ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಬಳಿ ನಿರ್ಮಿಸಲಾಗಿರುವ ಟೋಲ್ ಪ್ಲಾಝಾದಲ್ಲಿ ಗುರುವಾರದಿಂದ ಶುಲ್ಕ ಸಂಗ್ರಹ ಆರಂಭವಾದ ಬೆನ್ನಲ್ಲೇ, ಶುಲ್ಕದ ಹೊರೆಯಿಂದ ಕಂಗಾಲಾದ ಸ್ಥಳೀಯ ನಿವಾಸಿಗಳು ಶುಕ್ರವಾರ ಪ್ರತಿಭಟನೆಗಿಳಿದರು

ದಕ್ಷಿಣ ಕನ್ನಡ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ..ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ನಿರ್ಮಾಣವಾಗಿರುವ ಟೋಲ್ ಪ್ಲಾಝಾದಲ್ಲಿ ಶುಲ್ಕ ವಸೂಲಿ ಗುರುವಾರದಿಂದ ಆರಂಭಗೊಂಡ ಬೆನ್ನಿಗೆ ಶುಲ್ಕ ಪಾವತಿಯ ಸಂಕಷ್ಟಕ್ಕೀಡಾದ ಸ್ಥಳೀಯರು ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಶುಕ್ರವಾರ ಗೇಟು ತೆರವುಗೊಳಿಸಿ ಪ್ರತಿಭಟಿಸಿದರು.

ವ್ಯಕ್ತಿಯೋರ್ವರು 3 ಬಾರಿ ಸಂಚರಿಸಿದಾಗಲೂ 3 ಬಾರಿ ಹಣ ಕಟ್!

ಟೋಲ್ ಪ್ಲಾಝಾ ದಲ್ಲಿನ ಇಕ್ಕಡೆಯ ಒಟ್ಟು 8 ಲೇನ್‌ಗಳ ಪೈಕಿ ಇಕ್ಕಡೆಯಲ್ಲಿ 6 ಲೈನ್‌ಗಳು (3+3) ಡೆಡಿಕೇಟೆಡ್ ಲೈನ್ ಆಗಿದ್ದು, ಇದರಲ್ಲಿ ಫಾಸ್ಟ್ ಟೇಗ್ ಇರುವವರು ಮಾತ್ರ ಹೋಗುವಂತದ್ದು, ಇಕ್ಕಡೆಯ 2 ಲೈನ್‌ಗಳು ಕ್ಯಾಸ್ ಪ್ಲಸ್ ಫಾಸ್ಟ್ ಟ್ಯಾಗ್‌ಗಳು. ನಗದು ರಹಿತವಾಗಿ ಫೋನ್ ಪೇ, ಗೂಗಲ್ ಪೇ ಅಥವಾ ಸ್ಕ್ಯಾನಿಂಗ್‌ಗೆ ಮಾತ್ರ ಅವಕಾಶ ಇದೆ. ಗುರುವಾರ ಚಾಲನೆ ಪಡೆದ ಸುಂಕ ವಸೂಲಿ ಪ್ರಕ್ರಿಯೆಯಲ್ಲಿ ದಿನಕ್ಕೆ ಹಲವು ಬಾರಿ ಸಂಚರಿಸಬೇಕಾದ ಸ್ಥಳೀಯರಿಂದ ತಲಾ 140 ರಂತೆ ಪ್ರತಿ ಬಾರಿ ಕಡಿತವಾಗುತ್ತಿದೆ. ವ್ಯಕ್ತಿಯೋರ್ವರು 3 ಬಾರಿ ಸಂಚರಿಸಿದಾಗಲೂ 3 ಬಾರಿ ಹಣ ಕಡಿತಗೊಂಡಿದೆ. ಇದರಿಂದಾಗಿ ದಿನಕ್ಕೆ 420 ರೂ ಹಣ ಪಾವತಿಸುವ ದುಸ್ಥಿತಿ ಸ್ಥಳೀಯರಾದ ನಮಗಾದರೆ , ಈ ಟೋಲ್ ವ್ಯವಸ್ಥೆ ನಮಗೆ ಬೇಕಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರ ಮಾತನಾಡಿ, ಈ ಭಾಗದ ಸುತ್ತಮುತ್ತಲ ಗ್ರಾಮದ ನಿವಾಸಿಗರಿಂದ ವಾರ್ಷಿಕ 1500 ರು. ಪಾವತಿಸುವ ಯೋಜನೆಯನ್ನು ಕೈಬಿಟ್ಟು ಒಂದು ರುಪಾಯಿ ಕೂಡಾ ಸುಂಕ ವಸೂಲಿ ಮಾಡಬಾರದು. ಜಿಲ್ಲೆಯ ನಿವಾಸಿಗರಿಗೆ ರಿಯಾಯಿತಿ ಒದಗಿಸಬೇಕು, ಇಡೀ ಸರ್ಕಾರಿ ವ್ಯವಸ್ಥೆ ಇಲ್ಲಿಗೆ ಬಂದು ಸ್ಥಳೀಯರ ಅಹವಾಲು ಆಲಿಸಿ ಬಳಿಕ ಸುಂಕ ವಸೂಲಿಗೆ ಮುಂದಾಗಬೇಕು ಎಂದರು.

ಸ್ಥಳೀಯ ಜನರ ಸಮಸ್ಯೆ ಇತ್ಯರ್ಥಗೊಳ್ಳದೆ ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಘೋಷಿಸಿದರು. ಪ್ರತಿಭಟನಾಕಾರರ ಜೊತೆಗೂಡಿ ಟೋಲ್ ಪ್ಲಾಝ ದ ಎಲ್ಲಾ ಗೇಟುಗಳನ್ನು ತೆರವುಗೊಳಿಸಿ ಸುಂಕ ರಹಿತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಈ ಮಧ್ಯೆ ಫಾಸ್ಟ್ ಟ್ಯಾಗ್ ಅಳವಡಿಸಿದ ವಾಹನಗಳಿಂದ ವಿದ್ಯುನ್ಮಾನ ವ್ಯವಸ್ಥೆಯಡಿ ಸ್ಕ್ಯಾನ್ ಮೂಲಕ ಹಣ ವಸೂಲಿಯಾಗುತ್ತಿರುವುದನ್ನು ಗಮನಿಸಿ ಸ್ಕ್ಯಾನರ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ಯತ್ನ ನಡೆಯಿತ್ತಾದರೂ ಎತ್ತರದಲ್ಲಿದ್ದ ಸ್ಕ್ಯಾನರ್ ಬಳಿಗೆ ಹೋಗಲು ಸಾಧ್ಯವಾಗದೆ ಪ್ರಯತ್ನವನ್ನು ಕೈ ಬಿಡಲಾಯಿತು.

ಪ್ರಮುಖರಾದ ರಶೀದ್ ಮಠ, ಸರ್ಫ್ರಾಜ್, ಬಿ ಎಂ ಭಟ್, ಪ್ರಶಾಂತ್, ಝಬೈರ್, ಪ್ರವೀಣ್ ಮೊದಲಾದವರು ಸ್ಥಳೀಯರ ಸಮಸ್ಯೆಗಳ ಬಗ್ಗೆ ಪ್ರತಿಭಟನಾಕಾರರ ಪರವಾಗಿ ಮಾತನಾಡಿದರು.

ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳದಲ್ಲಿ ಹಾಜರಿದ್ದು ಬಂದೋ ಬಸ್ತು ಕ್ರಮ ಕೈಗೊಂಡಿದ್ದರಾದರೂ, ಟೋಲ್ ಪ್ಲಾಝಾದ ಗೇಟುಗಳ ತೆರವಿನ ವೇಳೆ ಮೌನವಾಗಿದ್ದು, ವಿಡಿಯೋ ರೆಕಾರ್ಡ್ ಕಾರ್ಯ ನಡೆಸಿದ್ದರು.

ಟೋಲ್ ಪ್ಲಾಝಾದ ಮೆನೇಜರ್ ಕರುಣಾಕರ ಶೆಟ್ಟಿ ಟೋಲ್ ಪ್ಲಾಝಾದ ನಿಯಮಾವಳಿಗಳನ್ನು ತಿಳಿಸಿ , ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

------------------------