ರಸ್ತೆಯುದ್ದಕ್ಕೂ ತಗ್ಗು ದಿಣ್ಣೆಗಳ ದಾರಿ; ಇದು ಗಣಿನಾಡು ಬಳ್ಳಾರಿ!
- ಬಳ್ಳಾರಿಯಲ್ಲಿ ಯಾವೊಂದು ರಸ್ತೆಯೂ ಸರಿಯಿಲ್ಲ
- ಎಲ್ಲೆಡೆ ತಗ್ಗುದಿಣ್ಣೆಯಿಂದ ಕೂಡಿದ ರಸ್ತೆಯಲ್ಲೇ ಸವಾರರ ಪ್ರಯಾಣ
- ಗುಂಡಿ ಬಿದ್ದ ರಸ್ತೆಯಲ್ಲೇ ಪೈಪ್ ಲೈನ್ ಕಾಮಗಾರಿ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಅ.21) : ಗಣಿನಾಡು ಬಳ್ಳಾರಿ ಎಂದರೆ ಶ್ರೀಮಂತ ಜಿಲ್ಲೆ. ಇಲ್ಲಿ ವಾಸಿಸುವರೆಲ್ಲ ಅಗರ್ಭ ಶ್ರೀಮಂತರು. ಇಲ್ಲಿನ ಸರ್ಕಾರಿ ಸೌಲಭ್ಯ ಎಲ್ಲವೂ ಅದ್ಭುತವಾಗಿದೆ ಎಂಬ ಭಾವನೆ ರಾಜ್ಯದ ಅದೆಷ್ಟೋ ಜನರಲ್ಲಿ ಈಗಲೂ ಇದೆ. ಬಳ್ಳಾರಿಯ ವಾಸ್ತವ ಸ್ಥಿತಿಯೇ ಬೇರೆ ಇದೆ. ಇಲ್ಲಿನ ವ್ಯವಸ್ಥೆ, ಮೂಲಭೂತ ಸೌಲಭ್ಯಗಳು ಹೇಗಿವೆ ಅಂತಾ ನೋಡಿದರೆ ಅಯ್ಯೋ ಅನಿಸುತ್ತದೆ. ಹೌದು, ಕಳೆದೊಂದು ವರ್ಷದಲ್ಲಿಎಲ್ಲ ರಸ್ತೆಗಳು ಗುಂಡಿಮಯವಾಗಿವೆ. ಯಾವೊಂದು ರಸ್ತೆಯೂ ಸುರಕ್ಷಿತವಲ್ಲ. ಎಲ್ಲ ರಸ್ತೆಗಳಲ್ಲೂ ಗುಂಡಿಗಳದ್ದೇ ಕಾರುಬಾರು. ಕೆಲವು ರಸ್ತೆಗಳು ಮಳೆಯಿಂದಾಗಿ ಹಾಳಾದ್ರೆ, ಕೆಲವು ಹಿಂದೆ ಮಾಡಿದ ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಂತಿವೆ.
ಸಮಸ್ಯೆಗಳ ಕೂಪವಾದ ಯರಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್
ಪೈಪ್ ಲೈನ್ ಕಾಮಗಾರಿಗೆ ಅಗೆದು ಹಾಗೆಯೇ ಬಿಟ್ಟಿರೋದ್ರಿಂದ ಬಳ್ಳಾರಿ ನಗರ ಪ್ರದೇಶದಲ್ಲಿರೋ ಹದಿನೈದಕ್ಕೂ ಹೆಚ್ಚು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಬಿಸಿಲಿದ್ದಾಗ ಧೂಳಿನಿಂದ ಕೂಡಿದ್ರೆ, ಮಳೆ ಬಂದಾಗ ಅಲ್ಲಲ್ಲಿ ಚರಂಡಿ ನೀರಿನ ಕಾಲುವೆಗಳೇ ನಿರ್ಮಾಣವಾಗುತ್ತವೆ.
ಮುಗಿಲು ಮುಟ್ಟವ ಧೂಳು
ಬೇಸಗೆ ಚಳಿಗಾಲದಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಂಚರಿಸಿದರೇ ಧೂಳಿನ ಅಭಿಷೇಕ ತಪ್ಪದು. ಧೂಳಿನಿಂದ ಪಾರಾಗಲು ಬೈಕ್ ಸವಾರರು, ಸಾರ್ವಜನಿಕರು ಮಾಸ್ಕ್ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ಮಳೆ ಕಡಿಮೆಯಾಗಿ ಚಳಿಗಾಲ ಶುರುವಾಗುವುದರಿಂದ ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಮುಗಿಲು ಮುಟ್ಟುವಂತೆ ಧೂಳು ಏಳುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಯಮಯಾತನೆ ಅನುಭವಿಸುವಂತಾಗಿದೆ.
ಮಳೆ ಬಂದರಂತೂ ರಸ್ತೆಗಳಲ್ಲಿ ದಿನಗಟ್ಟಲೇ ಚರಂಡಿಯ ಕೊಚ್ಚೆ ನೀರು ಹರಿಯುತ್ತದೆ. ಸದಾ ಅಭಿವೃದ್ಧಿಯ ಮಂತ್ರ ಜಪಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರದ ಸ್ಥಿತಿ ಕಂಡು ಕಾಣದಂತೆ ಓಡಾಡುತ್ತಿದ್ದಾರೆ. ಹದಗೆಟ್ಟ ರಸ್ತೆ, ಮೂಲಭೂತ ಸೌಲಭ್ಯ ಕೊರತೆಯಿಂದಾಗಿ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಧೂಳು ಕಡಿಮೆ ಮಾಡುವುದರ ಜೊತೆ ರಸ್ತೆ ದುರಸ್ತಿ ಬಗ್ಗೆ ಜನಪ್ರತಿನಿಧಿಗಳು ಮಾತನಾಡದೆ ಜಾಣಮೌನವಾಗಿರುವುದು ಸಾರ್ವಜನಿಕರ ಪಾಲಿಗೆ ಅಸಹನೀಯವೆನಿಸಿದೆ.
ನಿತ್ಯ ಸಾವಿರಾರು ಜನತೆ ಭೇಟಿ:
ಜಿಲ್ಲಾ ಕೇಂದ್ರಕ್ಕೆ ನಿತ್ಯ ಸರ್ಕಾರಿ ಮತ್ತು ಖಾಸಗಿ ಕೆಲಸಕ್ಕಾಗಿ ಸಾವಿರಾರು ಜನ ಭೇಟಿ ನೀಡುತ್ತಾರೆ. ಹಳ್ಳಿಯಿಂದ ನಗರದವರೆಗೂ ಸರಾಗವಾಗಿ ಬರೋ ಜನರು ನಗರ ಪ್ರದೇಶದಲ್ಲಿ ಓಡಾಡಲು ದುಸ್ಸಾಹಸ ಪಡುವಂತಾಗಿದೆ. ಇನ್ನೂ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಸಾವಿರಾರು ಜನ ಭೇಟಿ ನೀಡಿದ್ದರು. ಇಲ್ಲಿನ ರಸ್ತೆಗಳ ದುಸ್ಥಿತಿ ಕಂಡು ಬಳ್ಳಾರಿಯಂದ್ರೇ, ಏನೋ ಅಂದು ಕೊಂಡಿದ್ದೆವು. ಇಂತಾಹ ಸ್ಥಿತಿಯಲ್ಲಿ ಬಿದ್ದು ನರಳಾಡುತ್ತಿದೆ ಎಂದು ತಿಳಿದಿರಲಿಲ್ಲ ಎಂದು ಆಡಿಕೊಂಡರು
ಯಾವ್ಯಾವ ರಸ್ತೆ ಸ್ಥಿತಿ ಹೇಗಿದೆ: ಗಾಂಧಿನಗರ ಸಂಪರ್ಕಿಸುವ ರಸ್ತೆ, ಗಡಗಿ ಚೆನ್ನಪ್ಪ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸುವ ರಸ್ತೆಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಧೂಳು ಇನ್ನಷ್ಟು ಹೆಚ್ಚಿದ್ದು ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಇನ್ನೊಂದೆಡೆ ಟ್ರಾಫಿಕ್ ಜಾಮ್ ನಿಂದಾಗಿ ಜನರು ಧೂಳಿನ ನಡುವೆಯೇ ನಿತ್ಯ ಸಂಚರಿಸುತ್ತಿದ್ದಾರೆ.
ಕಾಮಗಾರಿಗಾಗಿ ರಸ್ತೆ ಮದ್ಯದಲ್ಲಿಯೇ ಮಣ್ಣು, ಕಲ್ಲುಗಳ ರಾಶಿ ಹಾಕುವುದರಿಂದ ವಾಹನ ಸವಾರರಿಗೆ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಹಡಗೆಟ್ಟ ರಸ್ತೆಯ ದುಸ್ಥಿತಿಯ ನಡುವೆ ದುರಸ್ತಿಯ ನಡುವೆ ಪೈಪ್ ಪ್ಲೈನ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಸಹ ಕಾರಣವಾಗಿದೆ.
ಏರ್‌ಪೋರ್ಟ್ ರಸ್ತೆ ವಿಸ್ತರಿಸಲು ಏನು ಮಾಡಿದ್ದೀರಿ, ವರದಿ ನೀಡಿ: ಹೈಕೋರ್ಟ್
ಲಾರಿಗಳ ಓಡಾಟಕ್ಕಿಲ್ಲ ಕಡಿವಾಣ
ಇನ್ನೂ ಬಳ್ಳಾರಿ ರಸ್ತೆಗಳಲ್ಲಿ ಮಾರುದ್ದ ಗುಂಡಿಗಳು ಬೀಳಲು ಯತೇಚ್ಛವಾಗಿ ಸಂಚರಿಸುವ ಲಾರಿಗಳೇ ಕಾರಣವಾಗಿವೆ. ಬೃಹತ್ ಲಾರಿಗಳ ಓಡಾಟದಿಂದ ರಸ್ತೆಗಳು ಹದಗೆಟ್ಟು ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಧೂಳು ಹೆಚ್ಚಿದೆ. ನಾನಾ ಸಂಘಟನೆಗಳಿಂದ ಪ್ರತಿಭಟನೆ, ಮನವಿ ಸಲ್ಲಿಸಿದರೂ ಲಾರಿಗಳ ಓಡಾಟಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.