Belagavi SmartCity: ಡಿಸೆಂಬರ್ ಅಂತ್ಯಕ್ಕೆ ಸ್ಮಾರ್ಟ್ ಕಾಮಗಾರಿ ಪೂರ್ಣ: ಕಾರಜೋಳ
* ಬೆಳಗಾವಿಯಲ್ಲಿ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ
* ತಿನಿಸುಕಟ್ಟೆಯಲ್ಲಿ ತಿಂಡಿ ಸವಿದ ಸಚಿವರು
* ಆದಷ್ಟು ಬೇಗನ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ
ಬೆಳಗಾವಿ(ಫೆ.25): ಎರಡು ವರ್ಷಗಳಿಂದ ಕೋವಿಡ್(Covid-19) ಹಾಗೂ ಅತಿಯಾದ ಮಳೆಯಿಂದ ಸ್ಮಾರ್ಟ್ ಸಿಟಿ(SmartCity) ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಳಕವಾಡಿಯಲ್ಲಿ 43.62 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಮಂದಿರ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿ ಒಂದು ವರ್ಷ ವಿಳಂಬವಾಗಿದೆ. ಯೋಜನೆಯ ಸ್ವಲ್ಪ ಜಾಗೆಗೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕು ನಿವಾರಿಸಿಕೊಂಡು ಮುಂದಿನ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದರು.
Karnataka Politics: ರಾಮನಗರ ಮುಖಂಡರು ಬಿಜೆಪಿ ತೆಕ್ಕೆಗೆ, ಮತ್ತೆ ಅಧಿಕಾರ ಪಕ್ಕಾ ಎಂದ ಸಿಎಂ
ಕಾಮಗಾರಿ ಪೂರ್ಣಗೊಂಡ ಬಳಿಕ ಇದರಿಂದ ಬರುವ ಆದಾಯದಲ್ಲಿ ಐದು ವರ್ಷಗಳಲ್ಲಿ ಯೋಜನಾ ವೆಚ್ಚ ಮರಳಿ ಬರಲಿದೆ. ಆದ್ದರಿಂದ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು. ಕಲಾಮಂದಿರದ ವೈಶಿಷ್ಟ್ಯಗಳನ್ನು ಶಾಸಕ ಅಭಯ ಪಾಟೀಲ(Abhay Patil) ಅವರು ಸಚಿವರಿಗೆ ವಿವರಿಸಿದರು.
ಕಾಮಗಾರಿಗಳ ವೀಕ್ಷಣೆ:
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಬೆಳಗಾವಿ(Belagavi) ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರದ ಸಿಬಿಟಿ ಕಾಮಗಾರಿ, ವಿವಿಧ ರಸ್ತೆಗಳು, ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್, ಟಿಳಕವಾಡಿಯ ಕಲಾಮಂದಿರ ಮತ್ತಿತರ ಕಾಮಗಾರಿಗಳನ್ನು ವೀಕ್ಷಿಸಿದರು.
ಸಿಬಿಟಿ(CBT) 2018ರಲ್ಲಿ ಕಾಮಗಾರಿ ಆರಂಭವಾಗಿದೆ. ರಕ್ಷಣಾ ಇಲಾಖೆಯ(Department of Defense) ಜಾಗ ಇರುವುದರಿಂದ ಎನ್‌ಒಸಿ ಸಿಗದೇ ಒಂದು ವರ್ಷ ಕಾಮಗಾರಿ ವಿಳಂಬವಾಯಿತು. ಉದ್ದೇಶಿತ ನೂತನ ಸಿಬಿಟಿಯಲ್ಲಿ 28 ಬಸ್ ಪಾರ್ಕಿಂಗ್ ಫ್ಲ್ಯಾಟ್ ಫಾರ್ಮ್, ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗೆ ವಾಣಿಜ್ಯ ಸಂಕೀರ್ಣ, ರೆಸ್ಟೋರೆಂಟ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
Saundatti Yellamma Temple: 2 ವರ್ಷಗಳ ನಂತರ ಯಲ್ಲಮ್ಮನ ಜಾತ್ರಾ ಮಹೋತ್ಸವ
46 ಕೋಟಿ ವೆಚ್ಚದಲ್ಲಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿರ್ಮಿಸಲಾಗಿದೆ. ಬಸ್, ಆ್ಯಂಬುಲೆನ್ಸ್ ಹಾಗೂ ತುರ್ತು ಸೇವೆಗೆ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ತಿಳಿಸಿದರು. 67 ನಗರ ಸಾರಿಗೆ ಬಸ್‌ಗಳಿಗೆ ಜಿಪಿಎಸ್, ಹತ್ತು ಬಸ್ ಶೆಲ್ಟರ್‌ಗಳಲ್ಲಿ ಕ್ಯಾಮೆರಾ, ನಗರದ ಸ್ಮಾರ್ಟ್ ಬಸ್ ಶೆಲ್ಟರ್‌ಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಕಸ ಹಾಕುವವರ ಮೇಲೆ ನಿಗಾ ವಹಿಸಲು 20 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಚೆಲ್ಲಿದಾಗ ತಕ್ಷಣವೇ ಒಂಬತ್ತು ಸ್ಥಳಗಳಲ್ಲಿ ಸ್ಮಾರ್ಟ್ ಪೋಲ್ ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ ರೊಟೇಟ್ ಆಗುತ್ತದೆ. ತುರ್ತು ಸಂದರ್ಭದಲ್ಲಿ ತಕ್ಷಣವೇ ಸಂಬಂಧಿಸಿದವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.
ತಿನಿಸುಕಟ್ಟೆಯಲ್ಲಿ ತಿಂಡಿ ಸವಿದ ಸಚಿವರು
ಇದೇ ಸಂದರ್ಭದಲ್ಲಿ ತಿನಿಸುಕಟ್ಟೆಗೆ ಭೇಟಿ ನೀಡಿದ ಸಚಿವ ಗೋವಿಂದ ಕಾರಜೋಳ ಅವರು, ಬೆಣ್ಣೆದೋಸೆ ಸವಿದರು. ಇದಕ್ಕೂ ಮುಂಚೆ ಚಹಾಕಟ್ಟೆಯಲ್ಲಿ ಚಹಾ ಕೇಳಿ ಪಡೆದ ಸಚಿವರು. ತಿನಿಸುಕಟ್ಟೆಯನ್ನು ಸಂಪೂರ್ಣವಾಗಿ ವೀಕ್ಷಿಸಿದರು. ಈ ವೇಳೆ ಸಂಸದೆ ಮಂಗಲ ಅಂಗಡಿ, ಶಾಸಕ ಅಭಯ್ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸಾಥ್ ನೀಡಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಬಾಗೇವಾಡಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ ಘಾಳಿ ಮತ್ತಿತರರು ಉಪಸ್ಥಿತರಿದ್ದರು.