ಬೆಂಗಳೂರಿನಲ್ಲಿ ಇನ್ನು ಇದೆ ಕೊರೋನಾ ಮಹಾಮಾರಿ ಅಪಾಯ ಪತ್ತೆ ಹಚ್ಚುವ ಪ್ರಮಾಣದಲ್ಲಿ ಭಾರೀ ಇಳಿಮುಖ ಕೊರೋನಾ ಮಹಾಮಾರಿ ಕೊಂಚ ಪ್ರಮಾಣದಲ್ಲಿ ಇಳಿಕೆ

 ಬೆಂಗಳೂರು (ಜೂ.16):  ರಾಜ್ಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಲು ಬೆಂಗಳೂರು ನಗರ ಹೇಗೆ ಕಾರಣವಾಗಿತ್ತೋ ಅದೇ ರೀತಿ ಕೋವಿಡ್‌ ಪ್ರಮಾಣದಲ್ಲಿ ಇಳಿಕೆಯಾಗುವಲ್ಲಿಯೂ ಬೆಂಗಳೂರಿನ ಪಾಲು ದೊಡ್ಡದು.

ಶೇಕಡ 40ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ದಾಖಲಿಸುತ್ತಿದ್ದ ಬೆಂಗಳೂರಿನಲ್ಲಿ ಸದ್ಯ ಕಳೆದೊಂದು ವಾರದಿಂದ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ಬರುತ್ತಿದೆ. ಮೇ ಆರಂಭದಲ್ಲಿ 20 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದ ಬೆಂಗಳೂರಿನಲ್ಲಿ ಸದ್ಯ 2 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ.

ಲಾಕ್‌ಡೌನ್‌ ಆರಂಭದಲ್ಲಿ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.60 ಇತ್ತು. ಸದ್ಯ ರಾಜ್ಯ ರಾಜಧಾನಿಯ ಪಾಲು ಶೇ.25ಕ್ಕಿಂತ ಕಡಿಮೆಯಾಗಿದೆ. ಹಾಗಿದ್ದರೆ ಬೆಂಗಳೂರು ನಗರ ಸೋಂಕನ್ನು ಹಿಮ್ಮೆಟ್ಟಿಸಿ ಬಿಟ್ಟಿತ್ತು ಎಂದು ಭಾವಿಸಬಹುದೇ ಎಂಬ ಪ್ರಶ್ನೆಗೆ ನಕಾರಾತ್ಮಕ ಉತ್ತರವನ್ನು ತಜ್ಞರು ನೀಡುತ್ತಾರೆ. ರಾಜ್ಯ ರಾಜಧಾನಿಯಲ್ಲಿ ಕೋವಿಡ್‌ ಸೋಂಕಿತರ ಸಂಪರ್ಕಿತರ ಪತ್ತೆ ಮತ್ತು ಕೋವಿಡ್‌ ಪರೀಕ್ಷೆಯ ವಿಧಾನದಲ್ಲಿ ಲೋಪಗಳಿವೆ. ಅದೇ ರೀತಿ ನಗರ ತೊರೆದಿದ್ದ ಜನ ಮತ್ತೆ ವಾಪಾಸ್‌ ಆಗುತ್ತಿದ್ದು ಮತ್ತೆ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

ಸಂಪರ್ಕ ಪತ್ತೆಯಲ್ಲಿ ಉದಾಸೀನ

ಒಬ್ಬ ಕೋವಿಡ್‌ ಸೋಂಕಿತನ ಸಂಪರ್ಕಕಕ್ಕೆ ಬಂದ (ಪ್ರಾಥಮಿಕ ಮತ್ತು ದ್ವಿತೀಯ) ಕನಿಷ್ಠ 20 ಜನರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರದ ಸೂಚನೆ ಇದೆ. ಆದರೆ ಬೆಂಗಳೂರಿನಲ್ಲಿ ಕೇವಲ ಸರಾಸರಿ 7.4 ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಸಂಪರ್ಕಿತರನ್ನು ಪತ್ತೆ ಹಚ್ಚುವುದರಲ್ಲಿ ಬೆಂಗಳೂರು ಕೊನೆಯಿಂದ ಮೂರನೇ (27ನೇ) ಸ್ಥಾನದಲ್ಲಿದೆ. ಮಂಡ್ಯ, ಧಾರವಾಡ, ಬೀದರ್‌ ಮತ್ತು ಗದಗದಲ್ಲಿ ಸರಾಸರಿ 20ಕ್ಕಿಂತ ಹೆಚ್ಚು ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವಲ್ಲಿನ ನಿರ್ಲಕ್ಷ್ಯದಿಂದ ಸೋಂಕು ಪತ್ತೆ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸೋಂಕಿನ ಗುಣ ಲಕ್ಷಣಗಳಿಲ್ಲದವರ ಕೋವಿಡ್‌ ಪರೀಕ್ಷೆಗೆ ನಿರಾಕರಿಸುವ ವಿದ್ಯಮಾನಗಳು ವರದಿಯಾಗುತ್ತಿದೆ. ಅನ್‌ ಲಾಕ್‌ ಪ್ರಕ್ರಿಯೆ ಜಾರಿಯಾಗುತ್ತಿದ್ದಂತೆ ಸೋಂಕಿನ ಗುಣ ಲಕ್ಷಣಗಳಿಲ್ಲದವರು ಹೆಚ್ಚು ಮಂದಿಗೆ ಸೋಂಕು ಹಬ್ಬಿಸುವ ಸಾಧ್ಯತೆಯಿದೆ. ಆದ್ದರಿಂದ ಕೋವಿಡ್‌ ಪರೀಕ್ಷೆಯನ್ನು ಯಾರಿಗೂ ನಿರಾಕರಿಸಬಾರದು ಎಂದು ತಜ್ಞರು ಹೇಳುತ್ತಾರೆ.

ನಿಖರತೆ ಕಡಿಮೆ ಇರುವ ಪರೀಕ್ಷೆಗೆ ಒತ್ತು

ಏಪ್ರಿಲ್‌ ಕೊನೆಯ ವಾರಗಳಲ್ಲಿ 75 ಸಾವಿರ ಮೀರಿ ಕೋವಿಡ್‌ ಪರೀಕ್ಷೆ ನಡೆಯುತ್ತಿತ್ತು. ಆದರೆ ಸೋಂಕಿನ ಪ್ರಮಾಣ ಏರುತ್ತಿದ್ದಂತೆ ಪರೀಕ್ಷೆಯ ಪ್ರಮಾಣದಲ್ಲೂ ಕುಸಿತ ದಾಖಲಾಗಿ ಸುಮಾರು 40 ಸಾವಿರ ಪರೀಕ್ಷೆ ದಿನ ನಿತ್ಯ ವರದಿಯಾಗಿತ್ತು. ಆದರೆ ಜೂನ್‌ನಲ್ಲಿ ಮತ್ತೆ ಪರೀಕ್ಷೆಗಳ ಪ್ರಮಾಣ 60 ಸಾವಿರ ದಾಟಿದೆ.

ಆದರೆ ಏಪ್ರಿಲ್‌ 8 ರಂದು ಆರೋಗ್ಯ ಸಚಿವ ಸುಧಾಕರ್‌ ಅವರು ಬೆಂಗಳೂರು ನಗರದಲ್ಲೆ ಪ್ರತಿನಿತ್ಯ 1 ಲಕ್ಷ ಪರೀಕ್ಷೆ ನಡೆಸಬೇಕು ಮತ್ತು ಗರಿಷ್ಠ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಯಲಿ ಎಂಬ ಸೂಚನೆ ನೀಡಿದ್ದರು. ಆದರೆ ಕೋವಿಡ್‌ ಹೆಚ್ಚಾಗುತ್ತಿದ್ದಂತೆ ಪಾಲಿಕೆಯು ಈ ಗುರಿಯಿಂದ ವಿಮುಖವಾಗುತ್ತ ಸಾಗಿತ್ತು.

ಇದೇ ವೇಳೆ ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪತ್ತೆಯಾಗದೇ ಕೊನೆಗೆ ಸಿಟಿ ಸ್ಕಯಾನ್‌ನಲ್ಲಿ ಪತ್ತೆಯಾದ ಸಾವಿರಾರು ಉದಾಹರಣೆಗಳಿವೆ. ಆರ್‌ಟಿಪಿಸಿಆರ್‌ ಪರೀಕ್ಷೆ ಶೇ. 70ರಷ್ಟುಖಚಿತ ಫಲಿತಾಂಶ ನೀಡುತ್ತದೆ. ಆದರೆ ಸದ್ಯ ಸರ್ಕಾರ ಶೇ.50 ರಷ್ಟುಖಚಿತ ಫಲಿತಾಂಶ ನೀಡುವ ಅಂಟಿಜೆನ್‌ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಮೊದಲು ದಿನ ನಿತ್ಯದ ಕೋವಿಡ್‌ ಪರೀಕ್ಷೆಯಲ್ಲಿ ಶೇ.10ರ ಅಸುಪಾಸಿನಲ್ಲಿ ಅಂಟಿಜೆನ್‌ ಪರೀಕ್ಷೆ ಇರುತ್ತಿತ್ತು. ಅದರೆ ಕಳೆದ ಕೆಲ ದಿನಗಳಿಂದ ಈ ಪ್ರಮಾಣ ಶೇ.30 ದಾಟಿದೆ. ಕಳೆದೆರಡು ತಿಂಗಳಿನಿಂದ ಕೋವಿಡ್‌ ಹೆಮ್ಮಾರಿ ಜನರ ಬದುಕನ್ನು ಧ್ವಂಸಗೊಳಿಸಿ, ವ್ಯವಸ್ಥೆಯ ಮೇಲೆ ವಿಪರೀತ ಒತ್ತಡ ಹಾಕಿದ್ದರೂ ಪಾಠ ಕಲಿಯದ ಸರ್ಕಾರ ಕಡಿಮೆ ನಿಖರತೆಯ ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತಿರುವುದು ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ.

 ಕುಸಿದ ಪಾಸಿಟಿವಿಟಿ ದರ : ಏ.14 ರಿಂದ ಏ.27ರವರೆಗೆ ಬೆಂಗಳೂರಿನ ಪಾಸಿಟಿವಿಟಿ ದರ ಶೇ.18 ಇತ್ತು. ಜನತಾ ಕಫ್ರ್ಯೂ ಜಾರಿಯಲ್ಲಿದ್ದ ಏಪ್ರಿಲ್‌ 28 ರಿಂದ ಮೇ 11ರವರೆಗೆ ಪಾಸಿಟಿವಿಟಿ ದರ ಶೇ.38ಕ್ಕೆ ಏರಿಕೆ ಆಗಿತ್ತು. ನಿರ್ಬಂಧ ಹೇರಿಕೆಯಾದ ಎರಡು ವಾರದ ತರುವಾಯ ಸೋಂಕಿನ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತ ಸಾಗಿತು.

ಮೇ 12ರಿಂದ ಮೇ 18ರವರೆಗೆ ಶೇ.28.86, ಮೇ 19ರಿಂದ ಮೇ 25ರವರೆಗೆ ಶೇ.15.70 ಪಾಸಿಟಿವಿಟಿ ದರ ಬಂದಿತ್ತು. ಅಲ್ಲಿಂದ ಕಳೆದ 15 ದಿನಗಳಲ್ಲಿ ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ. ಮೇ 2ರಿಂದ ಮೇ 8ರವರೆಗಿನ ಪಾಸಿಟಿವಿಟಿ ದರ ಶೇ. 4.13ಕ್ಕೆ ಇಳಿದಿದೆ.

ಏರಿದ ಮರಣ ದರ: ಆದರೆ ಮರಣ ದರ ಇದಕ್ಕೆ ವ್ಯತಿರಿಕ್ತ ಬೆಳವಣಿಗೆ ದಾಖಲಿಸಿದೆ. ಏಪ್ರಿಲ್‌ 18ರ ಸುಮಾರಿಗೆ ಶೇ. 0.55ರಷ್ಟಿದ್ದ ಮರಣ ದರ ಮೇ 18ರ ಹೊತ್ತಿಗೆ ಶೇ. 1.50ಕ್ಕೆ ನಿಧಾನವಾಗಿ ಏರಿಕೆ ಆಗಿತ್ತು. ಆದರೆ ಕಳೆದ 20 ದಿನಗಳಲ್ಲಿ ಮರಣ ದರ ಅಪಾಯದ ಶೇ. 6.59ಕ್ಕೆ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona