ಇಡೀ ದೇಶದ ಚಿತ್ತ ಸೆಳೆದಿರುವ ಚಂದ್ರಯಾನ–3ಕ್ಕೂ ಬೆಳಗಾವಿ ಜಿಲ್ಲೆಗೂ ಬಿಡಿಸಲಾಗದ ಬಂಧವಿದೆ. ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಈ ಗಗನಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಇಲ್ಲಿನ ಸರ್ವೋ ಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಸಿದ್ಧಪಡಿಸಿದ ಬಿಡಿ ಭಾಗಗಳು ಈ ಖಗೋಳಯಾನದ ಪೂರ್ಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭೂಮಿಯ ಆಚೆಗೂ ಬೆಳಗಾವಿ ಕೀರ್ತಿ ಪತಾಕೆ ಹಾರಿಸಿದ ಈ ವಿಜ್ಞಾನಿಗಳ ಬಗ್ಗೆ ಈಗ ಜಿಲ್ಲೆಯ ಜನರೇ‌ ಹೆಮ್ಮೆ‌ಪಡುತ್ತಿದ್ದಾರೆ.

ಏಷ್ಯಾನೆಟ್ ‌ಸುವರ್ಣ ನ್ಯೂಸ್, ಬೆಳಗಾವಿ

ಬೆಳಗಾವಿ(ಆ.24): ಇಸ್ರೋದ‌ ಬಹುನಿರೀಕ್ಷಿತ‌ ಚಂದ್ರಯಾನ-3 ಸಕ್ಸಸ್‌ ಆಗಿದೆ. ವಿಕ್ರಮನ‌ ಪರಾಕ್ರಮದ‌ ಹಿಂದೆ ಬೆಳಗಾವಿಯ ಇಬ್ಬರು ವಿಜ್ಞಾನಿಗಳ ಶ್ರಮವೂ ಇದೆ. ಅಲ್ಲದೇ ಈ ಗಗನನೌಕೆಯು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಬೇಕಾದ ಸಲಕರಣೆಗಳೂ ಸಿದ್ಧವಾಗಿದ್ದೂ ಬೆಳಗಾವಿಯಲ್ಲೇ.

ಇಲ್ಲಿನ ಸರ್ವೊ ಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಸಿದ್ಧಪಡಿಸಿದ ಬಿಡಿ ಭಾಗಗಳು ಈ ಖಗೋಳಯಾನದ ಪೂರ್ಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಗಗನನೌಕೆಯಲ್ಲಿ ಬಳಸಿದ ಹೈಡ್ರಾಲಿಕ್‌ ಉಪಕರಣ, ವಾಲ್ವ್‌ಗಳು, ಸ್ಪೂಲ್ಸ್‌, ಸ್ಲೀವ್ಸ್‌, ಮ್ಯಾನಿಫೋಲ್ಡ್‌ ಬ್ಲಾಕ್ಸ್, ಎಲೆಕ್ಟ್ರಾನಿಕ್‌ ಸೆನ್ಸರ್‌ಗಳನ್ನು ಇದೇ ಕಂಪನಿಯಿಂದ ಇಸ್ರೊಗೆ ರವಾನಿಸಲಾಗಿದೆ. ನೌಕೆಯನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸುವಲ್ಲಿ ಈ ಉಪಕರಣಗಳ ಪಾತ್ರ ಮಹತ್ವದ್ದಾಗಿದೆ. 

Chandrayaan 3: ಮುಂದಿನ ಮೂನ್‌ ಮಿಷನ್‌ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!

ಇಡೀ ದೇಶದ ಚಿತ್ತ ಸೆಳೆದಿರುವ ಚಂದ್ರಯಾನ–3ಕ್ಕೂ ಬೆಳಗಾವಿ ಜಿಲ್ಲೆಗೂ ಬಿಡಿಸಲಾಗದ ಬಂಧವಿದೆ. ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಈ ಗಗನಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಇಲ್ಲಿನ ಸರ್ವೋ ಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಸಿದ್ಧಪಡಿಸಿದ ಬಿಡಿ ಭಾಗಗಳು ಈ ಖಗೋಳಯಾನದ ಪೂರ್ಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭೂಮಿಯ ಆಚೆಗೂ ಬೆಳಗಾವಿ ಕೀರ್ತಿ ಪತಾಕೆ ಹಾರಿಸಿದ ಈ ವಿಜ್ಞಾನಿಗಳ ಬಗ್ಗೆ ಈಗ ಜಿಲ್ಲೆಯ ಜನರೇ‌ ಹೆಮ್ಮೆ‌ಪಡುತ್ತಿದ್ದಾರೆ.

ಯುವ ವಿಜ್ಞಾನಿಯ ಐತಿಹಾಸಿಕ‌ ಸಾಧನೆ:

ಖಾನಾಪುರ ತಾಲ್ಲೂಕಿನ ಕಾಪೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿ ಪ್ರಕಾಶ ನಾರಾಯಣ ಪೇಡಣೇಕರ ಹಾಗೂ ಗೋಕಾಕ ತಾಲ್ಲೂಕಿನ ಮಮದಾಪುರ ಗ್ರಾಮದ ಶಿವಾನಂದ ಮಲಪ್ಪ ಕಮತ ಚಂದ್ರಯಾನ–3ರ ಸಾಧಕರ ತಂಡದಲ್ಲಿದ್ದಾರೆ.

ಚಂದ್ರಯಾನ-3: ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆಯ ಕ್ಷಣ, ಸಚಿವ ಸತೀಶ್ ಜಾರಕಿಹೊಳಿ

ಪ್ರಕಾಶ ಪಡಣೇಕರ ಅನಗಡಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದವರು. 2019ರಿಂದ ಇಸ್ರೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 32ರ ಪ್ರಾಯದ ಈ ಅಂತರಿಕ್ಷ ವಿಜ್ಞಾನಿಯ ತಂದೆ–ತಾಯಿ ಕೃಷಿಕರು. ಅನಗಡಿ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ, ಕಾಪೋಲಿಯ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನಲ್ಲಿ ಪಿಯು ವಿಜ್ಞಾನ ಮತ್ತು ಜಿಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಉನ್ನತ ಶ್ರೇಣಿಯೊಂದಿಗೆ ಪಡೆದಿದ್ದಾರೆ. ಮುಂಬೈನ ವಿವಿಡಿಪಿ ವಿಶ್ವವಿದ್ಯಾಲಯದಲ್ಲಿ ಅಂತರಿಕ್ಷ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಕಾಶ ಅವರು ಚಂದ್ರಯಾನ-2ರ ತಂಡದಲ್ಲೂ ಭಾಗಿಯಾಗಿದ್ದರು. ಅವರಿಂದಾಗಿ ಖಾನಾಪುರದಲ್ಲಿ ಈಗ ದುಪ್ಪಟ್ಟು ಸಂಭ್ರಮ ಮನೆ ಮಾಡಿದೆ.

ಹೆಮ್ಮೆ ತಂದ ಮಮದಾಪುರ ವಿಜ್ಞಾನಿ

ಚಂದ್ರಯಾನ–3ರಲ್ಲಿ ಸಕ್ರಿಯರಾದ ವಿಜ್ಞಾನಿಗಳ ತಂಡದಲ್ಲಿದ್ದಾರೆ ಗೋಕಾಕ ತಾಲ್ಲೂಕಿನ ಮಮದಾಪುರ ಗ್ರಾಮದ ಶಿವಾನಂದ ಮಲ್ಲಪ್ಪ ಕಮತ. 52 ವರ್ಷ ವಯಸ್ಸಿನ ಶಿವಾನಂದ ಅವರು ಸಾಮಾನ್ಯ ಕುಟುಂಬದಲ್ಲಿ ಹಳ್ಳಿಯಲ್ಲೇ ಹುಟ್ಟಿ ಬೆಳದವರು. ಮಮದಾಪುರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಪಿಯುಸಿಯನ್ನು ಧಾರವಾಡದ ಕೆಸಿಡಿ ಕಾಲೇಜಿನಲ್ಲಿ, ಪದವಿಯನ್ನು ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪೂರೈಸಿದ್ದಾರೆ. ಅವರ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ತಾಯಿ ಗೃಹಿಣಿಯಾಗಿದ್ದಾರೆ.