ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ ವಿಭಾಗದ ಪ್ರತಿನಿತ್ಯದ ಹಾಗೂ ಆರೋಪಿಯ ಸಮಗ್ರ ಮಾಹಿತಿಯನ್ನು ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಆಫ್‌ ಬ್ಯುರೋ ರಾಜ್ಯಗಳಿಂದ ಅಪೇಕ್ಷಿಸುತ್ತದೆ. ಸಮಗ್ರ ಮಾಹಿತಿಯನ್ನು ಪರಿಶೀಲನೆ ನಡೆಸಿದ ಎನ್‌ಸಿಆರ್‌ಬಿ ದೇಶದಲ್ಲಿರುವ ರಾಜ್ಯಗಳಿಗೆ ಶ್ರೇಯಾಂಕ ನೀಡುತ್ತದೆ. 

ಜಗದೀಶ ವಿರಕ್ತಮಠ 

ಬೆಳಗಾವಿ(ಜ.13): ಪೊಲೀಸರು ನಿತ್ಯ ಕಾರ್ಯನಿರ್ವಹಿಸುವ ಪೊಲೀಸ್‌ ಐಟಿ ನಿರ್ವಹಣೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಹಾಗೂ ರಾಜ್ಯದಲ್ಲಿಯೇ ಬೆಳಗಾವಿ ಉತ್ತರ ವಲಯ ಮಹಾನಿರೀಕ್ಷರರ ವ್ಯಾಪ್ತಿಯ ಜಿಲ್ಲೆಗಳ ಪೊಲೀಸರು ಉತ್ತಮ ಸಾಧನೆ ಮಾಡಿವೆ. ಅದರಲ್ಲೂ ಬೆಳಗಾವಿ ನಗರ ಹಾಗೂ ಜಿಲ್ಲೆಯ ಪೊಲೀಸರ ಕಾರ್ಯಕ್ಷಮತೆಯಿಂದ ರಾಜ್ಯಕ್ಕೆ ಬೆಳಗಾವಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದೆ.

ಸ್ಟೇಟ್‌ ಕ್ರೈಂ ರೆಕಾರ್ಡ್‌ ಆಫ್‌ ಬ್ಯುರೋ (ಎಸ್‌ಸಿಆರ್‌ಬಿ) ಪ್ರತಿ ತಿಂಗಳು ರಾಜ್ಯದ ಎಲ್ಲ ಜಿಲ್ಲೆಗಳ ಪೊಲೀಸ್‌ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ಅಂಕಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ. ಅದರಲ್ಲಿ ಬೆಳಗಾವಿ ನಗರ, ಬೆಂಗಳೂರು ನಗರ ಆಗ್ನೇಯ ವಿಭಾಗ, ಪಶ್ಚಿಮ ವಿಭಾಗ, ಕೇಂದ್ರ ವಿಭಾಗ, ಬಾಗಲಕೋಟೆ, ಕಲಬುರಗಿ, ಬೀದರ್‌, ಬೆಳಗಾವಿ, ಕೊಪ್ಪಳ, ಕಲಬುರಗಿ ನಗರ ಮಂಗಳೂರು ನಗರ ಹಾಗೂ ಧಾರವಾಡ ಜಿಲ್ಲೆಗಳು ನೂರಕ್ಕೆ ನೂರು ಶ್ರೇಯಾಂಕಗಳನ್ನು ಪಡೆದುಕೊಳ್ಳುವ ಮೂಲಕ ಮೊದಲ ರ‍್ಯಾಂಕ್‌ನಲ್ಲಿವೆ. ಇನ್ನು ಗದಗ, ಬಳ್ಳಾರಿ, ವಿಜಯಪುರ ಹಾಗೂ ಶಿವಮೊಗ್ಗ ಜಿಲ್ಲೆಗಳು ಶೇ.99ರಷ್ಟು ಶ್ರೇಯಾಂಕ ಪಡೆದುಕೊಂಡಿವೆ. ಅದರಲ್ಲೂ ಬೆಳಗಾವಿ ಉತ್ತರ ವಲಯ ಐಜಿಪಿ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ ಹಾಗೂ ಗದಗ ಜಿಲ್ಲೆಗಳು ಉತ್ತಮ ಕಾರ್ಯ ಸಾಧನೆ ಮಾಡಿವೆ. ಅದಲ್ಲರೂ ಕಳೆದ ನಾಲ್ಕೈದು ತಿಂಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸರು ಪ್ರಥಮ ರ‍್ಯಾಂಕ್‌ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು: ನೌಕರನ ತಡೆದು ರಾತ್ರಿ 2,500 ರೂ. ಸುಲಿದ ಪೊಲೀಸ್‌?

ಐಟಿ ಕಾರ್ಯನಿರ್ವಹಣೆ ಹೇಗೆ?:

ಕಳೆದ 2011ರಲ್ಲಿ ಸಿದ್ಧಗೊಂಡಿರುವ ವೆಬ್‌ ಬೇಸ್ಡ್‌ ಪೊಲೀಸ್‌ ಮಾಹಿತಿ ತಂತ್ರಾಂಶ (ಪೊಲೀಸ್‌ ಐಟಿ)ಯಲ್ಲಿ ಪ್ರತಿನಿತ್ಯದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿಯನ್ನು ಪೊಲೀಸ್‌ ಐಟಿಯಲ್ಲೇ ಅಪ್ಲೋಡ್‌ ಮಾಡಬೇಕು. ಅಪರಾಧ, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಎಂಬ ವಿಭಾಗದಲ್ಲಿ ಪ್ರತಿನಿತ್ಯದ ಕಾರ್ಯದ ಕುರಿತು ಮಾಹಿತಿಯನ್ನು ಅಪ್ಲೋಡ್‌ ಮಾಡಲಾಗುತ್ತಿದೆ. ಅಪರಾಧ ವಿಭಾಗದಲ್ಲಿ ಬಂಧಿತ ಆರೋಪಿಯ ಹೆಸರು, ವಿಳಾಸ, ವಯಸ್ಸು, ಜಾತಿ, ಧರ್ಮ, ಫೋನ್‌ ನಂಬರ್‌, ಉದ್ಯೋಗ ಮತ್ತು ಆತನ ಹಿನ್ನೆಲೆಯನ್ನು ಅಪ್ಲೋಡ್‌ ಮಾಡಲಾಗುತ್ತದೆ. ಜತೆಗೆ ಆತನ ಕೃತ್ಯದ ಬಗ್ಗೆ ಪ್ರಾಥಮಿಕ ಮಾಹಿತಿ, ದೋಷಾರೋಪಣ ಪಟ್ಟಿಜತೆಗೆ ನ್ಯಾಯಾಲಯದಲ್ಲಿ ತೀರ್ಪು ಇತ್ಯರ್ಥವಾಗುವವರೆಗಿನ ಮಾಹಿತಿ ಹಾಕಲಾಗುತ್ತದೆ. ಇನ್ನು ಸಂಚಾರ ವಿಭಾಗದಲ್ಲಿ ಅಪಘಾತ, ಸಾವು, ನೋವು, ವಾಹನ ಕಳ್ಳತನ ಸೇರಿದಂತೆ ಇನ್ನಿತರ ಸಮಗ್ರ ಮಾಹಿತಿ ಅಪ್ಲೋಡ್‌ ಮಾಡಲಾಗುತ್ತದೆ. ಅದರಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿನ ಬಂದೋಬಸ್‌್ತ ನಿಯೋಜನೆ, ಕರ್ತವ್ಯ ನೇಮಕ ಹಾಗೂ ಠಾಣೆಯಲ್ಲಿ ಪ್ರತಿನಿತ್ಯದ ಮಾಹಿತಿಯನ್ನು ಐಟಿ ತಂತ್ರಾಂಶದಲ್ಲಿ ಹಾಕಲಾಗುತ್ತಿದೆ.

ಶ್ರೇಯಾಂಕ ನೀಡುವ ವಿಧಾನ:

ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ ವಿಭಾಗದ ಪ್ರತಿನಿತ್ಯದ ಹಾಗೂ ಆರೋಪಿಯ ಸಮಗ್ರ ಮಾಹಿತಿಯನ್ನು ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಆಫ್‌ ಬ್ಯುರೋ (ಎನ್‌ಸಿಆರ್‌ಬಿ) ರಾಜ್ಯಗಳಿಂದ ಅಪೇಕ್ಷಿಸುತ್ತದೆ. ಸಮಗ್ರ ಮಾಹಿತಿಯನ್ನು ಪರಿಶೀಲನೆ ನಡೆಸಿದ ಎನ್‌ಸಿಆರ್‌ಬಿ ದೇಶದಲ್ಲಿರುವ ರಾಜ್ಯಗಳಿಗೆ ಶ್ರೇಯಾಂಕ ನೀಡುತ್ತದೆ. ಅದರಲ್ಲೂ ಕರ್ನಾಟಕ ಕಳೆದ ಕೆಲವು ವರ್ಷಗಳಿಂದ ಪ್ರಥಮ ರ‍್ಯಾಂಕ್‌ ಜತೆಗೆ ಟಾಪ್‌ ಮೂರರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾ ಬಂದಿದೆ. ಎನ್‌ಸಿಆರ್‌ಬಿ ರಾಜ್ಯಗಳಿಗೆ ನೀಡಿದ ಶ್ರೇಯಾಂಕದಂತೆ ಸ್ಟೇಟ್‌ ಕ್ರೈಮ್‌ ರೆಕಾರ್ಡ್‌ ಆಫ್‌ ಬ್ಯುರೋ (ಎಸ್‌ಸಿಆರ್‌ಬಿ) ಜಿಲ್ಲೆ ಹಾಗೂ ನಗರ ಪೊಲೀಸರ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ ಪೊಲೀಸರು ಠಾಣೆಗಳಲ್ಲಿ ಪ್ರತಿನಿತ್ಯ ಕಾರ್ಯನಿರ್ವಹಿಸುವ ಪೊಲೀಸ್‌ ಐಟಿಯ ಮೂಲಕವೇ ದೇಶದಲ್ಲಿನ ಎಲ್ಲ ರಾಜ್ಯಗಳ ಪೊಲೀಸರ ಕಾರ್ಯನಿರ್ವಹಣೆ ಕುರಿತು ಅವಲೋಕನ ಮಾಡುತ್ತಾರೆ. ನಂತರ ರಾಜ್ಯಗಳ ಕಾರ್ಯನಿರ್ವಹಣೆ ಎಸ್‌ಸಿಆರ್‌ಬಿ ಕುರಿತು ಪರಿಶೀಲನೆ ನಡೆಸಿ ಜಿಲ್ಲಾವಾರು ಶ್ರೇಯಾಂಕ ನೀಡಲಾಗುತ್ತದೆ. ಬೆಳಗಾವಿ ಕಳೆದ ಎರಡು ವರ್ಷಗಳ ಹಿಂದೆ 28ನೇ ಸ್ಥಾನಕ್ಕಿತ್ತು. ಒಂದು ವರ್ಷದಿಂದ ಉತ್ತಮ ಕಾರ್ಯನಿರ್ವಹಣೆಯೊಂದಿಗೆ 18ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳುವಂತಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಬೆಳಗಾವಿ ನಗರ ಹಾಗೂ ಜಿಲ್ಲೆಯ ಪೊಲೀಸರ ಕಾರ್ಯಕ್ಷಮತೆಯಿಂದ ಪ್ರಥಮ ರ‍್ಯಾಂಕ್‌ ಪಡೆದುಕೊಂಡಿವೆ. ರಾರ‍ಯಂಕ್‌ಪಟ್ಟಿಯನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತದೆ.

ಬೆಳಗಾವಿ ಉತ್ತರ ವಲಯ ಐಜಿಪಿ ವ್ಯಾಪ್ತಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್‌ ಐಟಿ ಮೂಲಕ ಉತ್ತಮ ಕಾರ್ಯನಿರ್ವಹಣೆ ಮಾಡಲಾಗಿದೆ. ಇದರಿಂದಾಗಿ ಸ್ಟೇಟ್‌ ಕ್ರೈಂ ರೆಕಾರ್ಡ್‌ ಆಫ್‌ ಬ್ಯುರೋ (ಎಸ್‌ಸಿಆರ್‌ಬಿ) ಬಿಡುಗಡೆ ಮಾಡುವ ಪಟ್ಟಿಯಲ್ಲಿ ಬೆಳಗಾವಿ ಐಜಿಪಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳಿಗೆ ಉತ್ತಮ ಶ್ರೇಯಾಂಕ ಲಭಿಸಿದೆ. ಈ ಉತ್ತಮ ಕಾರ್ಯದ ಹಿಂದೆ, ಪೇದೆಗಳಿಂದ ಹಿಡಿದು, ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಎಸ್‌ಪಿವರೆಗೂ ಶ್ರಮವಿದೆ. ಆದ್ದರಿಂದ ಈ ಶ್ರೇಯಸ್ಸು ಎಲ್ಲ ಸಿಬ್ಬಂದಿಗೆ ಲಭಿಸಲಿ ಮತ್ತು ಎಲ್ಲರ ಕಾರ್ಯನಿರ್ವಹಣೆಯನ್ನು ಅಂಭಿನಂದಿಸುತ್ತೇನೆ ಅಂತ ಬೆಳಗಾವಿ ಉತ್ತರ ವಲಯ ಐಜಿಪಿ ಎನ್‌. ಸತೀಶಕುಮಾರ ತಿಳಿಸಿದ್ದಾರೆ. 

ಎಸಿಪಿ ಬೇಡವೆಂದರೂ ಸ್ಯಾಂಟ್ರೋ ರವಿ ಪತ್ನಿ ಬಂಧಿಸಿ ಜೈಲಿಗಟ್ಟಿದ ಇನ್‌ಸ್ಪೆಕ್ಟರ್‌!

ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿನ 35 ಪೊಲೀಸ್‌ ಠಾಣೆಯಲ್ಲಿನ ಸಿಬ್ಬಂದಿಯ ಉತ್ತಮ ಕಾರ್ಯನಿರ್ವಹಣೆಯಿಂದ ನೂರಕ್ಕೆ ನೂರಷ್ಟು ಶ್ರೇಯಾಂಕ ಪಡೆದುಕೊಳ್ಳಲಾಗಿದೆ. ಅದರಲ್ಲೂ ಉತ್ತರ ವಲಯ ಐಜಿಪಿ ಎನ್‌. ಸತೀಶಕುಮಾರ ಅವರು ತಮ್ಮ ಅಧೀನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಾಡುವ ಮಾರ್ಗದರ್ಶನವೂ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿನ ಎಲ್ಲ ಠಾಣೆಗಳಲ್ಲಿ ಪೊಲೀಸ್‌ ಐಟಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ ಅಂತ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ್‌ ಪಾಟೀಲ ಹೇಳಿದ್ದಾರೆ. 

ಬೆಳಗಾವಿ ನಗರ ಪೊಲೀಸ್‌ ಕಮಿಷ್ನೇರೆಟ್‌ ವ್ಯಾಪ್ತಿಯಲ್ಲಿ ಎಲ್ಲ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಪೊಲೀಸ್‌ ಐಟಿಯಲ್ಲಿನ ಕಾರ್ಯನಿರ್ವಹಿಸಿದ್ದಾರೆ. ಅಪರಾಧ, ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಸಂಪೂರ್ಣ ಮಾಹಿತಿ ಕಲೆ ಹಾಕಿ ತತ್ರಾಂಶದಲ್ಲಿ ಅಪ್ಲೋಡ ಮಾಡಿದ್ದರಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳುವಂತಾಗಿದೆ. ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ ಅಂತ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ.