ಬೆಂಗಳೂರು(ಡಿ.16): ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವವರಿಗೆ ಜೇಷ್ಠತೆ ಮತ್ತು ಆದ್ಯತೆ ಆಧಾರದಲ್ಲಿ ಹೊಸ ವರ್ಷಾರಂಭದ ವೇಳೆಗೆ ನಿವೇಶನ ವಿತರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಡಾವಣೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವ ಜನರು ನಿವೇಶನಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಲಾಗಿದೆ. ಈಗ ಅರ್ಕಾವತಿ ಬಡಾವಣೆಯಲ್ಲಿ ಕಾನೂನು ತೊಡಕು ಇಲ್ಲದ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ನಿವೇಶನ ರಚನೆ ಮಾಡಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಗೋಲ್‌ಮಾಲ್‌: ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌: ವಿಶ್ವನಾಥ್‌

ಈ ಸಂಬಂಧ ಡಿ.30ರೊಳಗೆ ಯಾವ ಅಳತೆಯ ಎಷ್ಟುನಿವೇಶನಗಳನ್ನು ರಚಿಸಲಾಗಿದೆ ಎಂಬುದರ ವಿವರವಾದ ವರದಿ ಸಿದ್ಧಪಡಿಸಬೇಕು. ಜನವರಿ ಅಂತ್ಯದೊಳಗೆ ಅರ್ಕಾವತಿ ಬಡಾವಣೆಯಲ್ಲಿ ಲಭ್ಯವಿರುವ ನಿವೇಶನಗಳನ್ನು ಹಣ ಪಾವತಿಸಿದ ನಾಗರಿಕರಿಗೆ ಹಂಚಿಕೆ ಮಾಡಬೇಕು. ಬಡಾವಣೆಯಲ್ಲಿ ಈಗಿರುವ ಗೊಂದಲ ನಿವಾರಿಸಲು ಅಧಿಕಾರಿಗಳು ಕ್ರಮಕೈಗೊಂಡು ಸಮರ್ಪಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.

ತನಿಖೆಗೆ ವಿಶೇಷ ತಂಡ

ಬಿಡಿಎ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಹಂಚಿಕೆ ಮಾಡಲು ಯತ್ನಿಸಿದ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸದ್ಯದಲ್ಲೇ ಸರ್ಕಾರಿ ಆದೇಶ ಹೊರಬೀಳಲಿದ್ದು, ತನಿಖಾ ತಂಡವನ್ನೂ ರಚನೆ ಮಾಡಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ವಿಶ್ವನಾಥ್‌ ಹೇಳಿದರು.