Asianet Suvarna News Asianet Suvarna News

ಬೆಂಗಳೂರು: ಶೀಘ್ರ ಬಿಡಿಎ ಹುಣ್ಣಿಗೆರೆ ವಿಲ್ಲಾ ಮಾರಾಟ: ಬೆಲೆ ಇಂತಿದೆ

ಕಂಪನಿಯು 2023ರ ಮಾರ್ಚ್‌ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಈ ಯೋಜನೆಯಡಿ 1 ಬಿಎಚ್‌ಕೆ 320 ಮನೆಗಳು, 3 ಬಿಎಚ್‌ಕೆಯ 152 ವಿಲ್ಲಾಗಳು ಹಾಗೂ 4 ಬಿಎಚ್‌ಕೆಯ 170 ವಿಲ್ಲಾಗಳು ಸೇರಿದಂತೆ ಒಟ್ಟು 320 ಫ್ಲಾಟ್‌ಗಳು ಹಾಗೂ 322 ವಿಲ್ಲಾಗಳನ್ನು ನಿರ್ಮಿಸಲಾಗಿದೆ. ವಿವಿಧ ಕಾರಣಗಳಿಂದ ನಿಗದಿತ ಅವಧಿಗೆ ಯೋಜನೆ ಮುಗಿಯದಿದ್ದರೂ ಏಪ್ರಿಲ್‌- ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಂಡಿತ್ತು. 

BDA Hunnigere Villa for Sale soon in Bengaluru grg
Author
First Published Aug 26, 2023, 4:37 AM IST

ಬೆಂಗಳೂರು(ಆ.26): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಉತ್ತರ ಯಶವಂತಪುರ ತಾಲೂಕು ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ವಿಲ್ಲಾ ವಸತಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ ಅಂತ್ಯದೊಳಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಬಿಡಿಎ ಮೊದಲ ಆಲೂರು ವಿಲ್ಲಾ ಯೋಜನೆಯು ಯಶಸ್ವಿಯಾದ ಹಿನ್ನೆಲೆಯಲ್ಲಿ ಹುಣ್ಣಿಗೆರೆ ವಿಲ್ಲಾ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗ ನಿಗದಿಪಡಿಸಿದ್ದು, ಸುಮಾರು 370 ಕೋಟಿಗಳಲ್ಲಿ ವಿಲ್ಲಾ ಮತ್ತು ಅಪಾರ್ಚ್‌ಮೆಂಟ್‌ ನಿರ್ಮಾಣಕ್ಕೆಂದು ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಆ್ಯಂಡ್‌ ಎಸ್ಟೇಟ್‌ ಪ್ರೈ.ಲಿ. ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಬೆಂಗಳೂರು: ಬಿಡಿಎ ವಿಲ್ಲಾ ಮಾರ್ಚ್‌ಗೆ ಸಿದ್ಧ..!

ಕಂಪನಿಯು 2023ರ ಮಾರ್ಚ್‌ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಈ ಯೋಜನೆಯಡಿ 1 ಬಿಎಚ್‌ಕೆ 320 ಮನೆಗಳು, 3 ಬಿಎಚ್‌ಕೆಯ 152 ವಿಲ್ಲಾಗಳು ಹಾಗೂ 4 ಬಿಎಚ್‌ಕೆಯ 170 ವಿಲ್ಲಾಗಳು ಸೇರಿದಂತೆ ಒಟ್ಟು 320 ಫ್ಲಾಟ್‌ಗಳು ಹಾಗೂ 322 ವಿಲ್ಲಾಗಳನ್ನು ನಿರ್ಮಿಸಲಾಗಿದೆ. ವಿವಿಧ ಕಾರಣಗಳಿಂದ ನಿಗದಿತ ಅವಧಿಗೆ ಯೋಜನೆ ಮುಗಿಯದಿದ್ದರೂ ಏಪ್ರಿಲ್‌- ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಂಡಿತ್ತು. ಈ ನಡುವೆ ಚುನಾವಣೆ ಬಂದಿದ್ದರಿಂದ ವಿಲ್ಲಾ ಮತ್ತು ಫ್ಲಾಟ್‌ಗಳನ್ನು ಸಾರ್ವಜನಿಕ ಹಂಚಿಕೆಗೆ ಬಿಡಿಎ ಮುಂದಾಗಿರಲಿಲ್ಲ.

ಇದೀಗ ಹುಣ್ಣಿಗೆರೆ ವಸತಿ ಯೋಜನೆಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸಮರ್ಪಕವಾಗಿ ಪರಿಶೀಲನೆ ನಡೆಸಿ, ಸಾರ್ವಜನಿಕ ಮಾರಾಟಕ್ಕೆ ಒಪ್ಪಿಗೆ ನೀಡುವುದೊಂದೇ ಬಾಕಿ ಇದೆ. ಸಚಿವರು, ಯೋಜನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಯಾವ ಮಾದರಿಯಲ್ಲಿ ಸಾರ್ವಜನಿಕ ಹಂಚಿಕೆ ಮಾಡಬೇಕೆಂದು ಸೂಚನೆ ನೀಡುತ್ತಾರೋ ಅದೇ ಮಾದರಿಯಲ್ಲಿ ವೇದಿಕೆ ಸಿದ್ಧಗೊಳಿಸಿ, ಆನ್‌ಲೈನ್‌ ಮೂಲಕ ಮಾರಾಟಕ್ಕೆ ಬಿಡಿಎ ಸಿದ್ಧತೆ ನಡೆಸಿದೆ. ಪ್ರತಿ ವಿಲ್ಲಾಗಳು ನಿರ್ಮಾಣಗೊಂಡಿರುವ ವಿಸ್ತೀರ್ಣಕ್ಕೆ ಅನುಗುಣವಾಗಿ .80 ಲಕ್ಷದಿಂದ .1.10 ಕೋಟಿವರೆಗೆ ಮಾರಾಟವಾಗುವ ನಿರೀಕ್ಷೆಯಲ್ಲಿ ಬಿಡಿಎ ಇದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.

ವಿಲ್ಲಾಗಳಿಗೆ ಸುಸಜ್ಜಿತ ಸೌಲಭ್ಯ

ಬಿಡಿಎ 3 ಮತ್ತು 4 ಬಿಎಚ್‌ಕೆ ಮನೆಗಳನ್ನು ಆರ್‌ಸಿಸಿ ಫ್ರೇಮ್‌ ಸ್ಟ್ರಕ್ಚರ್‌ನಲ್ಲಿ ನಿರ್ಮಿಸಿದ್ದು, ಈ ವಿಲ್ಲಾಗಳು ವಾಸ್ತು ಪ್ರಕಾರ ನಿರ್ಮಿಸಿರುವ ಡ್ಯೂಪ್ಲೆಕ್ಸ್‌ ಮನೆಗಳಾಗಿದ್ದು ಇಟ್ಟಿಗೆಯಿಂದ ಕಟ್ಟಲಾಗಿದೆ. ಪ್ರತಿ ಮನೆಗೆ ಎರಡು ಪೈಪಿಂಗ್‌ ವ್ಯವಸ್ಥೆ ಅಳವಡಿಸಿದ್ದು, ಸಂಪು ಮತ್ತು ಓವರ್‌ ಹೆಡ್‌ ಟ್ಯಾಂಕಿರುತ್ತದೆ ಮತ್ತು ಸೋಲಾರ್‌ ವಾಟರ್‌ ಹಿಟರ್‌ ವ್ಯವಸ್ಥೆ ಇದೆ.

370 ಕೋಟಿ ವೆಚ್ಚದಲ್ಲಿ 322 ವಿಲ್ಲಾ, ಹುಣ್ಣಿಗೆರೆ ಬಿಡಿಎ ವಿಲ್ಲಾ ಮೇನಲ್ಲಿ ಲಭ್ಯ?

ಒಂದು ಬಿಎಚ್‌ಕೆ ಮನೆಗಳನ್ನು ಆರ್‌ಸಿಸಿ ಗೋಡೆಗಳನ್ನು ಅಳವಡಿಸಿ ಜಿ+3 ಮಹಡಿಯಲ್ಲಿ ನಿರ್ಮಿಸಲಾಗಿದೆ. 3 ಮತ್ತು 4 ಬಿಎಚ್‌ಕೆ ವಿಲ್ಲಾಗಳಿಗೆ ಪ್ರತ್ಯೇಕವಾದ ಗೇಟ್‌ ಅಳವಡಿಸಿ, ಮುಖ್ಯರಸ್ತೆಯಿಂದ ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲಾಗಿರುತ್ತದೆ. ವಿದ್ಯುತ್‌ ವಾಹನ (ಕಾರ್‌ ಚಾರ್ಜಿಂಗ್‌) ಚಾರ್ಜಿಂಗ್‌ ವ್ಯವಸ್ಥೆಯೂ ಇದೆ. ಎಲ್ಲ ವಿಲ್ಲಾಗಳಿಗೂ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಒದಗಿಸಲಾಗಿದೆ. ಈ ಯೋಜನೆಯಲ್ಲಿ 100 ಕೆವಿ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ಡಕ್ಟ್ಗಳನ್ನು ನಿರ್ಮಿಸಿ, ಅದರಲ್ಲಿ ನೀರಿನ ಹಾಗೂ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸಲಾಗಿದೆ.

ಸಮರ್ಪಕ ಮೂಲ ಸೌಕರ್ಯ

ವಿಲ್ಲಾ ಯೋಜನೆಯಲ್ಲಿ 27 ಉದ್ಯಾನವನಗಳಿದ್ದು, ಹಸಿರಿನ ಗಿಡ-ಮರಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಈ ವಸತಿ ಯೋಜನೆಯನ್ನು 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದು, ಈ ವಸತಿ ಯೋಜನೆಯ ಸುತ್ತ 2.1 ಮೀ. ಎತ್ತರದ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿದೆ. ವಸತಿ ಯೋಜನೆಯ ಸುತ್ತ ರಸ್ತೆ ನಿರ್ಮಿಸಲಾಗಿದೆ. ಯೋಜನೆಯಲ್ಲಿ ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಈ ಕೇಂದ್ರದಲ್ಲಿ ಒಳಾಂಗಣ ಆಟಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಒಳಾಂಗಣ ಸೆಟಲ್‌ ಕೋರ್ಚ್‌, ರೆಸ್ಟೋರೆಂಟ್‌, ಜಿಮ್‌, ಏರೋಬಿಕ್ಸ್‌ ರೂಮ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್‌, ಗ್ರಂಥಾಲಯ, ಈಜುಕೊಳ ನಿರ್ಮಿಸಲಾಗಿದೆ ಹಾಗೂ ಸೂಪರ್‌ ಮಾರ್ಕೆಟ್‌ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಮತ್ತು ಅತಿಥಿಗಳಿಗಾಗಿ 4 ಕೊಠಡಿಗಳನ್ನು ಕಲ್ಪಿಸಿರುವುದಾಗಿ ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios