* ಎಸ್ಸಿ-ಎಸ್ಟಿ, ಅರ್ಹ 8927 ಮಂದಿಗೆ ಮನೆ ನಿರ್ಮಿಸಲು ಬಿಬಿಎಂಪಿ ಕಾರ್ಯಾದೇಶ* ಪ್ರತಿಯೊಬ್ಬರಿಗೆ 5 ಲಕ್ಷದವರಗೆ ಅನುದಾನ* 4 ವರ್ಷದಿಂದ ಹಣ ನೀಡದ ಬಿಬಿಎಂಪಿ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮಾ.31): ಬಿಬಿಎಂಪಿ(BBMP) ಅಧಿಕಾರಿಗಳ ಬೇಜಾಬ್ದಾರಿಯಿಂದ ಕಳೆದ ನಾಲ್ಕು ವರ್ಷದಿಂದ ಫಲಾನುಭವಿಗಳು(Beneficiaries) ಮನೆ ಕಟ್ಟಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮದಡಿ ಎಸ್ಸಿ, ಎಸ್ಟಿ ಹಾಗೂ ಅರ್ಹ ಫಲಾನುಭವಿಗಳಿಗೆ ಜಂಟಿ ಮನೆ(Home) ನಿರ್ಮಿಸಲು .5 ಲಕ್ಷ ದವರೆಗೆ ಸಹಾಯಧನ ನೀಡಲಾಗುತ್ತದೆ. 2018-19ರಿಂದ ಆಯ್ಕೆಯಾದ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, ಬಡವರ(Poor) ಮನೆ ಕಟ್ಟುವ ಕನಸು ಅರ್ಧಕ್ಕೆ ನಿಂತುಹೋಗಿದೆ. ಇನ್ನು ಇರುವ ಅಲ್ಪ ಸ್ವಲ್ಪ ಹಣವನ್ನು ಮನೆ ಕಟ್ಟಲು ಹೂಡಿಕೆ ಮಾಡಿದ ಬಡವರು ಬರಿಗೈನಲ್ಲಿ ನಿಂತು ಬಿಬಿಎಂಪಿ ಕಚೇರಿ ಎಡತಾಕುವಂತಾಗಿದೆ.
ನಾಲ್ಕು ವರ್ಷದಲ್ಲಿ 5,019 ಎಸ್ಸಿ-ಎಸ್ಟಿ ಹಾಗೂ 3,908 ಸಾಮಾನ್ಯರು ಸೇರಿದಂತೆ ಒಟ್ಟು 8,927 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣಕ್ಕೆ ಕಾರ್ಯಾದೇಶವನ್ನೂ ನೀಡಲಾಗಿದೆ. ಅದಕ್ಕಾಗಿ ಪ್ರತಿ ವರ್ಷ ಬಿಬಿಎಂಪಿ ಆಯವ್ಯಯದಲ್ಲಿಯೂ ಕೋಟ್ಯಂತರ ರುಪಾಯಿ ಅನುದಾನ(Grants) ಮೀಸಲಿಡಲಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಕಲ್ಯಾಣ ವಿಭಾಗದ ಪೋರ್ಟಲ್ ಸಮಸ್ಯೆಯ ನೆಪ ಒಡ್ಡಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.
BBMP Budget: ಶಾಸಕರ ಒತ್ತಡಕ್ಕೆ ಅಡ್ಡಕತ್ತರಿಯಲ್ಲಿ ಪಾಲಿಕೆ ಬಜೆಟ್!
ಆರ್‌ಜಿಆರ್‌ಎಚ್‌ಸಿಎಲ್ ಮಾದರಿ
ಕಳೆದ ಒಂದೂವರೆ ವರ್ಷದಿಂದ ಹಿಂದೆ ಜಂಟಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (ಆರ್‌ಜಿಆರ್‌ಎಚ್‌ಸಿಎಲ್) ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫೋಟೋ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಸಲ್ಲಿಸುವುದು ಕಡ್ಡಾಯಗೊಳಿಸಿ ಬಿಬಿಎಂಪಿ ಹಣಕಾಸು ವಿಭಾಗದಿಂದ ಆದೇಶಿಸಲಾಯಿತು. ಅದರಂತೆ ಬಿಬಿಎಂಪಿ ಐಟಿ ವಿಭಾಗದಿಂದ ಕಲ್ಯಾಣ ವಿಭಾಗದ ಫೋರ್ಟಲ್ ಅಭಿವೃದ್ಧಿ ಪಡಿಸಲಾಯಿತು. ಆದರೆ, ಈ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ವಲಯ ಕಚೇರಿ ಹಾಗೂ ಉಪ ವಲಯದಿಂದ ಬಡವರು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳಿಂದ ದುರುಪಯೋಗ?
ಪೋರ್ಟಲನ್ನು ಬಿಬಿಎಂಪಿ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅವರಿಗೆ ಬೇಕಾದ ಸಂದರ್ಭದಲ್ಲಿ ಫೋಟೋ ಮತ್ತು ಇನ್ನಿತರ ದಾಖಲೆ(Documentation) ಸಲ್ಲಿಕೆಗೆ ಫೋರ್ಟಲ್ ಸರಿಪಡಿಸಿಕೊಳ್ಳಲಾಗುತ್ತದೆ. ಉಳಿದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುವಂತೆ ಮಾಡಲಾಗುತ್ತಿದೆ. ಅಲ್ಲದೇ ಜೇಷ್ಠತೆ ಮೀರಿ ಹಣ ಪಾವತಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಶೇ.50 ಅನುದಾನ ಬಿಡುಗಡೆ
2018ರಿಂದ 2022ರ ವರೆಗೆ ಒಟ್ಟು .492.08 ಕೋಟಿ ಅನುದಾನವನ್ನು ಒಂಟಿ ಮನೆ ಯೋಜನೆಗೆ ಮೀಸಲಿಡಲಾಗಿದೆ. ಈ ವರೆಗೆ .246.56 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಇನ್ನೂ .245.52 ಕೋಟಿ ಅನುದಾನವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡುವುದು ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021-22 ಸಾಲಿನಲ್ಲಿ ಕೇವಲ 4 ಜಂಟಿ ಮನೆಗೆ ಅನುದಾನ!
ಬಿಬಿಎಂಪಿಯಲ್ಲಿ ಚುನಾಯಿತ ಸದಸ್ಯರ ಅಧಿಕಾರವ ಅವಧಿಯಲ್ಲಿ ಪ್ರತಿವರ್ಷ ಸಾವಿರಾರು ಎಸ್ಸಿ-ಎಸ್ಟಿಹಾಗೂ ಸಾಮಾನ್ಯ ವರ್ಗದ ವಸತಿ ರಹಿತರಿಗೆ ಸಾವಿರಾರು ಜಂಟಿ ಮನೆ ಮಂಜೂರು ಮಾಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಿಂದ ಪಾಲಿಕೆಯಲ್ಲಿ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಈ ಅವಧಿಯಲ್ಲಿ ಎಸ್ಸಿ-ಎಸ್ಟಿಗೆ 3 ಹಾಗೂ ಸಾಮಾನ್ಯ ವರ್ಗದ ಒಬ್ಬ ವ್ಯಕ್ತಿಗೆ ಮಾತ್ರ ಪಾಲಿಕೆಯಿಂದ ವಸತಿ ಮಂಜೂರಾಗಿದೆ.
ಮನೆ ಮಂಜೂರು ವಿವರ
Bengaluru: ಬಿಡಿಎಯಿಂದ ಇನ್ನೊಂದು ವಿಲ್ಲಾ ಪ್ರಾಜೆಕ್ಟ್..!
ವರ್ಷ ಎಸ್ಸಿ-ಎಸ್ಟಿ ಸಾಮಾನ್ಯ
2018-19 1,921 1,460
2019-20 2,611 1,765
2020-21 484 682
2021-22 3 1
ಒಟ್ಟು 5,019 3,908
ಬಿಬಿಎಂಪಿಯಿಂದ ಮನೆ ಮಂಜೂರಾತಿ ದೃಢಪಟ್ಟಹಿನ್ನೆಲೆಯಲ್ಲಿ ಹಳೆ ಮನೆ ಕೆಡವಿ ತಾತ್ಕಾಲಿಕವಾಗಿ ಬಾಡಿಗೆ ಮನೆ ಹೋದ ಬಡವರಿಗೆ ನಾಲ್ಕು ವರ್ಷ ಕಳೆದರೂ ಮನೆ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಪಾಲಿಕೆ ಅಧಿಕಾರಿಗಳಿಗೆ ಬಡವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಅಂತ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ತಿಳಿಸಿದ್ದಾರೆ.
ಜಂಟಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ ಅನುಸರಿಸುವ ಮಾದರಿಯನ್ನು ಜಾರಿಗೊಳಿಸಲಾಗಿದೆ. ಹೀಗಾಗಿ, ಪ್ರತಿ ಮನೆಯ ಫೋಟೋ, ದಾಖಲೆ ಸಲ್ಲಿಸಿದಂತೆ ಹಣ ಬಿಡುಗಡೆಯಾಗಲಿದೆ. ಈ ವರ್ಷ .160 ಕೋಟಿ ಬಿಡುಗಡೆ ಮಾಡಲಾಗಿದೆ ಅಂತ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ತುಳಸಿ ಮದ್ದಿನೇನಿ ಹೇಳಿದ್ದಾರೆ.
