ರಾಯಚೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್‌ ಶಾಹಿಲ್‌ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಅರಬ್ ಮೂಲದ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದು, ದೇಶದಲ್ಲಿ ಗಲಭೆ ಸೃಷ್ಟಿಸಲು ಯೋಜನೆ ರೂಪಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.

  • ಕೊಲ್ಲಿ ದೇಶದ ವ್ಯಕ್ತಿಯ ಜತೆ ಇನ್‌ಸ್ಟಾದಲ್ಲಿ ಸಂಪರ್ಕದಲ್ಲಿದ್ದ ರಾಯಚೂರಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಶಾಹಿಲ್‌
  • ಕಳೆದ ದಿನಗಳಿಂದ ನಿಗೂಢ ವ್ಯಕ್ತಿಯ ಜತೆ ಸೇರಿಕೊಂಡು ಭಾರತದಲ್ಲಿ ಆಶಾಂತಿ ಸೃಷ್ಟಿ ಬಗ್ಗೆ ಸಮಾಲೋಚನೆ
  • ಭಾರತದಲ್ಲಿ ದುಷ್ಕೃತ್ಯ ಎಸಗಲು ಎಷ್ಟು ಬೇಕಾದರೂ ಹಣ ನೀಡುವುದಾಗಿ ಶಾಹಿಲ್‌ಗೆ ಭರವಸೆ ನೀಡಿದ್ದ ಅರಬ್ ವ್ಯಕ್ತಿ

ರಾಯಚೂರು (ಆ.10): ದೇಶದಲ್ಲಿ ಗಲಭೆ ಎಬ್ಬಿಸಲು ಯೋಜನೆ ರೂಪಿಸಿ, ಅರಬ್‌ ಮೂಲದ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡು ಚರ್ಚೆ ನಡೆಸಿದ ಆರೋಪದಡಿ ರಾಯಚೂರಿನ ಮೊಹಮ್ಮದ್‌ ಶಾಹಿಲ್‌ (24) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಶಾಹಿಲ್‌, ಅರಬ್‌ ಮೂಲದ ಅಪರಿಚಿತ ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದ. ಅರಬ್‌ ಮೂಲದ ವ್ಯಕ್ತಿಯ ಜೊತೆ ‘ರಾಣಾ ಭಾಯ್‌’ ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ. ಜುಲೈ 14 ರಿಂದ ಆತನ ಜೊತೆ ಇನ್‌ಸ್ಟಾಗ್ರಾಂನಲ್ಲಿ ನಿರಂತರ ಚಾಟಿಂಗ್‌ ನಡೆಸಿದ್ದ.

ಆತನ ಅಕೌಂಟ್‌ಗೆ ಲೈಕ್‌, ಕಮೆಂಟ್‌, ಶೇರ್‌ ಮಾಡುತ್ತ ಆತನ ಅಕೌಂಟ್‌ನ ಲಿಂಕ್‌ ಪಡೆದುಕೊಂಡಿದ್ದ ಶಾಹುಲ್‌, ಆತನ ಪೋಸ್ಟ್‌ಗಳಿಂದ ಪ್ರಭಾವಿತನಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕುರಿತು ಸಲಹೆಗಳನ್ನು ಪಡೆದಿದ್ದ. ಈ ಬಗ್ಗೆ ಅರಬ್‌ ವ್ಯಕ್ತಿಯೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದ.

ಚಾಟಿಂಗ್‌ ವೇಳೆ, ದೇಶದಲ್ಲಿ ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಅರಬ್‌ ವ್ಯಕ್ತಿ ಈತನಿಗೆ ಭರವಸೆ ನೀಡಿದ್ದ. ಅಲ್ಲದೆ, ಶಾಹಿಲ್‌ ಗಾಗಿ ಪಿಸ್ತೂಲ್‌ ವೊಂದನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಶಾಹಿಲ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.