Kodagu: ಸಚಿವರೊಬ್ಬರ ಬೇನಾಮಿ ತೋಟದಲ್ಲಿ ನಿರ್ಮಾಣವಾಗುವ ರೆಸಾರ್ಟ್‌ಗಾಗಿ ಎರಡೆರಡು ಕಿಂಡಿ ಅಣೆಕಟ್ಟು!
ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಅಷ್ಟೇನು ಪ್ರಯೋಜನವಿಲ್ಲ. ಆದರೂ ಕೇವಲ ನೂರು ಮೀಟರ್ ಅಂತರದಲ್ಲಿಯೇ ಎರಡೆರಡು ಚೆಕ್ ಡ್ಯಾಂ ನಿರ್ಮಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.21): ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಅಷ್ಟೇನು ಪ್ರಯೋಜನವಿಲ್ಲ. ಆದರೂ ಕೇವಲ ನೂರು ಮೀಟರ್ ಅಂತರದಲ್ಲಿಯೇ ಎರಡೆರಡು ಚೆಕ್ ಡ್ಯಾಂ ನಿರ್ಮಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಲಿ ರಾಜ್ಯ ಸರ್ಕಾರದ ಸಚಿವರೊಬ್ಬರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವ 113 ಎಕರೆ ಕಾಫಿ ತೋಟದಲ್ಲಿ ರೆಸಾರ್ಟ್ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದು, ಅವರಿಗೆ ಅನುಕೂಲ ಮಾಡುವುದಕ್ಕಾಗಿ ಸರ್ಕಾರದ ಅನುದಾನ ಬಳಸಿ ಅನಗತ್ಯವಾಗಿ ಎರಡು ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮಡಿಕೇರಿ ತಾಲ್ಲೂಕಿನ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ ಬ್ಲಾಕ್ ಮೋದೂರಿನ ಇಬ್ಬನಿ ಒಳಮಾಡು ಎಂಬಲ್ಲಿ ಅಮ್ಜದ್ ಎಂಬುವರಿಂದ 113 ಎಕರೆ ಕಾಫಿ ತೋಟವನ್ನು ಸಚಿವರೊಬ್ಬರು ಮತ್ತು ಅವರ ಸಹೋದರ ಬೇನಾಮಿ ಹೆಸರಿನಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ತೋಟ ಖರೀದಿಸಿದ್ದಾರೆ ಎಂದು ಸ್ಥಳೀಯರಾದ ಸತೀಶ್ ಆರೋಪಿಸಿದ್ಧಾರೆ. ಬಳಿಕ ಅದರಲ್ಲಿ 40 ಎಕರೆ ತೋಟ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ 40 ಎಕರೆ ಪ್ರದೇಶವನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಗಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ಗೊತ್ತಾಗಿದೆ.
ಇದೆಲ್ಲವೂ ಆದ ಬಳಿಕವಷ್ಟೇ ಇಲ್ಲಿ ರೆಸಾರ್ಟ್ ಮಾಡಲು ಹೊರಟಿರುವವರಿಗೆ ಅನುಕೂಲವಾಗುವಂತೆ ಅತ್ತಿರದಲ್ಲೇ ತಲಾ ಎರಡು ಕೋಟಿ ವೆಚ್ಚದಲ್ಲಿ ಎರಡೆರಡು ಕಿಂಡಿ ಅಣೆಕಟ್ಟು ನಿರ್ಮಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಅಷ್ಟಕ್ಕೂ ಬೆಟ್ಟಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದರಿಂದಾಗಿ ಕೆಳಭಾಗದ ಜನರಿಗೆ ಬೇಸಿಗೆಯಲ್ಲಿ ನೀರಿನ ಆಹಾಕಾರ ಎದುರಾಗಲಿದೆ ಎನ್ನುವುದು ಜನರ ಅಳಲು. ಚಿಕ್ಲಿ ಹೊಳೆಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ಇದೇ ನೀರನ್ನು ಆಶ್ರಯಿಸಿ ಕಾಫಿ, ಭತ್ತ ಬೆಳೆಯುತ್ತಿರುವ ನಮಗೆ ತೀವ್ರ ನೀರಿನ ಕೊರತೆ ಎದುರಾಗಲಿದೆ. ನಮ್ಮ ದನಕರುಗಳ ಕುಡಿಯುವ ನೀರಿನ ಜೊತೆಗೆ ಜನರಿಗೂ ನೀರಿನ ಸಮಸ್ಯೆ ಎದುರಾಗಲಿದೆ. ಹೀಗಾಗಿ ಕಿಂಡಿ ಅಣೆಕಟ್ಟು ನಿರ್ಮಿಸಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಟ್ಟ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿರುವುದರಿಂದ 2018 ರಿಂದ ನಿರಂತರವಾಗಿ ಎದುರಾಗುತ್ತಿರುವ ಭೂಕುಸಿತ ಪ್ರವಾಹದ ಸ್ಥಿತಿ ಇಲ್ಲಿಯೂ ಎದುರಾಗಲಿದೆ. ಹಾಗೆ ಒಂದುವೇಳೆ ಪ್ರವಾಹ ಭೂಕುಸಿತ ಎದುರಾದರೆ ಅದರ ಭೀಕರತೆಯನ್ನು ಊಹಿಸಲು ಸಾಧ್ಯವಿಲ್ಲ. ಆ ಪರಿಸ್ಥಿತಿಯ ಹೊಣೆಯನ್ನು ಹೊರಡುವವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಕೆದಕಲ್ ನಿಂದ ಮೇಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದುವರೆಗೆ ಇದ್ದಿತ್ತಾದರೂ ಅದು ಚಿಕ್ಕ ರಸ್ತೆಯಾಗಿತ್ತು. ಆದರೆ ಬೇನಾಮಿ ಹೆಸರಿನಲ್ಲಿ ಈ ಆಸ್ತಿ ಖರೀದಿಯಾಗುತ್ತಿದ್ದಂತೆ 13 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತಮ ರಸ್ತೆ ನಿರ್ಮಾಣವಾಗುತ್ತಿದ್ದು, ಇದೆಲ್ಲಾ ಹೇಗೆ ಸಾಧ್ಯ ಎನ್ನುವುದು ಜನರ ಅಚ್ಚರಿಗೂ ಕಾರಣವಾಗಿದೆ.
ಜಿಲ್ಲೆಯಲ್ಲಿ ಜನ ಸಾಮಾನ್ಯರು ಯಾವುದಾದರೂ ಒಂದು ಸೌಲಭ್ಯ ಬಯಸಿ ಅರ್ಜಿ ಸಲ್ಲಿಸಿದರೆ ವರ್ಷವಾದರೂ ಈಡೇರುವುದಿಲ್ಲ. ಆದರೆ ಪ್ರಭಾವಿ ವ್ಯಕ್ತಿಯೊಬ್ಬರು ರೆಸಾರ್ಟ್ ಮಾಡಲು ಮುಂದಾಗುತ್ತಿದ್ದಂತೆ ಪಿಡಬ್ಲ್ಯೂ ಇಲಾಖೆಯಿಂದ ರಸ್ತೆ, ಸಣ್ಣ ನೀರಾವರಿ ಇಲಾಖೆಯಿಂದ ಅನಗತ್ಯ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಹೇಗೆ ಸಾಧ್ಯ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬ್ಬಿಫಾಲ್ಸ್ ಪ್ರವಾಸಿಗರ ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ದೂರು ದಾಖಲು
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಚೆಕ್ ಡ್ಯಾಂ ಮಾಡುತ್ತಿರುವ ವಿಷಯ ನಮ್ಮ ಗಮನಕ್ಕೂ ಇರಲಿಲ್ಲ. ಈ ಕುರಿತು ಸಂಬಂಧಿಸಿದ ಇಲಾಖೆ ಎಂಜಿನಿಯರ್ ಕರೆದು ಚರ್ಚಿಸಲಾಗುವುದು. ಸರ್ಕಾರದ ಯಾವುದೇ ಯೋಜನೆ ಜಾರಿ ಮಾಡುವ ಮೊದಲು ಸ್ಥಳೀಯ ಜನರ ಅಭಿಪ್ರಾಯ ಕೇಳಬೇಕಾಗಿತ್ತು. ಈಗಲೂ ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು, ಒಂದು ವೇಳೆ ಜನರಿಗೆ ಇಷ್ಟವಿಲ್ಲದಿದ್ದರೆ ಅಲ್ಲಿ ಮಾಡುತ್ತಿರುವ ಚೆಕ್ ಡ್ಯಾಂನ ಸ್ಥಳ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ.
ಕೊಡಗು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಊರುಡುವೆ ಪೈಸಾರಿಯಲ್ಲಿರುವವರಿಗೆ ಹಕ್ಕುಪತ್ರ ನೀಡಲು ಒತ್ತಾಯ
ಒಟ್ಟಿನಲ್ಲಿ ಸಚಿವರೊಬ್ಬರು ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿ, ಅಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿರುವ ಮಾಹಿತಿ ಇದ್ದು ಅವರ ಅನುಕೂಲಕ್ಕಾಗಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಭೂಕುಸಿತ, ಪ್ರವಾಹಕ್ಕೆ ಕಾರಣವಾಗುವ ಆತಂಕ ಎದುರಾಗುವುದು ಎನ್ನುವುದು ಎಲ್ಲರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.