ಬೆಳಗಾವಿಯ ಜೋಷಿಮಾಲ್ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬೆಳಗಾವಿ (ಜು.09): ಬೆಳಗಾವಿ ನಗರದದಲ್ಲಿ ಮನಕಲಕುವ ಘಟನೆಯೊಂದು ನಗರದ ಜೋಷಿಮಾಲ್ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಆಘಾತಕಾರಿ ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟವರಲ್ಲಿ ಸಂತೋಷ ಕುರಡೇಕರ್ (44), ಸುವರ್ಣ ಕುರಡೇಕರ್ ಮತ್ತು ಮಂಗಳಾ ಕುರಡೇಕರ್ ಇದ್ದಾರೆ. ತೀವ್ರವಾಗಿ ಅಸ್ವಸ್ಥರಾಗಿರುವ ಸುನಂದಾ ಕುರಡೇಕರ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರು ಆಘಾತದಿಂದ ತಕ್ಷಣ ಗುಣಮುಖರಾಗುವ ಸಾಧ್ಯತೆ ಕುಗ್ಗಿದೆಯೆಂದು ತಿಳಿಸಿದ್ದಾರೆ.
ಕುಟುಂಬದ ಎಲ್ಲ ಸದಸ್ಯರು ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ವಿಷ ಸೇವಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕುಟುಂಬದಲ್ಲಿ ಉಂಟಾದ ಆರ್ಥಿಕ, ವೈಯಕ್ತಿಕ ಅಥವಾ ಮಾನಸಿಕ ಒತ್ತಡವೇ ಈ ಆತ್ಮಹ*ತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಈ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಮತ್ತು ದೃಢ ಕಾರಣಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶಹಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಹಿಂದೆ ಏನೇ ಕಾರಣವಿದ್ದರೂ, ಒಂದೇ ಕುಟುಂಬದ ಈ ಪ್ರಮಾಣದ ದುರಂತ ಸ್ಥಳೀಯರಿಗೆ ಭಾರೀ ಆತಂಕ ಮತ್ತು ವಿಷಾದವನ್ನುಂಟುಮಾಡಿದೆ. ಪ್ರಕರಣದ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ಹೊರತೆಗೆದು ಸಮಾಜದಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
