Asianet Suvarna News Asianet Suvarna News

ಬಿಬಿಎಂಪಿಯ 62 ವಾರ್ಡ್‌ಗಳು ಡೆಂಘೀ ಪೀಡಿತ!

ನಗರದ 62 ವಾರ್ಡ್‌ಗಳು ಡೆಂಘೀ ಪೀಡಿತ!| ಕೇಂದ್ರ ಭಾಗದ 30 ವಾರ್ಡ್‌ಗಳಲ್ಲಿ ಹೆಚ್ಚು ಡೆಂಘೀ ಸಮಸ್ಯೆ| ನಗರದಲ್ಲಿ 4 ಸಾವಿರ ಮಂದಿಗೆ ಡೆಂಘೀ| ಜಾಗೃತಿಗೆ ಮುಂದಾದ ಬಿಬಿಎಂಪಿ

Bengaluru 62 Wards Of BBMP affected by Dengue
Author
Bangalore, First Published Aug 5, 2019, 8:42 AM IST
  • Facebook
  • Twitter
  • Whatsapp

-ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ಆ.05]: ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ ಅತಿ ಹೆಚ್ಚು ಡೆಂಘೀ ಪ್ರಕರಣಗಳ ವರದಿಯಾದ ‘62 ವಾರ್ಡ್‌ಗಳನ್ನು ‘ಡೆಂಘೀ ಪೀಡಿತ ವಾರ್ಡ್‌’ ಎಂದು ಗುರುತಿಸಲಾಗಿದ್ದು, ಈ ಪೈಕಿ 30 ವಾರ್ಡ್‌ಗಳು ನಗರದ ಕೇಂದ್ರ ಭಾಗದಲ್ಲಿರುವ ವಾರ್ಡ್‌ಗಳಾಗಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.

ಈವರೆಗೆ ಬಿಬಿಎಂಪಿ ವ್ಯಾಪ್ತಿಯ ಸುಮಾರು ನಾಲ್ಕು ಸಾವಿರ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಮಾರಕರೋಗ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಡೆಂಘೀ ಪ್ರಕರಣ ವರದಿಯಾದ 62 ವಾರ್ಡ್‌ಗಳನ್ನು ‘ಡೆಂಘೀ ಪೀಡಿತ ವಾರ್ಡ್‌’ಗಳೆಂದು ಪಾಲಿಕೆ ಆರೋಗ್ಯವಿಭಾಗದ ಗುರುತಿಸಿ ಕ್ರಮಕ್ಕೆ ಮುಂದಾಗಿದೆ.

ಎಂಟು ವಲಯಗಳ ಪೈಕಿ ಪೂರ್ವ, ಪಶ್ಚಿಮ, ದಕ್ಷಿಣ, ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ತಲಾ 10 ವಾರ್ಡ್‌ಗಳು ಡೆಂಘೀ ಪೀಡಿತ ಪಟ್ಟಿಯಲ್ಲಿವೆ. ಉಳಿದ ಮೂರು ವಲಯಗಳಾದ ಆರ್‌.ಆರ್‌.ನಗರ, ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ ಒಟ್ಟು 12 ವಾರ್ಡ್‌ಗಳು ಡೆಂಘೀ ಪೀಡಿತ ವಾರ್ಡ್‌ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ. ಈ ಮೂಲಕ ನಗರ ಕೇಂದ್ರ ಭಾಗದಲ್ಲೇ ಹೆಚ್ಚಿನ ಡೆಂಘೀ ಪ್ರಕರಣಗಳು ದಾಖಲಾಗುತ್ತಿರುವುದು ಕಂಡು ಬರುತ್ತಿದೆ.

ಸಿಟಿ ಕೇಂದ್ರವೇ ಡೆಂಘೀ ವಾಸ ಸ್ಥಾನ:

ಡೆಂಘೀ ಸೋಂಕು ತರುವ ಸೊಳ್ಳೆ (ಲಾರ್ವಾ) ಉತ್ಪತ್ತಿಯಾಗುವುದೇ ಮನೆ ಮತ್ತು ಮನೆಯ ಸುತ್ತಮುತ್ತದಲ್ಲಿ ನಿಂತಿರುವ, ಸಂಗ್ರಹಿಸಲಾಗಿರುವ ನೀರಿನಲ್ಲಿ. ಹಾಗಾಗಿ, ನಗರದ ಕೇಂದ್ರಭಾಗ ಮತ್ತು ಜನವಸತಿ ಪ್ರದೇಶಗಳೇ ಡೆಂಘೀ ವಾಸಸ್ಥಾನವಾಗಿದ್ದು, ಅತಿ ಹೆಚ್ಚು ಡೆಂಘೀ ಪ್ರಕರಣಗಳು ಈ ಭಾಗದಲ್ಲಿಯೇ ಪತ್ತೆಯಾಗುತ್ತಿವೆ. ಹೆಚ್ಚು ಡೆಂಘೀ ಪ್ರಕರಣಗಳು ವರದಿಯಾಗಿರುವ ವಾರ್ಡ್‌ಗಳಲ್ಲಿ ನಿಯಂತ್ರಣಕ್ಕೆ ಮೊದಲ ಅದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಲಿಂಕ್‌ ವರ್ಕ​ರ್‍ಸ್, ಅಂಗನವಾಡಿ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಮನೆ- ಮನೆಗೆ ಭೇಟಿ ನೀಡಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಲಾರ್ವಾ ನಾಶ ಪಡಿಸುವ ಔಷಧಿ ಸಿಂಪಡಿಸಲಾಗುತ್ತಿದೆ. ತ್ಯಾಜ್ಯ ಸಂಗ್ರಹಿಸುವ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶತಕದ ಗಡಿದಾಟಿದ ಎಂಟು ವಾರ್ಡ್‌:

ಅತಿ ಹೆಚ್ಚು ಡೆಂಘೀ ಪೀಡಿತ 62 ವಾರ್ಡ್‌ಗಳ ಪೈಕಿ 8 ವಾರ್ಡ್‌ಗಳಲ್ಲಿ ತಲಾ ನೂರಕ್ಕಿಂತ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿವೆ. ಪೂರ್ವ ವಲಯದ ಹೊಯ್ಸಳನಗರ ವಾರ್ಡ್‌ನಲ್ಲಿ ಅತಿ ಹೆಚ್ಚು 213, ನ್ಯೂತಿಪ್ಪಸಂದ್ರ ವಾರ್ಡ್‌ನಲ್ಲಿ 186, ಬಿನ್ನಿಗಾನಹಳ್ಳಿ 163, ಜೀವನ್‌ಭೀಮಾನಗರ ವಾರ್ಡ್‌ನಲ್ಲಿ 141, ಸಿ.ವಿ.ರಾಮನ್‌ನಗರ ವಾರ್ಡ್‌ನಲ್ಲಿ 129, ದಕ್ಷಿಣ ವಲಯದ ಕೋರಮಂಗಲ ವಾರ್ಡ್‌ನಲ್ಲಿ 146, ಮಡಿವಾಳ ವಾರ್ಡ್‌ನಲ್ಲಿ 112 ಹಾಗೂ ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌ನಲ್ಲಿ 159 ಡೆಂಘೀ ಪ್ರಕರಣ ಪತ್ತೆಯಾದ ವರದಿಯಾಗಿದೆ.

ನಗರದಲ್ಲಿ ಬಿಟ್ಟು-ಬಿಟ್ಟು ಮಳೆ ಬರುತ್ತಿರುವುದರಿಂದ ಡೆಂಘೀ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಸಾರ್ವಜನಿಕರು ಮನೆಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕಳೆದ ಜುಲೈ ಮೊದಲ ವಾರದಲ್ಲಿ 641 ಡೆಂಘೀ ಪ್ರಕರಣ ಪತ್ತೆಯಾಗಿದ್ದವು, ನಿಯಂತ್ರಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜುಲೈ ಅಂತ್ಯಕ್ಕೆ 301ಕ್ಕೆ ಇಳಿಕೆ ಆಗಿವೆ.

-ಬಿ.ಕೆ.ವಿಜಯೇಂದ್ರ, ಮುಖ್ಯಆರೋಗ್ಯಾಧಿಕಾರಿ, ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗ

ಡೆಂಘೀ ಪ್ರಕರಣದ ವಿವರ (ಜನವರಿಯಿಂದ ಜುಲೈ ಅಂತ್ಯ)

ವಲಯ ಡೆಂಘೀ ಪ್ರಕರಣ(2019) ಡೆಂಫೀ ಪ್ರಕರಣ(2018)
ಪೂರ್ವ 1,538 233
ಮಹದೇವಪುರ 632 66
ದಕ್ಷಿಣ 628 99
ಬೊಮ್ಮನಹಳ್ಳಿ 469 67
ಆರ್‌.ಆರ್‌.ನಗರ 226 22
ಪಶ್ಚಿಮ 263 55
ಯಲಹಂಕ 149 10
ದಾಸರಹಳ್ಳಿ 89 3
ಒಟ್ಟು 3,994 555
Follow Us:
Download App:
  • android
  • ios