*  ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತಿಗಾಗಿ ಸರ್ಕಾರದಿಂದ ಕಾಯ್ದೆ ಜಾರಿ*  ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲು ಶಾಸಕರು ಸಚಿವರಿಂದ ಒತ್ತಡ*  ಅತ್ತ ಜನಪ್ರತಿನಿಧಿಗಳ ಮಾತು ಮೀರುವಂತಿಲ್ಲ, ಇತ್ತ ನಿಯಮಕ್ಕೆ ಧಕ್ಕೆ ತರುವಂತಿಲ್ಲ 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.31):  ಶಾಸಕರು ಹಾಗೂ ಸಚಿವರ ಒತ್ತಡದಿಂದಾಗಿ ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ(BBMP Budget) ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಹಾದಿ ತಪ್ಪುವ ಸಾಧ್ಯತೆಯಿದೆಯೇ? ಬಿಬಿಎಂಪಿ ಅಧಿಕಾರ ವಲಯದಲ್ಲಿ ಇಂತಹದೊಂದು ಚರ್ಚೆ ಶುರುವಾಗಿದೆ. ಆದಾಯಕ್ಕೆ ತಕ್ಕಂತೆ ಬಜೆಟ್‌ ರೂಪಿಸುವುದರೊಂದಿಗೆ ಅನಗತ್ಯ ಯೋಜನೆಗಳ ಘೋಷಣೆಗೆ ಕಡಿವಾಣ ಹಾಕುವುದರೊಂದಿಗೆ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಲು ರಾಜ್ಯ ಸರ್ಕಾರ(Government of Karnataka) ‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ-2021’(ಎಫ್‌ಆರ್‌ಬಿಎಂ) ಜಾರಿಗೊಳಿಸಿದೆ.

ಅದರಂತೆ ಬಿಬಿಎಂಪಿ ಅಧಿಕಾರಿಗಳು ಸುಮಾರು 9 ಸಾವಿರ ಕೋಟಿ ಮೊತ್ತದ ವಾಸ್ತವಿಕ ಬಜೆಟ್‌ ರೂಪಿಸಿದ್ದರು. ಈ ನಡುವೆ ನಗರದ ಶಾಸಕರು ಮತ್ತು ಸಚಿವರು ಕೆಲವು ಯೋಜನೆ ಮತ್ತು ಕಾಮಗಾರಿಗಳನ್ನು ಬಜೆಟ್‌ನಲ್ಲಿ ಅವಳವಡಿಸಿ ಘೋಷಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳ ಮನವಿಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಂದು ಅವರ ಮನವಿಯಂತೆ ಕಾಮಗಾರಿಗಳು ಮತ್ತು ಯೋಜನೆಯನ್ನು ಘೋಷಿಸುವಂತಿಲ್ಲ. ಒಂದು ವೇಳೆ ಘೋಷಿಸಿದರೆ ಎಫ್‌ಆರ್‌ಬಿಎಂ ಉಲ್ಲಂಘನೆಯಾಗಲಿದೆ. ಹೀಗಾಗಿ, ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಮಾಡುವುದು ಕಷ್ಟಸಾsಧ್ಯ ಎಂಬ ಭಾವನೆ ಅಧಿಕಾರಗಳದ್ದು.

ಬಿಬಿಎಂಪಿ ಬಜೆಟ್‌ ಮುಂದೂಡಿಕೆ: ಏಕಾಏಕಿ ನಿರ್ಧಾರಕ್ಕೆ ಸರ್ಕಾರದ ಕಿಡಿ

ಪ್ರಮುಖ ಒತ್ತಡಗಳೇನು?:

ಚುನಾವಣಾ(Election) ವರ್ಷವಾಗಿರುವುದರಿಂದ ಆಡಳಿತರೂಢ ಪಕ್ಷದ ಶಾಸಕರು, ಸಚಿವರು ಇರುವ ಕ್ಷೇತ್ರಗಳಿಗೆ ಬಿಬಿಎಂಪಿ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಬಿಬಿಎಂಪಿಯ ಕಸ ಸುರಿಯುವ ಕ್ವಾರಿ ಅಕ್ಕ-ಪಕ್ಕದ ಗ್ರಾಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ(Grants) ಮೀಸಲಿಡಬೇಕು. ಜನರಿಗೆ ವಿಶೇಷ ಯೋಜನೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಜನಪ್ರತಿನಿಧಿಗಳು ಪಾಲಿಕೆ ಅಧಿಕಾರಿಗಳ ಮುಂದಿಟ್ಟಿದ್ದಾರೆ.

ಅಧಿಕಾರಿಗಳಿಂದ ಮಾಸ್ಟರ್‌ ಫ್ಲಾನ್‌:

ಕಾಯ್ದೆ ಉಲ್ಲಂಘನೆ ಆಗದಂತೆ ಬಜೆಟ್‌ ಗಾತ್ರ ಹೆಚ್ಚಿಸುವುದು ಹಾಗೂ ಶಾಸಕರು ಮತ್ತು ಸಚಿವರು ಮನವಿಯಂತೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸುವುದಕ್ಕೆ ಅಧಿಕಾರಿಗಳು ಮಾಸ್ಟರ್‌ ಫ್ಲಾನ್‌ ಮಾಡಿದ್ದಾರೆ. ಮುಖ್ಯವಾಗಿ ಪಾಲಿಕೆಗೆ ಹೆಚ್ಚುವರಿ ಆದಾಯದ ಮೂಲ ತೋರಿಸುವುದು. ಸರ್ಕಾರದಿಂದ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಯೋಜನೆ ಕಾರ್ಯಗತಗೊಳಿಸುವುದು ಮತ್ತು ಪಾಲಿಕೆ ನೇರವಾಗಿ ಸಾಲ ಪಡೆದು ಕಾಮಗಾರಿ ನಡೆಸುವುದು ಒಳಗೊಂಡದಂತೆ ಕಂದಾಯ ಸ್ವೀಕೃತಿಗೆ ಪರಿಗಣಿಸದ ಆದಾಯ ತೋರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

3,500 ಕೋಟಿ ಬಿಲ್‌ ಬಾಕಿ

ಈ ಹಿಂದಿನ ವರ್ಷದಲ್ಲಿ ಬಿಬಿಎಂಪಿ ಅದಾಯಕ್ಕಿಂತ ಹೆಚ್ಚಿನ ಮೊತ್ತದ ಬಜೆಟ್‌ ಘೋಷಣೆ ಮಾಡಿಕೊಂಡು ಕೈಗೊಂಡ ಕಾಮಗಾರಿಯಿಂದ ಗುತ್ತಿಗೆದಾರರಿಗೆ ಸುಮಾರು .3,500 ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಇದಲ್ಲದೇ 7ರಿಂದ 8 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಜಾಬ್‌ ಕೋಡ್‌ ನೀಡಲಾಗಿದೆ. ಈ ಪೈಕಿ .4,200 ಕೋಟಿ ಮೊತ್ತದ ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ.

BBMP ಬಜೆಟ್‌ಗೆ ಸರ್ಕಾರ ಮೂಗುದಾರ

ಯುಗಾದಿ ಬಳಿಕ ಬಜೆಟ್‌ ಮಂಡನೆ?

ಮಾ.30ರ ಬುಧವಾರ 2022-23ನೇ ಸಾಲಿನ ಬಜೆಟ್‌ ಮಂಡಿಸಲು ಅಂತಿಮ ತೀರ್ಮಾನ ಕೈಗೊಂಡು ಪುಸ್ತಕ ಮುದ್ರಣಕ್ಕೂ ಅನುಮತಿ ನೀಡಲಾಗಿತ್ತು. ಜತೆಗೆ, ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಚಿವರು ತಾತ್ಕಾಲಿಕವಾಗಿ ಬಜೆಟ್‌ಗೆ ತಡೆಯೊಡ್ಡಿದ ಪರಿಣಾಮ ಯುಗಾದಿ ಹಬ್ಬದ ನಂತರ ಮಂಡಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ತುರ್ತು ವೆಚ್ಚಕ್ಕೆ ಅನುಮತಿಗಾಗಿ ಪ್ರಸ್ತಾವನೆ

ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಂದ ಮುಖ್ಯ ಆಯುಕ್ತರ ವರೆಗೆ ಸುಮಾರು 30 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ವೇತನ, ಕಚೇರಿಗಳ ನಿರ್ವಹಣೆ, ತುರ್ತು ಸಂದರ್ಭದ ವೆಚ್ಚಗಳು ಹಾಗೂ ವಾಹನಗಳಿಗೆ ಇಂಧನ ಪೂರೈಕೆ ಸೇರಿ ಇತರೆ ದೈನಂದಿನ ಕಾರ್ಯಗಳಿಗೆ ಖರ್ಚು ಮಾಡಲು ಪಾಲಿಕೆಗೆ ಅಧಿಕಾರ ಇರುವುದಿಲ್ಲ. ಹೀಗಾಗಿ, ಬಜೆಟ್‌ ಮಂಡನೆ ದಿನದವರೆಗೆ ಪಾಲಿಕೆಯ ಎಲ್ಲ ಖರ್ಚು ವೆಚ್ಚಗಳಿಗೆ ವಿಶೇಷ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇನ್ನು ಬಜೆಟ್‌ ಮಂಡನೆ ನಂತರ ಸರ್ಕಾರದ ಅನುಮತಿ ದೊರೆಯುವುದು ಮತ್ತಷ್ಟುವಿಳಂಬ ಆಗಲಿದ್ದು, ಶೇ.25 ಅನುದಾನ ಬಳಕೆಗೆ ಲೇಖಾನುದಾನ ಪಡೆಯುವ ಸಾಧ್ಯತೆಯಿದೆ.