ಹುಬ್ಬಳ್ಳಿ(ಏ.09): ಇಲ್ಲಿನ ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭಿಸಲು ಐಸಿಎಂಆರ್‌ ಒಪ್ಪಿಗೆ ನೀಡಿದ್ದು, ಬುಧವಾರದಿಂದ ಸಾರ್ಸ್‌ ಕೋವಿಡ್‌-2 ವೈರಾಣು ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

ಕಿಮ್ಸ್‌ ಕೋವಿಡ್‌-19 ಆಸ್ಪತ್ರೆ ಬಳಿ ಅಳವಡಿಸಲಾಗಿರುವ ಗಂಟಲು ದ್ರವ ಮಾದರಿ ಸಂಗ್ರಹಣ ಬೂತ್‌ ಹಾಗೂ ಮೈಕ್ರೋಬಯಲಾಜಿ ವಿಭಾಗದಲ್ಲಿ ಸ್ಥಾಪಿಸಲಾಗಿರುವ ಸಾರ್ಸ್‌ ಕೋವಿಡ್‌-2 ವೈರಾಣು ಪತ್ತೆ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಿಮ್ಸ್‌ನಲ್ಲಿ ಪರೀಕ್ಷಾ ಕೇಂದ್ರ ಆರಂಭಿಸಿರುವುದರಿಂದ 24 ಗಂಟೆಗಳಲ್ಲೇ ಕೊರೋನಾ ಪರೀಕ್ಷಾ ವರದಿ ದೊರಕಲಿದೆ. ಬೆಂಗಳೂರು ಹಾಗೂ ಶಿವಮೊಗ್ಗಕ್ಕೆ ಮಾದರಿಗಳನ್ನು ಕಳುಹಿಸಿ ವರದಿಗಾಗಿ ಕಾಯುವುದು ತಪ್ಪಿದೆ. ದಿನವೊಂದಕ್ಕೆ 40 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. 

ಇನ್ಮುಂದೆ ಕಿಮ್ಸ್‌ನಲ್ಲೇ ಕೊರೋನಾ ವೈರಸ್‌ ಟೆಸ್ಟ್‌

ಕಿಮ್ಸ್‌ನಿಂದ ಸ್ವಯಂಚಾಲಿತ ಆರ್‌ಎನ್‌ಎ ಎಕ್ಸ್‌ಟ್ರಾಕ್ಟ್ ಯಂತ್ರಕ್ಕೆ ಬೇಡಿಕೆ ಇಡಲಾಗಿದೆ. ಈ ಯಂತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದರೆ 100 ಮಾದರಿಗಳನ್ನು ದಿನವೊಂದಕ್ಕೆ ಪರೀಕ್ಷೆ ಮಾಡಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಒಂದೆರೆಡು ದಿನಗಳಲ್ಲಿ ಬೆಳಗಾವಿಯಲ್ಲೂ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು. ಇದಕ್ಕೂ ಐಸಿಎಂಆರ್‌ ಒಪ್ಪಿಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಂಗ್‌ ಇಂಡಿಯನ್ಸ್‌ ಮತ್ತು ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯವರು ಗಂಟಲು ದ್ರವ ಮಾದರಿ ಸಂಗ್ರಹಣ ಬೂತ್‌ ಕಿಮ್ಸ್‌ಗೆ ಹಸ್ತಾಂತರಿಸಿದರು. ಈ ವೇಳೆ ವಿಪ ಸದಸ್ಯರಾದ ವಿ.ಎಸ್‌. ಸಂಕನೂರ, ಪ್ರದೀಪ್‌ ಶೆಟ್ಟರ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌, ಕಿಮ್ಸ್‌ ನಿರ್ದೇಶಕ ರಾಮಲಿಂಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ ಉಪಸ್ಥಿತರಿದ್ದರು.