ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾದನಾ ತಾಣವಾಗಿ ಮಾರ್ಪಟ್ಟಿವೆ. ಹೆದ್ದಾರಿ ಪ್ರಾಧಿಕಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ-ಮೌನೇಶ ವಿಶ್ವಕರ್ಮ

ದಕ್ಷಿನ ಕನ್ನಡ (ನ.08): ಬಿ.ಸಿ .ರೋಡು ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣ ನಮಗೇನೋ ಖುಷಿ ಕೊಡುತ್ತದೆ. ಆದರೆ ಈ ರಸ್ತೆಗಳ ಇಕ್ಕೆಲಗಳಲ್ಲಿರುವ ಚರಂಡಿಗಳನ್ನು ಗಮನಿಸಿದರೆ ಅಯ್ಯೋ ಎಂದೆನ್ನಿಸುತ್ತದೆ. ರಸ್ತೆ ನಿರ್ಮಾಣದಷ್ಟೇ ಮುಖ್ಯವಾಗಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಿಸಬೇಕು. ಆದರೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಕಾಂಕ್ರೀಟ್ ಚರಂಡಿಗಳನ್ನು ನೋಡಿದರೆ, ಇಲಾಖೆಯ ಉದ್ದೇಶದ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತಾಗಿದೆ. ನೀರು ಹರಿದು ಹೋಗಬೇಕಾದ ಚರಂಡಿಗಳಲ್ಲಿ ನೀರು ನಿಂತು, ಸೊಳ್ಳೆಗಳ ಸಂತಾನೋತ್ಪತ್ತಿ ವ್ಯವಸ್ಥೆ ನಿರ್ಮಾಣವಾಗಿದೆ!

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆ ಎರಡೂ ಬದಿಗಳಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಿಸಲಾಗಿದೆ. ಈ ಕಾಮಗಾರಿ ಈಗ ಹೊಸದೊಂದು ಸಮಸ್ಯೆಗೆ ನಾಂದಿ ಹಾಡಿದೆ. ಬಹುತೇಕ ಕಡೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ನಿಂತುಕೊಂಡಿದೆ. ಸೂರಿಕುಮೆರು, ಮಾಣಿ, ಬೊಳ್ಳುಕಲ್ಲು, ಪೆರ್ನೆ, ಬುಡೋಳಿ ಮೊದಲಾದೆಡೆಯ ಚರಂಡಿಗಳು ಹೆದ್ದಾರಿ ಇಲಾಖೆಯ ಲೋಪವನ್ನು ಎತ್ತಿ ಹಿಡಿಯುತ್ತಿದೆ. ಬಿಸಿಲು ಮತ್ತು ಮಳೆಯ ನಡುವೆ ನಿಂತ ನೀರು ಸೊಳ್ಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದ ತಾಣವಾಗಿ ಪರಿಣಮಿಸಿದೆ.

ಒಂದೆಡೆ ಜಾಗೃತಿ, ಮತ್ತೊಂದೆಡೆ ಸೊಳ್ಳೆ ಉತ್ಪಾದನೆ: 

ಒಂದು ಕಡೆ ಆರೋಗ್ಯ ಇಲಾಖೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಜನಜಾಗೃತಿ ಮೂಡಿಸುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ನೀರು ನಿಂತರೂ ಅದನ್ನು ತೆರವುಗೊಳಿಸಬೇಕೆಂದು ಆರೋಗ್ಯ ಇಲಾಖೆ ಸೂಚಿಸುತ್ತದೆ. ಆದರೆ ಹೆದ್ದಾರಿಯುದ್ದಕ್ಕೂ ಕಾಂಕ್ರೀಟ್ ಚರಂಡಿಗಳಲ್ಲಿ ನೀರು ನಿಂತಿದ್ದರೆ ಅದನ್ನು ತೆರವುಗೊಳಿಸುವ ಜವಾಬ್ದಾರಿ ಯಾರದ್ದು? ಸೊಳ್ಳೆಗಳನ್ನು ನಾಶಪಡಿಸುವ ಕೆಲಸ ಆರೋಗ್ಯ ಇಲಾಖೆಯದ್ದಾದರೆ, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಚರಂಡಿ ನಿರ್ಮಿಸಿದ ಇಲಾಖೆಯದ್ದಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಸೊಳ್ಳೆಗಳಿಗೂ ಅಭಿವೃದ್ಧಿಯ ಭಾಗ್ಯವೇ?:

ಇಲಾಖೆಯ ಈ ಕಾಮಗಾರಿಯನ್ನು ಗಮನಿಸಿದರೆ, ಹೆದ್ದಾರಿಯ ಅಭಿವೃದ್ಧಿಯ ಜೊತೆಗೆ ಸೊಳ್ಳೆಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಿದಂತಿದೆ ಎಂಬ ವ್ಯಂಗ್ಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರಸ್ತೆ ಬದಿಯ ಚರಂಡಿಗಳಲ್ಲಿ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿರುವುದರಿಂದ ಸೊಳ್ಳೆಗಳಿಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಿದಂತಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಚರಂಡಿಗಳಲ್ಲಿ ಶೇಖರಣೆಯಾಗಿರುವ ಕಸಕಡ್ಡಿಗಳನ್ನು ತೆರವುಗೊಳಿಸಿ, ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಾಮಗಾರಿಯ ವಿನ್ಯಾಸದಲ್ಲೇ ಲೋಪವಿದ್ದರೆ ಅದನ್ನೂ ಸರಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕೆಎನ್‌ಆರ್ ಸಂಸ್ಥೆ ಕಾಮಗಾರಿ ನಡೆಸಿರುವ ಚರಂಡಿಗಳು ನೀರು ನಿಂತು ಸ್ಥಳೀಯವಾಗಿ ಸಮಸ್ಯೆ ಹೆಚ್ಚುತ್ತಿವೆ. ಈ ಕುರಿತು ಹಲವು ಬಾರಿದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಈ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಬೇಕಿದೆ.

- ಅಕ್ಷತ್ ಸುವರ್ಣ, ಸ್ಥಳೀಯರು

ಕಾಮಗಾರಿ ಮುಕ್ತಾಯವಾದ ನಂತರ ಕೆಲವು ಚರಂಡಿಗಳಲ್ಲಿ ಮಣ್ಣು ನಿಂತು ಹೀಗೆ ಸಮಸ್ಯೆ ಆಗಿರಬಹುದು. ಈಗಲೇ ಚರಂಡಿಗಳನ್ನು ಶುಚಿಗೊಳಿಸಿ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸೊಳ್ಳೆಗಳ ಉತ್ಪಾದನೆ ತಗ್ಗಲಿದೆ.

- ರಘು ರೆಡ್ಡಿ, ಕೆ.ಎನ್.ಆರ್ ಸಂಸ್ಥೆ