ಬೆಂಗಳೂರು(ಡಿ.05): ಭ್ರಷ್ಟಾಚಾರದಲ್ಲಿ ಶಾಮೀಲಾಗಿ ಬಿಡಿಎಗೆ ಕಳಂಕ ತರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಸಂಸ್ಥೆಯಲ್ಲಿದ್ದುಕೊಂಡು ಸಂಸ್ಥೆಯ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸಂಸ್ಥೆಗೆ ಮಾಡಿದ ದ್ರೋಹವಷ್ಟೇ ಅಲ್ಲ, ಉಂಡ ಮನೆಗೆ ಕನ್ನಡ ಹಾಕಿದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ನಕಲಿ ಎಸ್‌ಬಿಐ ಶಾಖೆ ಆಯ್ತು..ಬೆಂಗಳೂರಿನಲ್ಲಿ ನಕಲಿ ಬಿಡಿಎ ಕಚೇರಿ!

ಬಿಡಿಎಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳು ಕೆಲವು ಏಜೆಂಟರ ಜೊತೆ ಸೇರಿ ವಂಚಿಸುತ್ತಿರುವುದು ನೋವು ತರುವ ವಿಚಾರ. ಅಧಿಕಾರಿಗಳಾದ ಶಿವೇಗೌಡ, ಕಮಲಮ್ಮ ಸೇರಿದಂತೆ ಐವರು ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಸಿಬ್ಬಂದಿ ಭಾಗಿಯಾಗಿರುವ ಗುಮಾನಿ ಇದ್ದು, ಅವರನ್ನು ಪತ್ತೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.