ಕುಲದೇವಿ ಕಾವೇರಿಗೆ ಅಪಮಾನಿಸಿದ ಕುಟುಂಬಸ್ಥರಿಗೆ ಮತ ಹಾಕ್ತೀರಾ: ಅಪ್ಪಚ್ಚು ರಂಜನ್ ಪ್ರಶ್ನೆ
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುವುದು ಸ್ಪಷ್ಟವಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಫಿಕ್ಸ್ ಎನ್ನಲಾಗುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.3): ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುವುದು ಸ್ಪಷ್ಟವಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಫಿಕ್ಸ್ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯಿಂದ ಮಡಿಕೇರಿ ಕ್ಷೇತ್ರದಲ್ಲಿ ಮತ್ತೆ ಅಪ್ಪಚ್ಚು ರಂಜನ್ಗೆ ಟಿಕೆಟ್ ಎನ್ನಲಾಗುತ್ತಿದ್ದು, ವಿರಾಜಪೇಟೆ ಕ್ಷೇತ್ರದಿಂದ ಬಹುತೇಕ ಕೆ.ಜಿ. ಬೋಪಯ್ಯ ಅವರೇ ಅಭ್ಯರ್ಥಿ ಎಂಬ ಮಾತು ಜನವಲಯದಲ್ಲಿ ಕೇಳಿ ಬರುತ್ತಿವೆ. ಇದರ ನಡುವೆ ಕಮಲದ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ತನ್ನ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಈಗಾಗಲೇ ವ್ಯಾಪಕ ಪ್ರಚಾರ ನಡೆಸುತ್ತಿದೆ. ಆದರೆ ಶುಕ್ರವಾರ ಮಡಿಕೇರಿಯಲ್ಲಿ ನಡೆದ ಬಿಜೆಪಿಯ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲ ಕಾರ್ಯಕರ್ತರ ಸಮಾವೇಶದಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ವಿರಾಜಪೇಟೆ ಕ್ಷೇತ್ರದ ಗೆಲುವಿಗೆ ಬೇಕಾಗಿ ತಂತ್ರ ರೂಪಿಸಿ ಮಾತಿನ ಬಾಣ ಹೂಡಿದರು.
ನಡೆದಿದ್ದು ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವಾದರೂ ಮಾತನಾಡಿದ್ದೆಲ್ಲವೂ ಮಾತ್ರ ವಿರಾಜಪೇಟೆ ಕ್ಷೇತ್ರ ಗೆಲುವಿನ ರಣತಂತ್ರದ ಮಾತುಗಳು. ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ ವಿರಾಜಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಟೂರಿಸ್ಟ್ ಅಭ್ಯರ್ಥಿಯನ್ನು ನಿಲ್ಲಿಸುತ್ತಿದೆ. ಅವರು ಸ್ಪಲ್ಪ ದಿನಗಳ ಕಾಲ ಬೆಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಮಾಡಿದರೆ, ಸ್ವಲ್ಪ ದಿನ ಇಲ್ಲಿ ಇರುತ್ತಾರೆ. ಜನಪ್ರತಿನಿಧಿಯಾದವರು ಯಾವಾಗಲೂ ಕ್ಷೇತ್ರದಲ್ಲಿ ಜನರಿಗೆ ಸಿಗುವಂತಿರಬೇಕು ಎಂದು ಟೀಕಿಸಿದರು.
ಅಷ್ಟೇ ಅಲ್ಲ, ಅವರ ತಂದೆ ಕಾವೇರಿ ತೀರ್ಥೋದ್ಭವ ಎನ್ನುವುದು ಸುಳ್ಳು ಎಂದು ವಾದಿಸಿ ನಮ್ಮ ಕುಲದೇವಿಗೆ ಅಪಮಾನ ಮಾಡಿದ್ದರು. ಇದರ ಜೊತೆಗೆ ಶಬರಿಮಲೆಯಲ್ಲಿ ಮಕರ ಜ್ಯೋತಿ ಬರುವುದು ಸುಳ್ಳು ಎಂದಿದ್ದರು. ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಧ್ವಜ ಆರಿಸಿದವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದರು. ಇಂತಹವರ ಮಗನಿಗೆ ನೀವು ಮತ ಹಾಕಬೇಕಾ ಎಂದು ದೇವರ ಭಾವನಾತ್ಮಕ ವಿಷಯವನ್ನು ದಾಳವಾಗಿ ಉರುಳಿಸಿದರು.
ಚುನಾವಣೆ ಹೊತ್ತಲ್ಲಿ ದೈವದ ಮೊರೆ: ಅಧಿಕಾರ, ಆರೋಗ್ಯ ವೃದ್ಧಿಗೆ ಎಚ್‌ಡಿಕೆ ಕುಟುಂಬ ಮಹಾಯಾಗ
ಆ ಮೂಲಕ ಕೊಡವ ಸಮುದಾಯದವರಾಗಿರುವ ಪೊನ್ನಣ್ಣ ಅವರಿಗೆ ಕೊಡವ ಮತಗಳು ಹೋಗಬಾರದು, ಬದಲಾಗಿ ಗೌಡ ಸಮುದಾಯದವರಾದರೂ ಧಾರ್ಮಿಕ ಭಾವನೆಗಳಿಗೆ ಒತ್ತು ನೀಡುವ ಬೋಪಯ್ಯ ಅವರಿಗೆ ನಿಮ್ಮ ಮತಗಳನ್ನು ಹಾಕಬೇಕು ಎಂದು ಸೂಚ್ಯವಾಗಿ ಹೇಳಿದರು. ಇದೇ ವೇದಿಕೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಯಾರು ಯಾವ ಜಾತಿಯಲ್ಲಿ ಹುಟ್ಟಿದರೆ ಏನು, ನಾನೂ ಒಂದು ಜಾತಿಯಲ್ಲಿ ಹುಟ್ಟಿದ್ದೇನೆ. ಅದು ನನ್ನ ತಪ್ಪಾ.? ನಾನು ಆ ಜಾತಿಯಲ್ಲಿ ಹುಟ್ಟಿರುವುದಕ್ಕೆ ನನಗೆ ನನ್ನ ಜಾತಿ ಮೇಲೆ ಅಭಿಮಾನ ಇದೆ. ಆದರೆ ದುರಭಿಮಾನ ಇರಬಾರದು. ಹಿಂದೂತ್ವ, ಆರ್ಎಸ್ಎಸ್ ಸಿದ್ಧಾಂತದಲ್ಲಿ ಜಾತಿ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಕೊಡವ ಸಮುದಾಯದವರಾಗಿರುವ ಪೊನ್ನಣ್ಣ ಅವರ ವಿರುದ್ಧ ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಗ್ಯಾರೆಂಟಿ ಕಾರ್ಡ್ ಬಗ್ಗೆ ವ್ಯಂಗ್ಯ ಮಾಡಿದ ಶಾಸಕ ಕೆ.ಜಿ. ಬೋಪಯ್ಯ ಕಾಂಗ್ರೆಸ್ಸಿಗೆ ಅಸ್ಥಿತ್ವವೇ ಇಲ್ಲ.
ಡಿಕೆಶಿ, ಸಿದ್ದು ಪರಸ್ಪರ ಯಾವಾಗ ಚುಚ್ಚಿಕೊಳ್ತಾರೋ?: ಈಶ್ವರಪ್ಪ
ಹೀಗಿರುವಾಗ ಇವರು ನೀಡಿರುವ ಕಾರ್ಡಿಗೆ ಏನು ಗ್ಯಾರೆಂಟಿ. ಅಷ್ಟಕ್ಕೂ ಇವರು ನೀಡಿರುವ ಗ್ಯಾರೆಂಟಿ ಕಾರ್ಡಿನಂತೆ ಇವರು ನಡೆದುಕೊಳ್ಳದಿದ್ದರೆ ಅದನ್ನು ಇಟ್ಟುಕೊಂಡು ಏನು ಮಾಡುವುದು. ಅದಕ್ಕೆ ಉಪ್ಪು ಕಾರ ಹಾಕಿ ನೆಕ್ಕಿಕೊಳ್ಳಬೇಕಾ ಎಂದು ಲೇವಡಿ ಮಾಡಿದ್ದಾರೆ. ಒಟ್ಟಿನಲ್ಲಿ ವಿರಾಜಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಎ.ಎಸ್. ಪೊನ್ನಣ್ಣ ಅಭ್ಯರ್ಥಿ ಎನ್ನುವುದು ಬಹುತೇಕ ಖಚಿತ ಆಗುತ್ತಿದ್ದಂತೆ ಬಿಜೆಪಿ ಅವರನ್ನು ಕೊಡಗಿನ ಕುಲದೇವಿಗೆ ಅಪಮಾನ ಮಾಡಿದವರ ಮಗ ಎಂಬ ಆರೋಪ ಮತ್ತು ಜಾತಿ ಹೆಸರಿನಿಂದ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ 700 ಕ್ಕೂ ಹೆಚ್ಚು ಜನರಿಗೆ ಬಿಜೆಪಿ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ಮಾಡಿತ್ತು. ಬಿಜೆಪಿಯ ಈ ಎಲ್ಲಾ ತಂತ್ರಗಾರಿಕೆ ನಿಜವಾಗಿಯೂ ಸಕ್ಸಸ್ ಆಗುತ್ತಾ ನೋಡಬೇಕಾಗಿದೆ.