ಬೆಳಗಾವಿ(ಏ.10): ಜಿಲ್ಲೆಯಲ್ಲಿ ಕೊರೋನೊ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಂತೆ ಜಿಲ್ಲೆಯ ಜನರಲ್ಲಿ ಆಂತಕ ಸೃಷ್ಟಿ ಮಾಡಿದೆ. ಎರಡು ದಿನಲ್ಲಿ ಬೆಳಗಾವಿಗೆ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ (ಪ್ರಯೋಗಾಲಯ ) ಸರ್ಕಾರದಿಂದ ಮಂಜೂರಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಅದು ಹುಬ್ಬಳ್ಳಿಯ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಮಾ.9ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಬೆಳಗಾವಿ, ಮೈಸೂರು, ಶಿವಮೊಗ್ಗ, ಬಳ್ಳಾರಿ, ಹಾಸನ ಸೇರಿದಂತೆ ಐದು ಕಡೆಗಳಲ್ಲಿ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಮಾ.13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಎಲ್ಲ ರಾಜ್ಯಗಳ ಸಿಎಂಗಳ ವಿಡಿಯೋ ಕಾನ್ಪರೆನ್ಸನಲ್ಲಿ ಸಿಎಂ ಯಡಿಯೂರಪ್ಪ ಬೆಳಗಾವಿ ಹೆಸರನ್ನು ಕೈ ಬಿಟ್ಟು ಹುಬ್ಬಳ್ಳಿ ಹೆಸರು ಪ್ರಸ್ತಾಪ ಮಾಡಿರುವುದು ಹುಬ್ಬಳ್ಳಿ​, ಧಾರವಾಡದ ಉಸ್ತುವಾರಿಯ ಜತೆ ಬೆಳಗಾವಿ ಉಸ್ತುವಾರಿ ಹೊಣೆ ಹೊತ್ತಿರುವ ಜಗದೀಶ ಶೆಟ್ಟರ ಮೇಲೆ ಬೆಳಗಾವಿ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾ: ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭ

ಇತ್ತೀಚೆಗೆ ಬೆಳಗಾವಿಗೆ ಆಗಮಿಸಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶೀಘ್ರದಲ್ಲೇ ಬೆಳಗಾವಿಗೆ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ ತೆರೆಯುವುದಾಗಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದರು. ಆದರೆ ಕಳೆದ ಎರಡು ತಿಂಗಳು ಹಿಂದೆ ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಮಾಡಿದ ಹಾಗೆ ಬೆಳಗಾವಿಗೆ ನೀಡಬೇಕಿದ್ದ ಕೊರೋನೊ ತಪಾಸಣೆಯ ಲ್ಯಾಬ್‌ನ್ನು ಹುಬ್ಬಳ್ಳಿಗೆ ಮಾಡಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಹುಬ್ಬಳ್ಳಿ ಜನರ ಮೇಲೆ ಪ್ರೀತಿ:

ಹುಬ್ಬಳ್ಳಿ ಧಾರವಾಡದಲ್ಲಿ ಕೇವಲ ಎರಡು ಕೊರೋನೊ ಪಾಸಿಟಿವ್‌ ಪ್ರಕರಣ ಪತ್ತೆಯಾಗಿತ್ತು. ಅಲ್ಲದೇ ಓರ್ವ ವ್ಯಕ್ತಿ ಈಗಾಗಲೇ ಗುಣಮುಖರಾಗಿದ್ದಾರೆ. ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯ ಪಕ್ಕದಲ್ಲಿಯೇ ಮಹಾರಾಷ್ಟ್ರ, ಗೋವಾದಿಂದ ಜನರು ಕಳ್ಳ ಮಾರ್ಗದಿಂದ ನುಸುಳುತ್ತಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಕೊರೋನೊ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದನ್ನು ಅರಿಯದ ಸಚಿವ ಜಗದೀಶ ಶೆಟ್ಟರ ಮತ್ತೆ ತಮ್ಮ ತವರು ಜನರ ಪ್ರೀತಿಯನ್ನು ಗಿಟ್ಟಿಸಿಕೊಳ್ಳಲು ಹುಬ್ಬಳ್ಳಿಗೆ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಚರ್ಚೆಗಳು ಬೆಳಗಾವಿಯಲ್ಲಿ ನಡೆಯುತ್ತಿವೆ.

ಉಸ್ತುವಾರಿ ಸಚಿವರ ಮಲತಾಯಿ ಧೋರಣೆ:

ಬೆಳಗಾವಿಯಲ್ಲಿ ಪತ್ತೆಯಾಗುತ್ತಿರುವ ಕೊರೋನೊ ವೈರಸ್‌ ಶಂಕಿತರ ಗಂಟಲು ದ್ರವವನ್ನು ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಖಾಸಗಿ ಹಾಗೂ ಪ್ರಯೋಗಾಲಯಗಳಲ್ಲಿ ಕೊರೋನೊ ವೈರಸ್‌ ಪರೀಕ್ಷೆ ಮಾಡಲು ಅವಕಾಶ ನೀಡಿದೆ. ಆದರೆ ಒಂದು ಕೊರೋನೊ ವೈರಸ್‌ ಪರೀಕ್ಷೆಗೆ ಸುಮಾರು .6 ಸಾವಿರದಿಂದ .7 ಸಾವಿರವರೆಗೆ ವೆಚ್ಚ ತಗಲುತ್ತದೆ. ಆ ಹಣ ಸ್ವೀಕರಿಸದಂತೆ ಕೇಂದ್ರ ಸರ್ಕಾರ ಸೂಚಿಸಿದರೂ ಕೆಲವೊಂದು ಪ್ರಯೋಗಾಲಯಗಳಲ್ಲಿ ಹಣವನ್ನು ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ಬೆಳಗಾವಿಯಲ್ಲಿ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ ಮಾಡಲು ನಿರ್ಧರಿಸಿತ್ತು. ಬೆಳಗಾವಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಮಲತಾಯಿ ಧೋರಣೆಯಿಂದ ಅದು ಹುಬ್ಬಳ್ಳಿ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.