Asianet Suvarna News Asianet Suvarna News

ಸಿದ್ದರಾಮಯ್ಯ ಆಪ್ತ ಮುಖಂಡಗೆ ಐದನೇ ಚುನಾವಣೆಯಲ್ಲೂ ಸೋಲು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ ಅವರಿಗೆ ಐದನೇ ಚುನಾವಣೆಯಲ್ಲೂ ಸೋಲಾಗಿದೆ.

BE graduate M. Lakshmana lost in the fifth election as well snr
Author
First Published Jun 5, 2024, 10:51 AM IST

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ ಅವರಿಗೆ ಐದನೇ ಚುನಾವಣೆಯಲ್ಲೂ ಸೋಲಾಗಿದೆ.

ಎಂ. ಲಕ್ಷ್ಮಣ ಬಿ.ಇ ಪದವೀಧರರು. ಡಿ. ಬನುಮಯ್ಯ ರಸ್ತೆಯ ದಳವಾಯಿ ಶಾಲಾ ಕಟ್ಟಡದಲ್ಲಿದ್ದ ಕರ್ನಾಟಕ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಪ್ರಾಂಶುಪಾಲರಾಗಿದ್ದರು. ನಂತರ ಮೈಸೂರು ಪ್ರಜ್ಞಾವಂತ ಮತ್ತು ಕಳಕಳಿಯುಳ್ಳ ನಾಗರಿಕರ ಒಕ್ಕೂಟ [ ಎಸಿಐಸಿಎಂ] ಸ್ಥಾಪಿಸಿದ್ದರು. ಮೈಸೂರು ಅಜೆಂಡಾ ಟಾಸ್ಕ್ ಫೋರ್ಸ್ (ಎಂಎಟಿಎಫ್) ಸದಸ್ಯರಾಗಿದ್ದರು.

ಚಾಮರಾಜ ವಿಧಾನಸಭಾ ಕ್ಷೇತ್ರದಿಂದ 2008 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, 1855 ಮತಗಳನ್ನು ಪಡೆದಿದ್ದರು.

ನಂತರ 2010 ರಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 3,697 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು. 2009 ರಲ್ಲಿ ಎಚ್. ವಿಶ್ವನಾಥ್ ಸಂಸದರಾದ ನಂತರ ಕಾಂಗ್ರೆಸ್ ಸೇರಿದರು.

2012 ರಲ್ಲಿ ಇದೇ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ ಮರಿತಿಬ್ಬೇಗೌಡರ ಎದುರು ಸೋತರು.

2016 ರಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ಎದುರಾದಾಗ ಮತ್ತೆ ಕಾಂಗ್ರೆಸ್ ಟಿಕೆಟ್ಗೆ ಯತ್ನಿಸಿದರು. ಆದರೆ ಟಿಕೆಟ್ ಡಾ.ಎಚ್.ಎನ್. ರವೀಂದ್ರ ಅವರ ಪಾಲಾಯಿತು. ಹೀಗಾಗಿ ಎಂ. ಲಕ್ಷ್ಮಣ ಸ್ಪರ್ಧಿಸಿರಲಿಲ್ಲ.

2018 ರಲ್ಲಿ ಮತ್ತೆ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೆಡಿಎಸ್ಸಿನ ಮರಿತಿಬ್ಬೇಗೌಡರ ಎದುರು ಸೋತರು. ಮೊದಲ ಪ್ರಾಶಸ್ತ್ಯದಲ್ಲಿ ಮರಿತಿಬ್ಬೇಗೌಡರಿಗೆ 6003, ಲಕ್ಷ್ಮಣಗೆ 5514 ಮತಗಳು ದೊರೆತಿದ್ದವು.

ನಂತರ ಅವರು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಹವಾಸ ಬಿಟ್ಟು, ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾದರು.

ಈ ಬಾರಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು, ಒಕ್ಕಲಿಗರಾದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿರುವುದರಿಂದ ಕಾಂಗ್ರೆಸ್ ಒಕ್ಕಲಿಗರ ಪೈಕಿ ಒಬ್ಬರಿಗೆ ಟಿಕೆಟ್ ನೀಡಲು ನಿರ್ಧರಿಸಿತು.

ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರನ್ನು ಕಣಕ್ಕಿಳಿಸುವ ಯತ್ನ ನಡೆಸಿತು. ಅವರು ನಿರಾಕರಿಸಿದರು. ಟಿಕೆಟ್ಗೆ ಒಕ್ಕಲಿಗ ಜನಾಂಗದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯ ಡಾ. ಸುಶ್ರುತ್ ಗೌಡ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮತ್ತಿತರರು ಆಕಾಂಕ್ಷಿಗಳಾಗಿದ್ದರು. ಸಿದ್ದರಾಮಯ್ಯ ಅವರು ಅಂತಿಮವಾಗಿ ಎಂ. ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದರು. ಆ ಮೂಲಕ ಒಕ್ಕಲಿಗಾಸ್ತ್ರ ಪ್ರಯೋಗಿಸಿದ್ದರು.. ಅಲ್ಲದೇ ರಾಜವಂಶಸ್ಥ ಯದುವೀರ್ ಅವರು ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿರುವುದರಿಂದ ತವರು ಜಿಲ್ಲೆಯಲ್ಲಿ ಗೆಲ್ಲುವುದನ್ನು ಸಿದ್ದರಾಮಯ್ಯ ಪ್ರತಿಷ್ಥೆಯಾಗಿ ತೆಗೆದುಕೊಂಡಿದ್ದರು.

ಇದೇ ಕಾರಣಕ್ಕಾಗಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿಯಲ್ಲಿ ಬಹಿರಂಗ ಸಭೆಗಳನ್ನು ನಡೆಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಸಭೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಇವ್ಯಾವು ಲಕ್ಷ್ಮಣ ಅವರ ಸೋಲಿನ ಸರಪಳಿ ಕಳಚಲಿಲ್ಲ. ಅವರ ಸೋಲಿನ ಸರಣಿ ಮುಂದುವರಿದಿದೆ.

ಎರಡೂ ಕಡೆಯೂ ಗೆಲ್ಲದ ಇತರರು--

ಸಿಐಟಿಬಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ- ಚಾಮರಾಜದಿಂದ ವಿಧಾನಸಭೆಗೆ, ಮೈಸೂರಿನಿಂದ ಲೋಕಸಭೆಗೆ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಹಾಗೂ ಕಾಡಾ ಮಾಜಿ ಅಧ್ಯಕ್ಷ ದೇವನೂರು ಶಿವಮಲ್ಲು ಎಚ್.ಡಿ. ಕೋಟೆಯಿಂದ ವಿಧಾನಸಭೆ, ಚಾಮರಾಜನಗರಿಂದ ಲೋಕಸಭೆಗೆ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಅವರು ಕೆ.ಆರ್. ನಗರದಿಂದ ವಿಧಾನಸಭೆಗೆ, ಮೈಸೂರಿನಿಂದ ಲೋಕಸಭೆಗೆ, ಎಂಡಿಎ ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು, ಬಿ.ಎಸ್. ಮರಿಲಿಂಗಯ್ಯ ಅವರು ಹುಣಸೂರಿನಿಂದ ವಿಧಾನಸಭೆಗೆ, ಮೈಸೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.

Latest Videos
Follow Us:
Download App:
  • android
  • ios