ಬೆಳಗಾವಿಯ ಉದ್ಯಮಭಾಗದಲ್ಲಿ ಕಸ ವಿಂಗಡಣೆ ಮಾಡುವಾಗ ಪೌರಕಾರ್ಮಿಕರಿಗೆ 59 ಬಳಕೆಯಾದ ಗುಂಡುಗಳು ಪತ್ತೆಯಾಗಿವೆ. ಪೊಲೀಸರ ತನಿಖೆಯಿಂದ, ವಿಜಯಪುರದ ಮಾಜಿ ಸೈನಿಕನೊಬ್ಬ ಸಂಬಂಧಿಕರ ಮನೆಯಲ್ಲಿ ಬಿಟ್ಟುಹೋಗಿದ್ದ ಈ ಗುಂಡುಗಳನ್ನು, ಮನೆ ಖಾಲಿ ಮಾಡುವಾಗ ಕಸಕ್ಕೆ ಎಸೆಯಲಾಗಿತ್ತು ಎಂಬುದು ತಿಳಿದುಬಂದಿದೆ.

ಬೆಳಗಾವಿ (ಜೂ.16): ಕಸ ಬಳಿಯುವಾಗ ಒಂದಲ್ಲ ಎರಡಲ್ಲ ಬರೋಬ್ಬರಿ 59 ಬಳಕೆಯಾದ ಗುಂಡುಗಳು ಕಂಡು ಪೌರಕಾರ್ಮಿಕರು ಬೆಚ್ಚಿಬಿದ್ದ ಘಟನೆ ಬೆಳಗಾವಿ(Belagavi) ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶ(udyamabhaga Sector Industrial Area)ದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಸದ ರಾಶಿಯಲ್ಲಿ ಬಳಕೆಯಾಗದ ಗುಂಡುಗಳು!

ಎಂದಿನಂತೆ ಕಸ ವಿಂಗಡಣೆಯಲ್ಲಿ ತೊಡಗಿದ್ದ ಪೌರ ಕಾರ್ಮಿಕರು. ಈ ವೇಳೆ ಕಸದ ರಾಶಿಯಲ್ಲಿ 59 ಬಳಕೆಯಾದ ಗುಂಡುಗಳು ಕಣ್ಣಿಗೆ ಬಿದ್ದು ಶಾಕ್ ಆಗಿದ್ದಾರೆ. ಕೆಲಕಾಲ ಆತಂಕಗೊಂಡಿದ್ದರು. ಬಳಿಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಮಾಹಿತಿ ತಿಳಿಯುತ್ತಿದ್ದಂತೆ ಉದ್ಯಮಭಾಗ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಸಿಕ್ಕ ಅಷ್ಟು ಗುಂಡುಗಳು ಕಂಡು ಪೊಲೀಸರು ಶಾಕ್ ಆದ್ರು. ಇಷ್ಟು ಗುಂಡುಗಳು ಎಲ್ಲಿಂದ ಬಂದವು ಎಂದು ಒಂದು ಕ್ಷಣ ಪೊಲೀಸರಿಗೂ ಟೆನ್ಷನ್ ಹೆಚ್ಚಿಸಿತು. ಪತ್ತೆಯಾದ ಗುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ವೇಳೆ ತಿಳಿದುಬಂದಿದ್ದೇನೆಂದರೆ..

ತನಿಖೆಯಲ್ಲಿ ಹೊರಬಿತ್ತು ಶಾಕಿಂಗ್ ಮಾಹಿತಿ

ಆರಂಭದಲ್ಲಿ ಇಷ್ಟೊಂದು ಗುಂಡುಗಳು ಹೇಗೆ ಕಸದ ರಾಶಿಗೆ ಬಂದವು ಎಂಬುದು ಪೊಲೀಸರಿಗೆ ಕುತೂಹಲ, ಆತಂಕ ಉಂಟು ಮಾಡಿತ್ತು. ಆದರೆ ತನಿಖೆ ವೇಳೆ ವಿಜಯಪುರ ಮೂಲದ ಮಾಜಿ ಸೈನಿಕನೊಬ್ಬ ತನ್ನ ಸಂಬಂಧಿಕರ ಮಕ್ಕಳಿಗೆ ತೋರಿಸಲು ಬಳಕೆಯಾದ ಗುಂಡುಗಳನ್ನು ಬೆಳಗಾವಿಯಲ್ಲಿರುವ ಸಂಬಂಧಿಕರ ಮನೆಗೆ ತಂದಿದ್ದ ಎಂಬ ಮಾಹಿತಿ ಬಹಿರಂಗವಾಯ್ತ.

ಮನೆ ಖಾಲಿ ಮಾಡುವಾಗ ತಿಪ್ಪೆಗೆ ಎಸೆದ ಸಂಬಂಧಿಕರು!

ಸಂಬಂಧಿಕರ ಮನೆಗೆ ಹೋಗಿದ್ದ ವಿಜಯಪುರ ಮೂಲದ ಸೈನಿಕ. ಈ ವೇಳೆ ಮಕ್ಕಳಿಗೆ ತೋರಿಸಲು ಗುಂಡುಗಳನ್ನ ತಂದಿದ್ದ. ಆದರೆ ಹೊಣೆಗೇಡಿತನ ಅನ್ನಬೇಕೋ ದಡ್ಡತನ ಅನ್ನಬೇಕೋ ನೋಡಿ, ಅವರ ಮನೆಯಿಂದ ಹೊರಬರುವಾಗ ಅಷ್ಟು ಗುಂಡುಗಳನ್ನು ಅವರ ಮನೆಯಲ್ಲೇ ಸೈನಿಕ ಬಿಟ್ಟುಬಂದಿದ್ದಾನೆ. ಮನೆಯಲ್ಲೇ ಉಳಿದಿದ್ದ ಗುಂಡುಗಳು ಮನೆ ಖಾಲಿ ಮಾಡುವ ವೇಳೆ ಅವುಗಳ ಮಹತ್ವ ಅರಿಯದೇ ತಿಪ್ಪೆಗೆ ಎಸೆದಿದ್ದಾರೆ ಎನ್ನಲಾಗಿದೆ. ಇದೇ ಗುಂಡುಗಳು ಕಸದ ರಾಶಿಯಲ್ಲಿ ಪತ್ತೆಯಾಗಿದ್ದು, ಅನಗತ್ಯ ಆತಂಕಕ್ಕೆ ಕಾರಣವಾಗಿವೆ.

ಬಳಕೆಯಾದ ಗುಂಡುಗಳೇ?

ಪತ್ತೆಯಾದ ಎಲ್ಲಾ 59 ಗುಂಡುಗಳೂ ಈಗಾಗಲೇ ಬಳಕೆಯಾದವುಗಳಾಗಿದ್ದು, ಅವುಗಳಿಂದ ಯಾವುದೇ ಅಪಾಯ ಇಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೂ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ಪರಿಶೀಲನೆ ಮುಂದುವರಿಸಿದ್ದಾರೆ.

ಮಾಜಿ ಸೈನಿಕನ ಹಿನ್ನೆಲೆ ಪರಿಶೀಲನೆ

ಗುಂಡುಗಳು ಮಾಜಿ ಸೈನಿಕನ ಬಳಿ ಹೇಗೆ ಬಂದವು, ಅವುಗಳನ್ನು ಸಂಗ್ರಹಿಸಿಟ್ಟಿದ್ದಕ್ಕೆ ಕಾರಣವೇನು ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಪ್ರಕರಣ ಬೆಳಗಾವಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಮುಂದುವರಿದಿದೆ.