2,430 ಕೋಟಿಯಲ್ಲಿ ಕಾರಂತ ಬಡಾವಣೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದ್ದು, 2500 ಎಕರೆಯಲ್ಲಿ 9 ಬ್ಲಾಕ್‌ಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುವ ಬಗ್ಗೆ ಬಿಡಿಎ ಗುರಿ ನಿಗದಿ ಪಡಿಸಿದೆ.

ಬೆಂಗಳೂರು (ಜು.29): ಕಳೆದ ಆರು ವರ್ಷಗಳಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಗೆ (ಎನ್‌ಪಿಕೆಎಲ್‌) ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ ಪೂರ್ಣಗೊಳಿಸದ ಬಿಡಿಎ, ಇದೀಗ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದು, ಟೆಂಡರ್‌ ಪ್ರಕ್ರಿಯೆಯನ್ನು ಆರಂಭಿಸಿದೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣವನ್ನು 2500 ಎಕರೆ ಭೂಮಿಯಲ್ಲಿ 9 ಬ್ಲಾಕ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ .2,430 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. 9 ಬ್ಲಾಕ್‌ಗಳ ಪೈಕಿ ಪ್ರತಿಯೊಂದು ಬ್ಲಾಕ್‌ಗೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಿ ಮಳೆಗಾಲವೂ ಸೇರಿದಂತೆ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ವಿವಿಧ ಕಾರಣಗಳಿಂದ ಈವರೆಗೂ ಶೇ.50ರಷ್ಟುಕಾಮಗಾರಿಯೂ ಮುಕ್ತಾಯವಾಗದೆ ಸಾಕಷ್ಟುವಿಳಂಬವಾಗುತ್ತಿದೆ. ಇದರಿಂದ ಕೆಂಪೇಗೌಡ ಬಡಾವಣೆಯ ನಿವೇಶನದಾರರು ಸಾಕಷ್ಟುಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಡಿಎ ಶಿವರಾಮ ಕಾರಂತ ಬಡಾವಣೆಯಲ್ಲಿ ಪ್ರತಿಯೊಂದು ಬ್ಲಾಕ್‌ ನಿರ್ಮಾಣವನ್ನೂ ಬೇರೆ ಬೇರೆ ಗುತ್ತಿಗೆ ನೀಡಲು ಯೋಜನೆ ರೂಪಿಸಿದ್ದು ಟೆಂಡರ್‌ ಕರೆದಿದೆ.

ಸುಪ್ರೀಂ ಕೋರ್ಚ್‌ ಆದೇಶದ ಹಿನ್ನೆಲೆಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಕ್ರಮ, ಸಕ್ರಮ ಸೇರಿ ವಿವಿಧ ಸಮಸ್ಯೆಗಳ ನಿವಾರಣೆಗೆಂದು ಸುಪ್ರೀಂ ಕೋರ್ಚ್‌ ನ್ಯಾ.ಚಂದ್ರಶೇಖರ್‌ ನೇತೃತ್ವದ ಸಮಿತಿ ರಚಿಸಿದ್ದು, ದಾಖಲೆಗಳ ಪರಿಶೀಲನೆ ಮುಗಿದಿದೆ. ಸಕ್ರಮ ಕಟ್ಟಡಗಳನ್ನು ಸುಪ್ರೀಂ ಕೋರ್ಚ್‌ನಿಂದ ಆದೇಶ ಮಾಡಿಸಿ ಮಾಲಿಕರಿಗೆ ಪ್ರಮಾಣ ಪತ್ರ ವಿತರಿಸುವ ಕೆಲಸವನ್ನು ಸಮಿತಿ ನೇತೃತ್ವದಲ್ಲಿ ಬಿಡಿಎ ಮಾಡುತ್ತಿದೆ. ಹಾಗಾಗಿ ಈ ಬಡಾವಣೆ ನಿರ್ಮಾಣಕ್ಕೆ ಇದ್ದ ಅಡ್ಡಿ, ಆತಂಕವೂ ಸುಪ್ರೀಂ ಕೋರ್ಚ್‌ ಮಧ್ಯಪ್ರವೇಶದಿಂದ ನಿವಾರಣೆಯಾಗಿದ್ದು, ನಿಗದಿತ ಅವಧಿಯೊಳಗೆ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ.

ನಾಗರಿಕರೇ ಗಮನಿಸಿ: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎಯಿಂದ ದಾಖಲೆ ಸಂಗ್ರಹ

ಶಿವರಾಮ ಕಾರಂತ ಬಡಾವಣೆಗೂ ಮುನ್ನವೇ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣವನ್ನು ಬಿಡಿಎ ಪೂರ್ಣಗೊಳಿಸಬೇಕಿತ್ತು. ಆದರೆ ಕೆಂಪೇಗೌಡ ಬಡಾವಣೆಯಲ್ಲಿ ಇಂದಿಗೂ 1.300 ಎಕರೆ ಭೂಸ್ವಾಧೀನ ಬಾಕಿ ಇದೆ. ಈ ಬಗ್ಗೆ ಬಿಡಿಎ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಜೊತೆಗೆ ಬಡಾವಣೆ ನಿರ್ಮಾಣ ಕಾಮಗಾರಿ ವಿಳಂಬದಿಂದ ಹೊಸದಾಗಿ 190 ಎಕರೆ ಸ್ವಾಧೀನಗೊಂಡಿದ್ದ ಭೂಮಿಯ ರೈತರು ತರಕಾರು ತೆಗೆದಿದ್ದಾರೆ. ಹಾಗಾಗಿ ಕೆಂಪೇಗೌಡ ಬಡಾವಣೆ ಮತ್ತಷ್ಟುವಿಳಂಬವಾಗುವ ಸಾಧ್ಯತೆ ಇದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

Shivaram Karanth Layout; ಮತ್ತೆ 917 ಕಟ್ಟಡಗಳು ಸಕ್ರಮ

ಆ.1 ಟೆಂಡರ್‌ ಆರಂಭ: ಶಿವರಾಮ ಕಾರಂತ ಬಡಾವಣೆಯ ಟೆಂಡರ್‌ ಆಗಸ್ಟ್‌ 1ರಿಂದ ಆರಂಭಗೊಳ್ಳಲಿದ್ದು, ಆ.8 ಟೆಂಡರ್‌ ಸಲ್ಲಿಸಲು ಕೊನೆಯ ದಿನವಾಗಿದೆ. ಟೆಂಡರ್‌ ಪೂರ್ವ ಸಭೆ ಆ.11ರಂದು ಮಧ್ಯಾಹ್ನ 3ಕ್ಕೆ ನಿಗದಿಯಾಗಿದ್ದು, ಟೆಂಡರ್‌ಗಳನ್ನು ಸ್ವೀಕರಿಸುವ ಕೊನೆಯ ದಿನ ಸೆ.1 ಸಂಜೆ 4ರವರೆಗೆ ಇರಲಿದೆ. ತಾಂತ್ರಿಕ ಬಿಡ್‌ಗಳನ್ನು ಸೆ.3ರಂದು ತೆರೆಯಲಾಗುವುದು. ವಿದ್ಯುನ್ಮಾನ ದಸ್ತಾವೇಜು(ಆರ್ಥಿಕ ಬಿಡ್‌) ತೆರೆಯುವ ದಿನವನ್ನು ತಿಳಿಸುವುದಾಗಿ ಬಿಡಿಎ ತಿಳಿಸಿದೆ.