8 ತಿಂಗಳ ಹಿಂದೆ ನಡೆದಿದ್ದ ಕೊಲೆ ಕೇಸ್ ಒಂದನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಹಾಸನ (ಅ.15): ಕುಡಿದ ಮತ್ತಿನಲ್ಲಿ ಭಿಕ್ಷುಕನ ಮೇಲೆ ಹಲ್ಲೆ ಮಾಡಿ ನಂತರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಜಿಲ್ಲೆಯ ಬಾಣಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 8 ತಿಂಗಳ ಹಿಂದೆ ಸುಟ್ಟಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಬೇಲೂರು ವೃತ್ತದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ ಗೌಡ ತಿಳಿಸಿದರು.

ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ ...

ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ರ ಜನವರಿ 6 ರಂದು ಮದ್ಯಾಹ್ನ 2 ಗಂಟೆಯ ಸಮಯದಲ್ಲಿ ಅರೆಕೆರೆ ಗ್ರಾಮದ ಬಳಿ ಬಾಣಾವರ- ಜಾವಗಲ್‌ ಮುಖ್ಯ ರಸ್ತೆಯ ಎಡ ಬದಿಯ ಹಳ್ಳದಲ್ಲಿ ಸುಮಾರು 25 ರಿಂದ 30 ವರ್ಷದ ಅಪರಿಚಿತ ಗಂಡಸಿನ ಶವ ಸುಟ್ಟಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಂಗಾತವಾಗಿ ಬಿದ್ದಿದ್ದು, ಕುತ್ತಿಗೆಯಲ್ಲಿ ಯಾವುದೊ ವಾಹನದ ಟೈರುಗಳನ್ನು ಹಾಕಿ ದೇಹವನ್ನು ಇಟ್ಟಿದ್ದು, ತಲೆಯು ಪೂರ್ತಿ ಬೆಂದು ಹೋಗಿತ್ತು. ಪಕ್ಕದಲ್ಲಿ ಎರಡು ಪ್ಲಾಸ್ಟಿಕ್‌ ಬಾಟಲ್‌ಗಳು ಮತ್ತು ಒಂದು ಬೆಂಕಿ ಪಟ್ಟಣ ಬಿದ್ದಿತ್ತು. ಶವದ ಎರಡು ಕಡೆಗಳಲ್ಲಿ ಗೋಣಿ ಚೀಲ ಸುಟ್ಟು ಬಿದ್ದಿದ್ದು, ಇದನ್ನು ನೋಡಿದರೆ ಬೇರೆಲ್ಲೋ ಕೊಲೆ ಮಾಡಿ ಸಾಕ್ಷ್ಯವನ್ನು ಮರೆ ಮಾಚುವ ಉದ್ದೇಶದಿಂದ ಈ ಸ್ಥಳಕ್ಕೆ ತಂದು ಸುಟ್ಟು ಹಾಕಿರುವುದಾಗಿ ಹೇಳಿದರು.

ಆರೋಪಿಗಳ ವಿರುದ್ಧ ವಿವೇಕ್‌ ಎಂಬುವರ ನೀಡಿದ ದೂರಿನ ಮೇಲೆ ಬಾಣಾವರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು. ಎಎಸ್ಪಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಮತ್ತು ಅರಸೀಕೆರೆ ಉಫವಿಭಾಗದ ಪೊಲೀಸ್‌ ಉಪಾ​ಧ್ಯಕ್ಷರಾದ ಎಲ್‌. ನಾಗೇಶ್‌ ಹಾಗೂ ಬೇಲೂರು ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ ಅವರ ನೇತೃತ್ವದಲ್ಲಿ ಪಿಎಸ್‌ಐ ಬೇಲೂರು ಆಜಂತ್‌ ಕುಮಾರ್‌ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ವಿಶೇಷ ತಂಡವು ಆರೋಪಿ ಪತ್ತೆಗೆ ಬಲೆ ಬೀಸಿತ್ತು.

ನಿಖರವಾದ ಮಾಹಿತಿಯನ್ನು ಆಧರಿಸಿ ಲಕ್ಯ ಗ್ರಾಮದ ಶ್ರೀಕಾಂತ್‌ ಎಂಬಾತನನ್ನು ಬಂ​ಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ. ಶ್ರೀಕಾಂತ್‌ನ ಅಣ್ಣನ ಮಗನ ನಾಮಕರಣದ ಪಾರ್ಟಿ ವ್ಯವಸ್ಥೆ ಮಾಡಿದ್ದ. ಪಾರ್ಟಿ ಮುಗಿಸಿಕೊಂಡು ಶ್ರಿಕಾಂತ್‌ ಮತ್ತು ಆತನ ಸ್ನೇಹಿತರಾದ ಚೇತನ್‌ ಮತ್ತು ಮೋಹನ್‌ ಚಿಕ್ಕಮಗಳೂರು ಲಕ್ಯ ಬಸ್‌ ನಿಲ್ದಾಣ ಬಳಿ ಬಂದಾಗ ಓರ್ವ ಬಿಕ್ಷುಕ ಮಲಗಿರುವುದನ್ನು ನೋಡಿದ್ದಾರೆ. ಕುಡಿದ ಅಮಲಿನಲ್ಲಿ ಆತನ ಬಳಿ ಗಲಾಟೆ ಮಾಡಿದ್ದಾರೆ. ಮಲಗಿದ್ದ ಅಪರಿಚಿತ ವ್ಯಕ್ತಿ ಶ್ರೀಕಾಂತ್‌ ಕೈಗೆ ಕಚ್ಚಿ ಓಡಿ ಹೋಗಿದ್ದು, ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದು ಹಲ್ಲೆ ಮಾಡಿದಲ್ಲದೇ ಕೊಲೆ ಮಾಡಿದ್ದಾರೆ. ನಂತರದಲ್ಲಿ ಮಾರುತಿ ಎಸ್ಟಿಮ್‌ ಕಾರೊಳಗೆ ಶವ ಹಾಕಿಕೊಂಡು ಬಾಣಾವರ ಕಡೆಗೆ ಹೋಗಿ ಕೆರೆಕೋಡಿ ಹಳ್ಳದ ಸೇತುವೆ ಬಳಿ ಶವ ಸುಟ್ಟು ಹಾಕಿದ್ದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು.

ಚಿಕ್ಕಮಗಳೂರು ತಾಲೂಕು ಲಕ್ಯ ಗ್ರಾಮದ ಮೆಕಾನಿಕ್‌ ಕೆಲಸ ಮಾಡುವ ಶ್ರೀಕಾಂತ್‌ (26) ನೀಡಿದ ಮಾಹಿತಿ ಆಧರಿಸಿ ತಾಲೂಕಿನ ಚೇತನ್‌ (29) ಹಾಗೂ ಬೆಂಗಳೂರಿನಲ್ಲಿ ವಾಸವಾಗಿರುವ ಲೈಟ್‌ಬಾಯ್‌ ಮೋಹನ್‌ (29) ಈ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶೇಷ ತಂಡದಲ್ಲಿದ್ದ ಡಿವೈಎಸ್‌ಪಿ ಅರಸೀಕೆರೆ ಉಪ ವಿಭಾಗದ ಎಲ್‌. ನಾಗೇಶ್‌, ಬೇಲೂರು ಸಿಪಿಐ ಸಿದ್ದರಾಮೇಶ್ವರ್‌, ಪಿಎಸ್‌ಐ ಅಜಯಕುಮಾರ್‌ ಮತ್ತು ಸಿಬ್ಬಂದಿ ಜಮ್ಮುದ್‌ ಖಾನ್‌, ಶಶಿಕುಮಾರ್‌, ರವೀಶ್‌, ಪುನೀತ್‌, ರಘು, ಚಾಲಕ ಸೋಮಶೇಖರ್‌ ಮತ್ತು ಪೀರ್‌ ಖಾನ್‌, ಇವರ ಕಾರ್ಯಚರಣೆಯನ್ನು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುವುದಾಗಿ ಹೇಳಿದರು.