಾ..? ಬಿಬಿಎಂಪಿಯವರು ನಾಳೆಯೇ ಅಂಗಡಿ ಮುಚ್ಚಿಸ್ತಾರೆ!

ರಾಜ್ಯ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಯನ್ನು ಎಲ್ಲರೂ ಗೌರವಿಸುವ ನಿಟ್ಟಿನಲ್ಲಿ ವಾಣಿಜ್ಯೋದ್ಯಮಗಳ ಮುಂದೆ ಶೇ.60 ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಕೆ ಮಾಡಲು ಫೆ.28 ಕೊನೆಯ ದಿನವಾಗಿತ್ತು. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಉದ್ಯಮಗಳು, ಟ್ರಸ್ಟ್‌ಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಸೇರಿ ಎಲ್ಲ ಮಾದರಿಯ ವಾಣಿಜ್ಯಾತ್ಮಕ ಕಟ್ಟಡಗಳ ನಾಮಫಲಕಗಳಲ್ಲಿ ಶೇ.60ರಷ್ಟು ದೊಡ್ಡದಾಗಿ ಕನ್ನಡ ಭಾಷೆ ಪ್ರದರ್ಶಿಸದ ಫಲಕ ಅಳವಡಿಸಬೇಕು. ಇಲ್ಲದಿದ್ದರೆ ನಾಳೆಯಿಂದ (ಫೆ.29ರಿಂದ) ಕನ್ನಡ ನಾಮಫಲಕ ಅಳವಡಿಸದ ಎಲ್ಲ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸುವ ಜೊತೆಗೆ, ಬೀಗ ಹಾಕಿ ಕ್ಲೋಸ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು.

ಮುಂದುವರೆದು ಫೆ.29ರಿಂದ ಅನ್ವಯವಾಗುವಂತೆ, ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳನ್ನು ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಿಗೆಗಳನ್ನು(Trade License Cancel) ಅಮಾನತ್ತುಗೊಳಿಸಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳನ್ನು ಬೀಗಮುದ್ರೆ (Seal down) ಮಾಡಲು ಆರೋಗ್ಯ ಇಲಾಖಾ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದರು. ಆದರೆ, ಈಗ 2 ವಾರಗಳ ಗಡುವಿ ವಿಸ್ತರಣೆ ಮಾಡಲಾಗಿದ್ದು, ಪಾಲಿಕೆ ಅಧಿಕಾರಿಗಳ ದಾಳಿ ಮುಂದೂಡಿಕೆಯಾಗಿದೆ.

ಶೇ.60 ಕನ್ನಡ ನಾಮಫಲಕ ಜಾರಿಗೆ 3 ದಿನ ಬಾಕಿ; ಇನ್ನೂ ಇವೆ ಅನ್ಯ ಭಾಷೆ ಫಲಕಗಳು!

ಮುಂದೂಡಿಕೆ ಆಗುವುದೇ ಮಾ.5ರ ಕರವೇ ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಕಳೆದ ಎರಡು ತಿಂಗಳ ಹಿಂದೆ (ಡಿ.27ರಂದು) ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ದೊಡ್ಡ ಹೋರಾಟ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಶೇ.60 ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಕೆಗೆ ಸರ್ಕಾರ ಆದೇಶ ಹೊರಡಿಸಿದೆ. ಈಗ ಫೆ.28ಕ್ಕೆ ಗಡುವು ಮುಗಿದಿದ್ದರೂ 3 ಸಾವಿರಕ್ಕೂ ಅಧಿಕ ಮಳಿಗೆಗಳ ಮಾಲೀಕರು ನಾಮಫಲಕ ಅಳವಡಿಕೆ ಮಾಡದಿರುವುದು ಕಂಡುಬಂದಿತ್ತು. ಇವರ ಮೇಲೆ ಬಿಬಿಎಂಪಿ ಕ್ರಮ ಕೈಗೊಳ್ಳದಿದ್ದರೆ ಮಾ.5ರಂದು ಬಿಬಿಎಂಪಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡುವುದಾಗಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದರು. ಈಗ ಪುನಃ ಗಡುವು ವಿಸ್ತರಣೆಯಾದ ಹಿನ್ನೆಲೆಯಲ್ಲಿ ಕರವೇ ಪ್ರತಿಭಟನೆ ಕೂಡ ಮುಂದೂಡಿಕೆ ಆಗುವ ಸಾಧ್ಯತೆಯಿದೆ.

Follow Us:
Download App:
  • android
  • ios