Asianet Suvarna News Asianet Suvarna News

ಬೆಳಗಾವಿ: ಮಕ್ಕಳಿಗೆ ತೆರೆದ ಮನೆಯಂತಾದ ಪೊಲೀಸ್‌ ಠಾಣೆಗಳು!

ಪೊಲೀಸ್‌ ಇಲಾಖೆ ಮಕ್ಕಳಿಗಿನ್ನು ‘ತೆರೆದಮನೆ’| ಬೆಳಗಾವಿಯಲ್ಲಿ ಮಕ್ಕಳ ಸ್ನೇಹಿ ಪೊಲೀಸ್‌| ಮಕ್ಕಳಿಗೆ ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಗುತ್ತದೆ|

Belagavi District Police Start Innovative Program
Author
Bengaluru, First Published Jan 23, 2020, 8:43 AM IST
  • Facebook
  • Twitter
  • Whatsapp

ರವಿ ಕಾಂಬಳೆ 

ಹುಕ್ಕೇರಿ(ಜ.23): ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಜಿಲ್ಲಾ ಪೊಲೀಸ್‌ ಇಲಾಖೆ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಈ ಮೂಲಕ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಬೆಳಗಾವಿ ಜಿಲ್ಲೆಯ ಠಾಣೆಗಳಲ್ಲಿ ಹೊಸ ವರ್ಷದಿಂದ ’ತೆರೆದ ಮನೆ’ ಎಂಬ ನೂತನ ಕಾರ್ಯಕ್ರಮ ಶುರುವಾಗಿದೆ. ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಚಿಗುರಿನಲ್ಲೇ ಚಿವುಟಿ ಹಾಕುವ ಮಹತ್ವದ ಕಾರ್ಯಕ್ರಮ ಇದಾಗಿದೆ.

ಹೌದು, ಮಕ್ಕಳನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ರಮವನ್ನು ಬೆಳಗಾವಿ ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಯಶಸ್ವಿಯಾಗಿ ನಡೆಸಲು ಪೊಲೀಸ್‌ ಇಲಾಖೆ ಈಗಾಗಲೇ ಕ್ರಮ ಕೈಕೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ಹಾಗಾಗಿ ಈ ತಿಂಗಳ ಎರಡನೇ ವಾರದಿಂದ ಎಲ್ಲ ಠಾಣೆಗಳು ಮಕ್ಕಳಿಗೆ ಅಕ್ಷರಶಃ ತೆರೆದ ಮನೆಯಂತಾಗಿವೆ ಎಂಬುದಂತು ಸತ್ಯ. ಬಾಂಧವ್ಯ ವೃದ್ಧಿಗಾಗಿ ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ಮತ್ತು ಪೊಲೀಸ್‌ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎನ್ನುವುದು ಕಾರ್ಯಕ್ರಮದ ಮೂಲ ಉದ್ದೇಶ. ಪೊಲೀಸರು ಕೂಡ ಸಮಾಜದ ಒಂದು ಭಾಗ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ.

ವಿಭಿನ್ನ ಕಾರ್ಯಕ್ರಮ:

ನಮ್ಮನ್ನು ರಕ್ಷಿಸುವ ಪೊಲೀಸರೆಂದರೆ ಭಯದ ವಾತಾವರಣ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಈ ಭಯ ಹೋಗಲಾಡಿಸಿ ಪೊಲೀಸರೆಂದರೆ ಸಮಾಜಮುಖಿ ಕೆಲಸ ಮಾಡುವವರು ಮತ್ತು ಜನಸ್ನೇಹಿ ವ್ಯವಸ್ಥೆಯಲ್ಲಿ ಇರುವವರು ಎನ್ನುವುದನ್ನು ಮನದಟ್ಟು ಮಾಡಿಕೊಡುವ ಸಲುವಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ತೆರೆದ ಮನೆ ಎನ್ನುವುದು ಕೂಡ ಇದರಲ್ಲಿ ಒಂದು. ತಿಂಗಳಿಗೆ ಒಂದು ದಿನ ಪೊಲೀಸ್‌ ಠಾಣೆಯನ್ನು ಈ ಕಾರ್ಯಕ್ರಮಕ್ಕಾಗಿಯೇ ಮೀಸಲಿಡಬೇಕಾಗುತ್ತದೆ. ಸಾಮಾನ್ಯವಾಗಿ ಗುರುವಾರ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ವೈವಿಧ್ಯಮಯ ಮಾಹಿತಿ:

ತೆರೆದ ಮನೆ ಕಾರ್ಯಕ್ರಮ ಅಂಗವಾಗಿ ನಿಗದಿತ ದಿನದಂದು ನಿಗದಿತ ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಪೊಲೀಸ್‌ ಠಾಣೆಗಳಿಗೆ ಕರೆಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸಂಪೂರ್ಣ ಮುಕ್ತವಾಗಿದೆ. ಪೊಲೀಸ್‌ ಮತ್ತು ಶಾಲಾ ಮಕ್ಕಳ ಮಧ್ಯೆ ಬಾಂಧವ್ಯ ವೃದ್ಧಿ, ವಿದ್ಯಾರ್ಥಿಗಳಿಗೆ ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ.

ಪೊಲೀಸ್‌ ವ್ಯವಸ್ಥೆ, ದಾಖಲೆಗಳ ಮಾಹಿತಿ:

ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್‌ ವಿಭಾಗ, ಠಾಣಾ ಬರಹಗಾರರ ವಿಭಾಗ, ಠಾಣಾ ದಿನಚರಿ, ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುವದು. ಡ್ಯೂಟಿ ರಜಿಸ್ಟರ್‌, ವಿಲೇಜ್‌ ರಜಿಸ್ಟರ್‌, ಅಂಗ ಶೋಧನಾ ಪುಸ್ತಕ, ಕೈದಿ ಬಂಧನ ಪುಸ್ತಕ, ಸಮನ್ಸ್‌ ನೋಂದಣಿ, ವಾರಂಟ್‌ ನೊಂದಣಿ, ಎಂಒಬಿ ಪುಸ್ತಕ, ರೌಡಿ ರಜಿಸ್ಟರ್‌, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಪಾಸ್‌ಪೋರ್ಟ್‌ ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕಗಳ ಬಗ್ಗೆಯೂ ಮಕ್ಕಳಿಗೆ ತಿಳಿವಳಿಕೆ ನೀಡಲಾಗುವುದು.

ಈ ಬಗ್ಗೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, ತೆರೆದ ಮನೆ ಕಾರ್ಯಕ್ರಮ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿದೆ. ಪೊಲೀಸ್‌ ಬಗೆಗಿನ ಭಯ ಹೋಗಲಾಡಿಸುವುದರ ಜತೆಗೆ ಮಕ್ಕಳಿಗೆ ಪೊಲೀಸ್‌ ಕಾರ್ಯವೈಖರಿಯ ಪರಿಚಯವನ್ನೂ ಮಾಡಿಕೊಡಲಾಗುವುದು. ಅಗತ್ಯ ಕಾನೂನುಗಳನ್ನೂ ತಿಳಿಸಿಕೊಡಲಾಗುವುದು. ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ಮತ್ತು ಪೊಲೀಸ್‌ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎನ್ನುವುದು ಕಾರ್ಯಕ್ರಮದ ಮೂಲ ಉದ್ದೇಶ. ಪೊಲೀಸರು ಕೂಡ ಸಮಾಜದ ಒಂದು ಭಾಗ. ಹುಕ್ಕೇರಿ ಠಾಣೆ ವ್ಯಾಪ್ತಿಯಲ್ಲಿ ಈ ನೂತನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ ಎಂದು ಪಿಎಸ್‌ಐ ಶಿವಾನಂದ ಗುಡಗನಟ್ಟಿ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios