ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿಯಂದು ವಿಶಿಷ್ಟ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ದಿನ ಕಾಡು ಮೊಲಕ್ಕೆ ಚಿನ್ನದ ಓಲೆ ಹಾಕಿ ಪೂಜಿಸಿ, ಕಾಡಿಗೆ ಬಿಡಲಾಗುತ್ತದೆ. ಈ ಆಚರಣೆಯು ವಿಜಯನಗರ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಬೇಲೂರು: ಸಂಕ್ರಾಂತಿ ದಿನ ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪೌರಾಣಿಕ ವಾಡಿಕೆಯಂತೆ ಕಂದು ಬಣ್ಣದ ಕಾಡು ಮೊಲಕ್ಕೆ ಚಿನ್ನದ ಓಲೆ ಹಾಕಿ ಕಾಡಿಗೆ ಬಿಡುವ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಸಂಭ್ರಮವಾಗಿ ಆಚರಿಸುವ ನಾಡಿನ ವೈವಿಧ್ಯಮಯ ಸಂಪ್ರದಾಯಗಳಲ್ಲಿ, ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ನಡೆಯುವ ವಿಶೇಷ ಆಚರಣೆ ವಿಭಿನ್ನತೆಯಿಂದ ಕೂಡಿದೆ.

ಕಾಡು ಮೊಲಕ್ಕೆ ಚಿನ್ನದ ಓಲೆ

ಸಂಕ್ರಾಂತಿ ದಿನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪುರಾತನ ವಾಡಿಕೆಯಂತೆ ಕಂದು ಬಣ್ಣದ ಕಾಡು ಮೊಲಕ್ಕೆ ಚಿನ್ನದ ಮುರ ಓಲೆ ಹಾಕಿ ಕಾಡಿಗೆ ಬಿಡುವ ಸಂಪ್ರದಾಯ ಶತಮಾನ ಕಾಲದಿಂದ ಬೆಳೆದುಕೊಂಡು ಬಂದಿದೆ. ಚನ್ನಕೇಶವಸ್ವಾಮಿ ದೇವಾಲಯದಿಂದ ಸುಮಾರು 2 ಕಿ.ಮೀ. ದೂರದ ಬಂಟೇನಹಳ್ಳಿ ಸಮೀಪವಿರುವ ಬನ್ನಿ ಮಂಟಪಕ್ಕೆ ಮಂಗಳವಾದ್ಯದೊಂದಿಗೆ ಉತ್ಸವ ಮೆರವಣಿಗೆ ನಡೆಯಿತು. ಹಳೇಬೀಡು ರಸ್ತೆಯಲ್ಲಿ ನಿರ್ಮಿಸಲಾಗಿದ್ದ ವಿಶೇಷ ಪೂಜಾ ಚಪ್ಪರದಡಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಾಲಯದ ಸಂಪ್ರದಾಯದಂತೆ ದೊಡ್ಡಬ್ಯಾಡಗೆರೆ ಗ್ರಾಮದ ಪರ್ವತಯ್ಯ ಅವರು ಕಾಡು ಮೊಲವನ್ನು ತಂದು, ಅದನ್ನು ‘ದೇವರ ಮೊಲ’ವೆಂದು ಪರಿಗಣಿಸಿ ಪೂಜೆ ಸಲ್ಲಿಸಿದರು. ಮೊಲದ ಕಿವಿಗೆ ಚಿನ್ನದ ಓಲೆ ಚುಚ್ಚಿ ದೇವರಿಗೆ ಸ್ಪರ್ಶಿಸಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಮೊಲವನ್ನು ಕಾಡಿಗೆ ಬಿಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸಭಟ್ ಅವರು, ವಿಜಯನಗರ ಅರಸರ ಕಾಲದಿಂದಲೇ ಉತ್ತರಾಯಣದ ಆರಂಭದಲ್ಲಿ ಈ ಉತ್ಸವ ಆರಂಭಗೊಂಡಿದ್ದು, ಇಂದಿಗೂ ಅದೇ ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಈ ಸಂಪ್ರದಾಯಕ್ಕೆ ಪೌರಾಣಿಕ ಪ್ರತೀತಿಯೂ ಇದೆ ಎಂದು ವಿವರಿಸಿದರು.

ಮೊಲದ ಕಥೆಯ ಹಿನ್ನೆಲೆ ಏನು?

ಚನ್ನಕೇಶವ ದೇವರು ಅಶ್ವಾರೋಹಿಯಾಗಿ ಬೇಟೆಗೆ ತೆರಳುವ ಸಂದರ್ಭ, ಪತ್ನಿ ಲಕ್ಷ್ಮೀ ತವರು ಮನೆಗೆ ಹೋಗಲು ಸಿದ್ಧವಾಗಿದ್ದಾಳೆ. ಆದರೆ ತವರಿಗೆ ಹೋಗಬಾರದೆಂದು ದೇವರು ಹೇಳಿದರೂ ಗೌರವ ಸಿಗದೆ ಕೋಪಗೊಂಡು ದೇವರು ಬೇಟೆಗೆ ಹೊರಡುತ್ತಾರೆ. ಈ ವಿಷಯ ತಿಳಿದ ಲಕ್ಷ್ಮೀ, ಪತಿಯನ್ನು ವಾಪಸ್ ಕರೆಸಿಕೊಳ್ಳಲು ಬೇಟೆ ಮಾರ್ಗದಲ್ಲಿ ಮೊಲವನ್ನು ಅಡ್ಡಲಾಗಿ ಬಿಡಿಸುತ್ತಾಳೆ. ಮೊಲ ಅಡ್ಡ ಬಂದಿದ್ದನ್ನು ಅಪಶಕುನವೆಂದು ಭಾವಿಸಿದ ಚನ್ನಕೇಶವ ದೇವರು ಬೇಟೆಯನ್ನು ಮೊಟಕುಗೊಳಿಸಿ ಹಿಂದಿರುಗುತ್ತಾರೆ. ಈ ಘಟನೆಗೆ ದೇಗುಲದ ದಾಖಲೆಗಳೂ ಸಾಕ್ಷಿಯಾಗಿವೆ ಎಂದು ಹೇಳಿದರು.

ಈ ಆಚರಣೆಗೆ ಪೂರಕವಾಗಿ ಮಾರ್ಗ ಮಧ್ಯದಲ್ಲೇ ಉತ್ಸವವನ್ನು ಸ್ಥಗಿತಗೊಳಿಸಿ ದೇವಾಲಯಕ್ಕೆ ವಾಪಸ್ ತರಲಾಗುತ್ತದೆ. ಮೊಲವನ್ನು ಹಿಡಿದು ತರುವ ಜವಾಬ್ದಾರಿ ದೊಡ್ಡಬ್ಯಾಡಗೆರೆ ಪರ್ವತಯ್ಯ ಕುಟುಂಬದವರಿಗೆ ಅನಾದಿಕಾಲದಿಂದಲೂ ಸೇರಿದೆ ಎಂಬುದು ವಿಶೇಷ.

ಪೂಜಾ ಕಾರ್ಯಗಳನ್ನು ಮುಖ್ಯ ಅರ್ಚಕ ನರಸಿಂಹಪ್ರಿಯ ಭಟ್ ಹಾಗೂ ಇತರ ಅರ್ಚಕರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇಗುಲದ ಇಒ ಯೋಗೀಶ್, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ಟಿ. ಕೇಶವಮೂರ್ತಿ, ಪುರಸಭೆ ಸದಸ್ಯ ಶೈಲೇಶ್, ಕೇಶವಮೂರ್ತಿ ಹತ್ವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.