Father Performs Daughters Last Rites and Feeds Village After She Elopes ಬೆಳಗಾವಿಯ ರಾಯಬಾಗ ತಾಲೂಕಿನಲ್ಲಿ, 19 ವರ್ಷದ ಮಗಳು ಪ್ರೀತಿಸಿ ಓಡಿಹೋಗಿ ಮದುವೆಯಾದ ಕಾರಣಕ್ಕೆ ನೊಂದ ತಂದೆಯೊಬ್ಬರು, ಆಕೆ ತಮ್ಮ ಪಾಲಿಗೆ ಸತ್ತಳೆಂದು ಭಾವಿಸಿ ತಿಥಿ ಕಾರ್ಯ ನೆರವೇರಿಸಿದ್ದಾರೆ. 

ಬೆಳಗಾವಿ (ಅ.11): ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತಮ್ಮ 19 ವರ್ಷದ ಮಗಳು ಸುಶ್ಮಿತಾ ಶಿವಗೌಡ ಪಾಟೀಲ್‌ ಓಡಿ ಹೋಗಿ ಮದುವೆಯಾಗಿದ್ದರಿಂದ ನೊಂದಿದ್ದ ಆಕೆಯ ತಂದೆ ಶಿವಗೌಡ ಪಾಟೀಲ್‌, ಆಕೆ ತಮ್ಮ ಪಾಲಿಗೆ ಸತ್ತಳೆಂದು ಭಾವಿಸಿ ತಿಥಿ ಕಾರ್ಯ ನೆರವೇರಿಸಿದ್ದಾರೆ. ತಿಥಿ ಕಾರ್ಯ ಮಾಡಿದ್ದು ಮಾತ್ರವಲ್ಲದೆ, ಊರಿನವರು ಹಾಗೂ ಬಂಧು-ಬಳಗಕ್ಕೆಲ್ಲಾ ಭರ್ಜರಿ ಭೋಜನ ಹಾಕಿಸಿ ಸಿಟ್ಟು ತೋಡಿಕೊಂಡಿದ್ದಾರೆ.

19 ವರ್ಷದ ಸುಶ್ಮಿತಾ, 29 ವರ್ಷದ ಹುಡುಗ ಪರಸ್ಪರ ಪ್ರೀತಿಸಿ ಮನೆಯಿಂದ ಪರಾರಿಯಾಗಿದ್ದಳು. ಇದರಿಂದ ನೊಂದಿದ್ದ ತಂದೆ, ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಮಾಡಿ ಊರಿಗೆ ಊಟ ಹಾಕಿಸಿದ್ದಾರೆ. ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧವನ್ನೇ ತಂದೆ ಕತ್ತರಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ಸುಶ್ಮಿತಾ ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಳು. ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡುತ್ತಿದ್ದಾರೆ. ಸುಶ್ಮಿತಾ ತಂದೆಯ ನಾಲ್ಕು ಜನ ಹೆಣ್ಣುಮಕ್ಕಳು ಪೈಕಿ ಸುಶ್ಮಿತಾ ಕೊನೆಯವಳಾಗಿದ್ದಳು. ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರೋ ಶಿವಗೌಡ ಪಾಟೀಲ್‌ ಈ ಕೆಲಸ ಮಾಡಿದ್ದಾರೆ.

ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಶಿವಗೌಡ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದರು. ಆದರೆ, ವಿಚಾರ ಗೊತ್ತಾದ ಬಳಿಕ ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭರ್ಜರಿ ಭೋಜನ ಹಾಕಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.