Asianet Suvarna News Asianet Suvarna News

370 ಕೋಟಿ ವೆಚ್ಚದಲ್ಲಿ 322 ವಿಲ್ಲಾ, ಹುಣ್ಣಿಗೆರೆ ಬಿಡಿಎ ವಿಲ್ಲಾ ಮೇನಲ್ಲಿ ಲಭ್ಯ?

ಬಿಡಿಎ ಸುಸಜ್ಜಿತ ಸೌಲಭ್ಯವಿರುವ ವಿನೂತನ ವಿನ್ಯಾಸದಲ್ಲಿ ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ನಾಲ್ಕು ಬಿಎಚ್‌ಕೆ ಮತ್ತು ಮೂರು ಬಿಎಚ್‌ಕೆ ವಿಲ್ಲಾಗಳ ನಿರ್ಮಾಣ ಕಾಮಗಾರಿ ಶೇಕಡ 70ರಷ್ಟುಮುಗಿದಿದ್ದು 2023 ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. 

Hunnigere BDA Villas available in May gow
Author
First Published Sep 25, 2022, 10:18 PM IST

ಬೆಂಗಳೂರು (ಸೆ.25): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸುಸಜ್ಜಿತ ಸೌಲಭ್ಯವಿರುವ ವಿನೂತನ ವಿನ್ಯಾಸದಲ್ಲಿ ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ನಾಲ್ಕು ಬಿಎಚ್‌ಕೆ ಮತ್ತು ಮೂರು ಬಿಎಚ್‌ಕೆ ವಿಲ್ಲಾಗಳ ನಿರ್ಮಾಣ ಕಾಮಗಾರಿ ಶೇಕಡ 70ರಷ್ಟುಮುಗಿದಿದ್ದು 2023 ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗದಲ್ಲಿ 170 ನಾಲ್ಕು ಬಿಎಚ್‌ಕೆ ವಿಲ್ಲಾ (35/50 ಅಳತೆ), 152 ಮೂರು ಬಿಎಚ್‌ಕೆ ವಿಲ್ಲಾಗಳ ಪೈಕಿ, 35/50 ಅಳತೆಯಲ್ಲಿ ನಿರ್ಮಿಸಲಾಗಿರುವ 31 ವಿಲ್ಲಾಗಳು, 30/40 ಸುತ್ತಳತೆಯಲ್ಲಿ ನಿರ್ಮಿಸಲಾಗುತ್ತಿರುವ 121 ವಿಲ್ಲಾಗಳಿವೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗಾಗಿ 320 ಒಂದು ಬಿಎಚ್‌ಕೆ ಪ್ಲಾಟ್‌ಗಳಿರುವ ಮೂರು ಅಂತಸ್ತಿನ ಅಪಾರ್ಚ್‌ಮೆಂಟ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮೇ ತಿಂಗಳಲ್ಲಿ 3 ಮತ್ತು 4 ಬಿಎಚ್‌ಕೆ ವಿಲ್ಲಾಗಳ ನಿರ್ಮಾಣ ಮುಕ್ತಾಯಗೊಂಡ ಬಳಿಕ ಬೆಲೆ ನಿಗದಿಪಡಿಸಿ, ಮಾರಾಟ ಮಾಡುವುದಾಗಿ ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸುಮಾರು .370 ಕೋಟಿ ವೆಚ್ಚದಲ್ಲಿ ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಆ್ಯಂಡ್‌ ಎಸ್ಟೆಟ್‌ ಪ್ರೈ.ಲಿ. ಕಂಪನಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ.

ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಕಂಪನಿ ಭರವಸೆ ನೀಡಿದೆ. ಎಸಿಎಸ್‌ ಡಿಸೈನ್‌ ಕನ್ಸಲ್ಟೆಂಟ್ಸ್‌ ಕಂಪನಿಯು ಕಟ್ಟಡಗಳ ವಿನ್ಯಾಸ ಮಾಡಿದ್ದು, ಡಿಸೈನ್‌ ಪಾಯಿಂಟ್‌ ಕನ್ಸಲ್ಟೆಂಟ್ಸ್‌ ಯೋಜನೆಯ ನಿರ್ವಹಣೆ ಮಾಡುತ್ತಿದೆ.

ವಿಲ್ಲಾ ನಿರ್ಮಾಣಗೊಳ್ಳುತ್ತಿರುವ ಪ್ರದೇಶದಲ್ಲಿ ಸುತ್ತ 2.1 ಮೀಟರ್‌ ಎತ್ತರದ ಕಾಂಪೌಂಡ್‌, 0.6 ಮೀಟರ್‌ ಮುಳ್ಳು ತಂತಿ ಬೇಲಿ ಅಳವಡಿಸಲಾಗುತ್ತಿದೆ. 6 ಮೀಟರ್‌ ಅಗಲದ ರಸ್ತೆ, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಭೂ ದೃಶ್ಯ, ಬಾಸ್ಕೆಟ್‌ಬಾಲ್‌, ಕ್ರಿಕೆಟ್‌ ಮತ್ತು ಮಕ್ಕಳು ಆಟವಾಡುವ ಮೈದಾನ, 600 ಕೆಎಲ್‌ಡಿಯ ಎಸ್‌ಟಿಪಿ ಘಟಕ, 1.5 ಲಕ್ಷ ಲೀಟರ್‌ ಕುಡಿಯುವ ನೀರಿನ ಓವರ್‌ಹೆಡ್‌ ಟ್ಯಾಂಕ್‌(ಒಎಚ್‌ಟಿ), 1.5 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್‌, 10 ಕೊಳವೆ ಬಾವಿಗಳು ಇರಲಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಪಂಪ್‌ಗಳು, ಪೈಪ್‌ ಸಂಪರ್ಕ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ. ಈ 10 ಕೊಳವೆ ಬಾವಿಗಳು ಮಳೆ ನೀರಿನಿಂದ ಪುನಶ್ಚೇತನಗೊಳ್ಳುವಂತೆ ಮಳೆನೀರು ಕೊಯ್ಲು ಮಾದರಿಯಲ್ಲಿ ಪೈಪ್‌ಲೈನ್‌ ಸಂಪರ್ಕ ಕೂಡ ಇರಲಿದೆ.

ನಿವಾಸಿಗಳ ವಾಹನಗಳ ನಿಲುಗಡೆಗೆ ವಿವಿಧ ಮಾದರಿಯ ಪಾರ್ಕಿಂಗ್‌ ವ್ಯವಸ್ಥೆ, ಒಪನ್‌ ಪಾರ್ಕಿಂಗ್‌ಗಾಗಿ 2640 ಚದರ ಮೀಟರ್‌ ಮತ್ತು ಆವರಿಸಿದ ಪಾರ್ಕಿಂಗ್‌ ವ್ಯವಸ್ಥೆಗೆ 5827.75 ಚದರ ಮೀಟರ್‌ ಪ್ರದೇಶ ಮೀಸಲು ಇಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಬಿಡಿಎ ನಿರ್ಮಿಸಿದ ಮೊದಲ ಆಲೂರಿನ ವಿಲ್ಲಾ ಯೋಜನೆಯ ಶೇ.100ರಷ್ಟುವಿಲ್ಲಾಗಳು ಮಾರಾಟವಾಗಿವೆ. 452 ವಿಲ್ಲಾಗಳಲ್ಲಿ 3 ಬಿಎಚ್‌ಕೆಯ 140 ಹಾಗೂ 2 ಬಿಎಚ್‌ಕೆಯ (ಸಿಂಪ್ಲೆಕ್ಸ್‌) 96 ವಿಲ್ಲಾಗಳು ಮತ್ತು 2 ಬಿಎಚ್‌ಕೆ(ಡುಪ್ಲೆಕ್ಸ್‌) ಮಾದರಿಯ 252 ವಿಲ್ಲಾಗಳು ಮಾರಾಟವಾಗಿವೆ. ಕಾರ್ಪೊರೇಟ್‌ ಹಾಗೂ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಸುಸಜ್ಜಿತ ಸೌಲಭ್ಯಗಳುಳ್ಳ ವಿಲ್ಲಾ ಹೌಸ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಹುಣ್ಣಿಗೆರೆಯಲ್ಲೂ ವಿಲ್ಲಾ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಂಡಿದೆ.

Bengaluru: ಬಿಡಿಎಯಿಂದ ಇನ್ನೊಂದು ವಿಲ್ಲಾ ಪ್ರಾಜೆಕ್ಟ್..!

ಹುಣ್ಣಿಗೆರೆ ವಿಲ್ಲಾ ಯೋಜನೆ ಪ್ರಸ್ತುತ ಶೇ.70ರಷ್ಟುಕಾಮಗಾರಿ ಮುಗಿದಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಯೋಜನೆ ಪೂರ್ಣಗೊಂಡ ಬಳಿಕ ವಿಲ್ಲಾಗಳ ದರ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು.

-ಶಾಂತರಾಜಣ್ಣ, ಎಂಜಿನಿಯರಿಂಗ್‌ ಸದಸ್ಯ, ಬಿಡಿಎ.

Follow Us:
Download App:
  • android
  • ios