ಯುವಕನೊಬ್ಬ ನೇಲ್ ಕಟರ್ ನುಂಗಿದ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಹೊಟ್ಟೆಯಲ್ಲಿದ್ದ ವಸ್ತುವನ್ನು ಹೊರತೆಗೆಯುವುದು ವೈದ್ಯರಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಬದಲಾಗಿ ಎಂಡೋಸ್ಕೋಪಿ ವಿಧಾನವನ್ನು ಬಳಸಿ ವೈದ್ಯರು ನೇಲ್ ಕಟರ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ

ಬೆಳಗಾವಿ: ನೇಲ್ ಕಟರ್ ನುಂಗಿದ್ದ 20 ವರ್ಷದ ಯುವಕನ ಹೊಟ್ಟೆಯಿಂದ ಅದನ್ನು ಎಂಡೋಸ್ಕೋಪಿ ಮೂಲಕ ಹೊರತೆಗೆದು ಬೆಳಗಾವಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಡೆಸಿದೆ. ಸವಾಲಿನ ವೈದ್ಯಕೀಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವೈದ್ಯರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಯುವಕನೊಬ್ಬ ನೇಲ್ ಕಟರ್ ನುಂಗಿದ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಹೊಟ್ಟೆಯಲ್ಲಿದ್ದ ವಸ್ತುವನ್ನು ಹೊರತೆಗೆಯುವುದು ವೈದ್ಯರಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಬದಲಾಗಿ ಎಂಡೋಸ್ಕೋಪಿ ವಿಧಾನವನ್ನು ಬಳಸಿ ವೈದ್ಯರು ನೇಲ್ ಕಟರ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಬಳಿಕ ಯುವಕನಿಗೆ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಆರೈಕೆ ನೀಡಿ ಬಿಡುಗಡೆ ಮಾಡಲಾಗಿದೆ.

ಸದ್ಯ ಯುವಕ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಿಮ್ಸ್‌ನ ವೈದ್ಯ ಡಾ.ಗಣೇಶ ಕೊಪ್ಪದ, ಹಿರಿಯ ಗ್ಯಾಸ್ಟ್ರೋಎಂಟರಾಲಜಿ ತಂತ್ರಜ್ಞ ದೀಪಕ್ ಕೆಂಗೇರಿ ಸೇರಿದಂತೆ ವೈದ್ಯಕೀಯ ತಂಡದ ಇತರ ಸದಸ್ಯರು ಪಾಲ್ಗೊಂಡಿದ್ದರು.

ವರ್ಷದಲ್ಲಿ 800 ಎಂಡೋಸ್ಕೋಪಿ ಪ್ರಕ್ರಿಯೆ

ಬಿಮ್ಸ್ ಆಸ್ಪತ್ರೆಯ ಎಂಡೋಸ್ಕೋಪಿ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 800 ಎಂಡೋಸ್ಕೋಪಿ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 50 ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ ಕೊಲಾಂಜಿಯೋಪ್ಯಾಂಕ್ರಿಯಾಟೋಗ್ರಫಿ (ERCP) ಪ್ರಕ್ರಿಯೆಗಳು ಸೇರಿವೆ. ಇದರ ಜತೆಗೆ ಈಸೋಫಜಿಯಲ್ ವೆರಿಸಿಯಲ್ ಲಿಗೇಶನ್ (EVL), ಜೀರ್ಣಾಂಗದ ಕಿರಿದಾದ ಭಾಗವನ್ನು ವಿಸ್ತರಿಸುವ ಡೈಲೇಟೇಶನ್ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ.

ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಎಂಡೋಸ್ಕೋಪಿ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಿತ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನದ ನೆರವಿನಿಂದ ಬಿಮ್ಸ್‌ನಲ್ಲಿ ಇಂತಹ ಚಿಕಿತ್ಸಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

ಬಿಮ್ಸ್ ವೈದ್ಯಕೀಯ ತಂಡದ ಸಾಧನೆಗೆ ಸಂಸ್ಥೆಯ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಮುಖ್ಯ ಆಡಳಿತಾಧಿಕಾರಿ ರೇಷ್ಮಾ ತಾಳಿಕೋಟಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಜಗದೀಶ ಗಾಣಗಿ ಅವರು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗಡಿಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ:

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯು ಕರ್ನಾಟಕದ ಜನರ ಜತೆಗೆ ಮಹಾರಾಷ್ಟ್ರ ಮತ್ತು ಗೋವಾ ಗಡಿಭಾಗದ ಜನರಿಗೂ ಆರೋಗ್ಯ ಸೇವೆ ಒದಗಿಸುತ್ತಿದೆ. ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದ್ದು, ಆರೋಗ್ಯ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಹಾಗೂ ವೈದ್ಯಕೀಯ ತಂಡ ಬದ್ಧವಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.