ಬೆಂಗಳೂರು (ಫೆ.16): ಶಿವರಾಮ ಕಾರಂತ ಬಡಾವಣೆಗೆಂದು ಸ್ವಾಧೀನಪಡಿಸಿ ಕೊಂಡಿರುವ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

2018 ಆಗಸ್ಟ್‌ 3ರ ನಂತರ ನಿರ್ಮಿಸಲಾಗಿರುವ ಹಾಗೂ ನಿರ್ಮಿಸಲಾಗುತ್ತಿರುವ ಎಲ್ಲ ಕಟ್ಟಡಗಳು ಅನಧಿಕೃತವಾಗಿದ್ದು, ಇವುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ರಚಿಸುವ ಸಂಬಂಧ ಅಧಿಸೂಚಿತ ಭೂ ಪ್ರದೇಶಗಳಾದ 17 ಗ್ರಾಮಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆಂದು ವಡೇರಹಳ್ಳಿ, ಗಾಣಿಗರಹಳ್ಳಿ, ಬ್ಯಾಲಕೆರೆ, ಕಾಳತಮ್ಮನಹಳ್ಳಿ, ಲಕ್ಷ್ಮಿಪುರ, ಕೆಂಪಾಪುರ, ಮೇಡಿ ಅಗ್ರಹಾರ, ರಾಮಗೊಂಡನಹಳ್ಳಿ, ಅವಲಹಳ್ಳಿ, ವೀರಸಾಗರ ಸೆರಿದಂತೆ 17 ಗ್ರಾಮಗಳಲ್ಲಿ ಒಟ್ಟು 3546.12 ಎಕರೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಆದರೆ ಈ ಹಳ್ಳಿಗಳ ಬಹುತೇಕ ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕವೂ ವಾಣಿಜ್ಯ ಚಟುವಟಿಕೆ ಹೆಚ್ಚಾಗಿದ್ದಲ್ಲದೇ 950 ಎಕರೆ ಜಾಗದಲ್ಲಿ ಸಾವಿರಾರು ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಬಿಡಿಎ ಮೂಲಗಳ ಪ್ರಕಾರ ಉಪಗ್ರಹ ಚಿತ್ರದಲ್ಲಿ 7ರಿಂದ 8 ಸಾವಿರಕ್ಕೂ ಅಧಿಕ ಕಟ್ಟಡಗಳು ನಿರ್ಮಾಣವಾಗಿವೆ ಎನ್ನಲಾಗಿದ್ದು, ಇತ್ತೀಚೆಗೆ ನಡೆದ ಬಿಡಿಎ ಸಭೆಯಲ್ಲಿ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಬಿಡಿಎ ಅಧ್ಯಕ್ಷ, ಆಯುಕ್ತರ ಮಧ್ಯೆ ಬಿಗ್‌ ಫೈಟ್‌..! ...

ಎಚ್ಚರಿಕೆ ನೀಡಿದ ಬಿಡಿಎ :ಈಗಾಗಲೇ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಬಿಡಿಎ ನೋಟಿಸ್‌ ಜಾರಿಗೊಳಿಸಿದ್ದು, ತೆರವು ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ ಹಲವಾರು ಬಾರಿ ಸಾರ್ವಜನಿಕ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ. ಆದರೂ ಸಹ ಕೆಲವು ಭೂಮಾಲೀಕರು ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿದ್ದಾರೆ. ಹಲವು ಕಟ್ಟಡಗಳ ಕಾಮಗಾರಿಯು ಪ್ರಗತಿಯಲ್ಲಿರುವುದು ಕಂಡು ಬಂದಿದೆ. ಈಗಾಗಲೇ ಉಪಗ್ರಹದ ಮೂಲಕ ಅನಧಿಕೃತ ಕಟ್ಟಡಗಳ ಚಿತ್ರಣವನ್ನು ಗುರುತಿಸಲಾಗಿದೆ. ಇಂತಹ ಯಾವುದೇ ಕಟ್ಟಡಗಳನ್ನು ಸಕ್ರಮಗೊಳಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಂತೆ 2018 ಆಗಸ್ಟ್‌ 3ರ ಬಳಿಕ ನಿರ್ಮಿಸಲಾಗಿರುವ ಹಾಗೂ ನಿರ್ಮಿಸಲಾಗುತ್ತಿರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂದು ಬಿಡಿಎ ಎಚ್ಚರಿಕೆ ನೀಡಿದೆ.

ಆದರೆ ಅಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಯಾವುದೇ ಸಮಸ್ಯೆ ಇಲ್ಲ. ಜತೆಗೆ ಬಿಡಿಎಗೆ ಬಡಾವಣೆ ನಿರ್ಮಿಸಲು ಭೂಮಿ ನೀಡಿದ ರೈತರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ನೀಡಲು ಬಿಡಿಎ ಸಿದ್ಧವಿದೆ. ಈ ಕುರಿತು ರೈತರು ಆತಂಕ ಪಡಬಾರದು. ಶೀಘ್ರವೇ ಅನಧಿಕೃತ ಕಟ್ಟಡಗಳ ತೆರವು ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.