Asianet Suvarna News Asianet Suvarna News

ಶಿಕ್ಷಣದಿಂದಾಗಿ ಹೆಣ್ಣು ಮಕ್ಕಳಿಗೆ ಎಲ್ಲೆಡೆ ಅವಕಾಶ

ಶಿಕ್ಷಣದಿಂದಾಗಿ ಹೆಣ್ಣು ಮಕ್ಕಳಿಗೆ ಈಗ ಎಲ್ಲೆಡೆ ಅವಕಾಶ ಸಿಗುತ್ತಿದೆ ಎಂದು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್‌ ಹೇಳಿದರು.

Because of education, girl child has opportunity everywhere  snr
Author
First Published Jan 13, 2023, 6:28 AM IST

  ಮೈಸೂರು (ಜ. 13):  ಶಿಕ್ಷಣದಿಂದಾಗಿ ಹೆಣ್ಣು ಮಕ್ಕಳಿಗೆ ಈಗ ಎಲ್ಲೆಡೆ ಅವಕಾಶ ಸಿಗುತ್ತಿದೆ ಎಂದು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್‌ ಹೇಳಿದರು.

ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಕದಿಯಲಾಗದ ಆಸ್ತಿ. ಆದ್ದರಿಂದ ಚೆನ್ನಾಗಿ ಕಲಿತು ಇರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಾಹಿತ್ಯ, ಕಲೆ, ಸಂಸ್ಕೃತಿ, ಚಿತ್ರಕಲೆ ಮೊದಲಾದವುಗಳ ಮೂಲಕವೂ ಪ್ರತಿಭೆ ವಿಕಸನವಾಗಲಿ ಎಂದ ಅವರು, ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ವಿವರಿಸಿದರು.

ಇವತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ. ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣದ ಮೂಲಕ ಭಾರತೀಯರ ಬಗ್ಗೆ ಇದ್ದ ದೃಷ್ಟಿಕೋನವನ್ನೇ ಬದಲಾಯಿಸಿಬಿಟ್ಟರು. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಅವರ ವಾಣಿ ನಿಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಅವರು ಆಶಿಸಿದರು.

ದೇಶದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀ, ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶವನ್ನು ಪಾಲಿಸಿ ಎಂದು ಸಲಹೆ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಪ್ರಭಾರ ಡಿಡಿಪಿಯು ಹಾಗೂ ಪೀಪಲ್ಸ್‌ ಪಾರ್ಕ್ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ನಾಗಮ್ಮ ಮಾತನಾಡಿ, ಬೇರೆ ಸರ್ಕಾರಿ ಕಾಲೇಜುಗಳಿಗೆ ಹೋಲಿಸಿದಲ್ಲಿ ದೇವರಾಜ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ. ಎಲ್ಲಾ ಕಡೆ ದಾನಿಗಳು ಈ ರೀತಿ ಸಹಕಾರ ನೀಡಿದಲ್ಲಿ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಸುಧಾರಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಈ. ಶಿವೇಗೌಡ ಮಾತನಾಡಿ, ವಿದ್ಯೆ ಎಂಬ ಜ್ಞಾನದ ಬೆಳಕನ್ನು ಹಿಡಿದು ನೀವೆಲ್ಲಾ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ. ಇದರಿಂದ ಸಂಪೂರ್ಣವಾಗಿ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಾಗುತ್ತದೆ. ಪಿಯುಸಿ ಪ್ರಮುಖ ಘಟ್ಟ. ಇಲ್ಲಿ ಚೆನ್ನಾಗಿ ಓದಿದರೆ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ. ಆದ್ದರಿಂದ ಓದಿನ ಜೊತೆಗೆ ಕೌಶಲ್ಯವನ್ನು ರೂಢಿಸಿಕೊಳ್ಳಿ ಎಂದು ಅವರು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ವಿಶ್ವೇಶ್ವರ ಭಟ್‌, ರಾಜಗೋಪಾಲ್‌, ಶಿವಾಯನಮಃ ಮಠದ ಮುಖ್ಯಸ್ಥ ಪ್ರಭುಸ್ವಾಮಿ, ಸಮಾಜ ಸೇವಕ ಕಾಂತಿಲಾಲ್‌, ಮಾತಾ ಪ್ಲಾಸ್ಟಿಕ್‌ ಮಾಲೀಕ ಸದಾರಾಮ್‌, ಹಿರಿಯ ಉಪನ್ಯಾಸಕ ಎಂ. ಬಾಲರಾಜು, ದಾನಿಗಳಾದ ಗುರು, ಹೇಮಂತಕುಮಾರ್‌, ಭರತ್‌ರಾಮ್‌, ದಲ್ಪತ್‌ ಸಿಂಗ್‌, ವಾರ್ಡ್‌ ಬಿಜೆಪಿ ಅಧ್ಯಕ್ಷ ಚರಣ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಿದ್ಯಾವತಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ,

ವಿದ್ಯಾರ್ಥಿನಿಯರಾದ ನಿಖಿತಾ, ನಿಸರ್ಗ ಪ್ರಾರ್ಥಿಸಿದರು. ಉಪನ್ಯಾಸಕಿ ರಾಧಾ ಸ್ವಾಗತಿಸಿದರು. ಉಪನ್ಯಾಸಕಿ ಪ್ರಭಾವತಿ ನಿರೂಪಿಸಿದರು.ಉಪನ್ಯಾಸಕಿ ಡಾ.ವಿ. ಶ್ರೀಮತಿ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿತ್ರಾ ಅನುಭವ ಹಂಚಿಕೊಂಡರು. ಉಪನ್ಯಾಸಕ ಸ್ವಾಮಿಗೌಡ ಕವನ ವಾಚಿಸಿದರು. ನಂತರ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಂಗನವಾಡಿಯ ಮಕ್ಕಳು ವಿವಿಧ ವೇಷ ಧರಿಸಿ, ಗಮನ ಸೆಳೆದರು.

-- ಮೂಲ ಸೌಲಭ್ಯ--

ಚಾಮರಾಜ ಕ್ಷೇತ್ರದ ಶಾಸಕರಾದ ಎಲ್‌. ನಾಗೇಂದ್ರ, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್‌ ಮತ್ತು ದಾನಿಗಳ ನೆರವಿನಿಂದಾಗಿ ಕಾಲೇಜಿಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ನೀಡಿರುವ 1 ಕೋಟಿ ರು. ನೆರವಿನಿಂದ ಹೊಸ ಕಟ್ಟಡ ನಿರ್ಮಾಣವಾಗಿದೆ. ಪ್ರಾಂಶುಪಾಲರ ಕೊಠಡಿ. ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್‌ಗಳು, ಪ್ರಯೋಗಾಲಯ, ಸಿಸಿ ಕ್ಯಾಮರಾ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಈಗ ಕಲಾ, ವಾಣಿಜ್ಯಮತ್ತು ವಿಜ್ಞಾನ ವಿಭಾಗದಲ್ಲಿ 578 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಎಲ್ಲಾ ಉಪನ್ಯಾಸಕರು ಉತ್ತಮ ಫಲಿತಾಂಶಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಂದು ಅವರು ಶ್ಲಾಘಿಸಿದರು.

Follow Us:
Download App:
  • android
  • ios