ಬೆಳಗಾವಿ(ಜು.12): ಬ್ಯಾಂಕ್‌ಗಳ ರಸೀದಿಯಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಲೇಬೇಕು. ಅದೇ ರೀತಿ ಬ್ಯಾಂಕಿನ ಕರಾರುಪತ್ರಗಳನ್ನು ಕೂಡ ಕನ್ನಡ ದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆದೇಶ ಜಾರಿಗೆ ಒಂದು ತಿಂಗಳ ಕಾಲಾವಕಾಶ:

ರಸೀದಿ, ಕರಾರು ಪತ್ರಗಳನ್ನು ಕನ್ನಡದಲ್ಲಿ ಮುದ್ರಿಸಲು ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿ, ಒಂದು ತಿಂಗಳಿನಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತೆ ನೋಡಿಕೊ ಳ್ಳಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು. ಇಂಗ್ಲಿಷ್‌ನಲ್ಲಿರುವ ರಸೀದಿ, ಕರಾರು ಪತ್ರಗಳಲ್ಲಿ ರೈತರು, ಜನತೆಯಿಂದ ಸಹಿ ಪಡೆದು ಬಳಿಕ ಕಾನೂನು ತೊಡಕಾದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆಯಾಗಬೇಕಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿರುವ ಸಾಲದ ಕರಾರು ಪತ್ರಗಳಿಗೆ ಗ್ರಾಹಕರಿಂದ ಸಹಿ ಪಡೆಯುವ ಮೂಲಕ ಅವರನ್ನು ಕತ್ತಲಲ್ಲಿಡುತ್ತವೆ. ಹಾಗಾಗಿ, ಕನ್ನಡ ಭಾಷೆ ಯಲ್ಲೇ ಕಡ್ಡಾಯವಾಗಿ ಬ್ಯಾಂಕಿಂಗ್ ವ್ಯವಹಾ ರಗಳನ್ನು ಮಾಡಲು ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು.

ಕನ್ನಡ ನಿರ್ಲಕ್ಷ್ಯ: ಪಿಡಿಒ ಅಮಾನತಿಗೆ ಸೂಚನೆ

ಡಲಗಾ ಗ್ರಾಮ ಪಂಚಾಯತಿಯಲ್ಲಿ ಬೇರೆ ಭಾಷೆಯಲ್ಲಿ ರಸೀದಿ ನೀಡುವ ಜತೆಗೆ ಆಡಳಿತ ದಲ್ಲಿ ಕನ್ನಡ ಅನುಷ್ಠಾನ ನಿರ್ಲಕ್ಷಿಸಿರುವ ಬಗ್ಗೆ ಪರಿಶೀಲಿಸಿ ತಕ್ಷಣ ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೂಚಿಸಿದರು.

ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕೆಲವು ನಗರಸಭೆ, ಪುರಸಭೆ ಸೇರಿದಂತೆ ಕೆಲ ಸ್ಥಳೀಯ ಸಂಸ್ಥೆಗಳು ಮರಾಠಿ ಭಾಷೆಯಲ್ಲಿ ಫಲಕಗಳನ್ನು ಅಳವಡಿಸುತ್ತಿ ದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಹೋರಾಟಗಾರರು ಆಗ್ರಹಿಸಿದರು.ಈ ಬಗ್ಗೆ ಒಂದು ಸಭೆ ನಡೆಸಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಕನ್ನಡ ಫಲಕ ಬಳಕೆಗೆ ನಿರ್ದೇಶನ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸರ್ಕಾರಿ ಕಚೇರಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಕೆ

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ತಮ್ಮ ಕಚೇರಿಯ ಆಡಳಿತ ವೆಚ್ಚದಲ್ಲಿ ಅಳವಡಿಸಬೇಕು. ಗಡಿ ತಾ ಲೂಕು ಗಳಲ್ಲಿರುವ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ತಕ್ಷಣ ನಿಯೋಜಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ , ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಗಳಾದ ಡಾ. ಕವಿತಾ ಯೋಗಪ್ಪನವರ, ಶಿವಾನಂದ ಭಜಂತ್ರಿ, ರವಿ ಸೋಮಲಿಂಗಣ್ಣವರ ಇದ್ದರು.