Asianet Suvarna News Asianet Suvarna News

ಬೆಂಗಳೂರು: ಫ್ರೀಡಂ ಪಾರ್ಕ್‌ನ ಪಾರ್ಕಿಂಗ್‌ ಕಟ್ಟಡ ಅತಂತ್ರ..!

ವಾಹನ ನಿಲುಗಡೆ ಸಮಸ್ಯೆ ನಿವಾರಿಸುವ ಸಲುವಾಗಿ ಬಿಬಿಎಂಪಿಯು 79 ಕೋಟಿ ವೆಚ್ಚದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಿದೆ. ಕಾಮಗಾರಿ ಪೂರ್ಣಗೊಂಡು ಹಲವಾರು ತಿಂಗಳುಗಳೇ ಕಳೆದಿವೆ. ಆದರೆ, ಈವರೆಗೆ ವಾಹನ ನಿಲುಗಡೆ ಕಟ್ಟಡದ ನಿರ್ವಹಣೆಗೆ ಬಿಬಿಎಂಪಿಗೆ ಗುತ್ತಿಗೆದಾರರೇ ಸಿಗುತ್ತಿಲ್ಲ.

BBMP Unable to Find Contractor for the Maintenance of the Parking Building in Bengaluru grg
Author
First Published Jan 12, 2023, 10:36 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜ.12): ನಗರದ ಫ್ರೀಡಂ ಪಾರ್ಕ್‌ನಲ್ಲಿ ನಿರ್ಮಿಸಲಾದ ಮಲ್ಟಿಲೆವಲ್‌ ಬೈಕ್‌ ಹಾಗೂ ಕಾರ್‌ ನಿಲುಗಡೆ ಕಟ್ಟಡ ನಿರ್ವಹಣೆಗೆ ಸತತವಾಗಿ 6 ಬಾರಿ ಟೆಂಡರ್‌ ಆಹ್ವಾನಿಸಿದರೂ ಬಿಬಿಎಂಪಿಗೆ ಗುತ್ತಿಗೆದಾರರು ಸಿಕ್ಕಿಲ್ಲ. ಮೆಜೆಸ್ಟಿಕ್‌, ಗಾಂಧಿನಗರ, ಕಾಳಿದಾಸ ರಸ್ತೆ, ಕನಕದಾಸ ರಸ್ತೆ ಸೇರಿ ಸುತ್ತಲಿನ ಪ್ರದೇಶಗಳಲ್ಲಿನ ವಾಹನ ನಿಲುಗಡೆ ಸಮಸ್ಯೆ ನಿವಾರಿಸುವ ಸಲುವಾಗಿ ಬಿಬಿಎಂಪಿಯು 79 ಕೋಟಿ ವೆಚ್ಚದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಿದೆ. ಕಾಮಗಾರಿ ಪೂರ್ಣಗೊಂಡು ಹಲವಾರು ತಿಂಗಳುಗಳೇ ಕಳೆದಿವೆ. ಆದರೆ, ಈವರೆಗೆ ವಾಹನ ನಿಲುಗಡೆ ಕಟ್ಟಡದ ನಿರ್ವಹಣೆಗೆ ಬಿಬಿಎಂಪಿಗೆ ಗುತ್ತಿಗೆದಾರರೇ ಸಿಗುತ್ತಿಲ್ಲ.

6 ಬಾರಿ ಟೆಂಡರ್‌:

ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ನಿರ್ವಹಣೆಗೆ ಈವರೆಗೆ ಬರೋಬ್ಬರಿ 6 ಬಾರಿ ಬಿಬಿಎಂಪಿ ಟೆಂಡರ್‌ ಆಹ್ವಾನಿಸಿದೆ. ಆದರೂ ಯಾರೊಬ್ಬ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಕಳೆದ ಡಿಸೆಂಬರ್‌ನಲ್ಲಿಯೂ ಟೆಂಡರ್‌ ಆಹ್ವಾನಿಸಲಾಗಿತ್ತು. ಆ ಟೆಂಡರ್‌ನಲ್ಲಿಯೂ ಯಾರೊಬ್ಬರೂ ನಿರ್ವಹಣೆಗೆ ಆಸಕ್ತಿ ವ್ಯಕ್ತಪಡಿಸಿಲ್ಲ.

ಜ.15ರೊಳಗೆ 108 ವಾರ್ಡಲ್ಲಿ Namma Clinic ಆರಂಭ; ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಷರತ್ತು ಸಡಿಲಗೊಳಿಸಿದ ಪಾಲಿಕೆ; ಆದರೂ ನಿರಾಸಕ್ತಿ

ಬಿಬಿಎಂಪಿ ವಿಧಿಸಿರುವ ಷರತ್ತುಗಳು ಗುತ್ತಿಗೆದಾರರಿಗೆ ನಷ್ಟವನ್ನುಂಟು ಮಾಡುವ ಸಾಧ್ಯತೆಗಳಿದ್ದು, ಅದರಿಂದ ವಾಹನ ನಿಲುಗಡೆ ಕಟ್ಟಡ ನಿರ್ವಹಣೆ ಗುತ್ತಿಗೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಆದಾಯ ಹಂಚಿಕೆಯು ಗುತ್ತಿಗೆದಾರರಿಗಿಂತ ಬಿಬಿಎಂಪಿಗೆ ಹೆಚ್ಚಿನ ಲಾಭವನ್ನುಂಟು ಮಾಡಲಿದೆ. ಇದನ್ನು ಮನಗಂಡಿರುವ ಬಿಬಿಎಂಪಿಯು ಗುತ್ತಿಗೆ ಷರತ್ತುಗಳಲ್ಲಿ ಮಾರ್ಪಾಡು ಮಾಡಿ ಕಳೆದ ಡಿಸೆಂಬರ್‌ನಲ್ಲಿ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೂ ಯಾರೊಬ್ಬರೂ ಗುತ್ತಿಗೆದಾರರು ಭಾಗವಹಿಸದಿರುವುದು ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.

ಇನ್ನಷ್ಟು ಷರತ್ತು ಸಡಿಲಕ್ಕೆ ಸಿದ್ಧತೆ

ಟೆಂಡರ್‌ ಪ್ರಕ್ರಿಯೆಯಲ್ಲಿನ ದಾಖಲೆಯಲ್ಲಿ ವಾಹನ ನಿಲುಗಡೆ ಕಟ್ಟಡದಲ್ಲಿ ನಿಲ್ಲುವ ವಾಹನಗಳಿಂದ ವಸೂಲಾಗುವ ಶುಲ್ಕದಲ್ಲಿ ಬಿಬಿಎಂಪಿ ಹಾಗೂ ಗುತ್ತಿಗೆದಾರರು ಹಂಚಿಕೊಳ್ಳಬೇಕಿದೆ. ಅದರ ಪ್ರಕಾರ ವಸೂಲಿಯಾಗುವ ಶುಲ್ಕದಲ್ಲಿ ಶೇ.80 ಬಿಬಿಎಂಪಿಗೆ ನೀಡಿದರೆ, ಉಳಿದ ಶೇ.20 ಗುತ್ತಿಗೆದಾರರು ಪಡೆದುಕೊಳ್ಳಬೇಕಿದೆ. ಆದರೆ, ಈ ಮೊತ್ತ ತೀರಾ ಕಡಿಮೆಯಾದ ಕಾರಣ ಗುತ್ತಿಗೆದಾರರು ವಾಹನ ನಿಲುಗಡೆ ನಿರ್ವಹಣೆ ಗುತ್ತಿಗೆ ಪಡೆಯಲು ಮುಂದಾಗಿಲ್ಲ. ಹೀಗಾಗಿಯೇ ಡಿಸೆಂಬರ್‌ನಲ್ಲಿ ಆಹ್ವಾನಿಸಿದ ಟೆಂಡರ್‌ನಲ್ಲಿ ಶುಲ್ಕ ವಸೂಲಿ ಮೊತ್ತದಲ್ಲಿ ಶೇ.60 ಬಿಬಿಎಂಪಿಗೆ ಹಾಗೂ ಶೇ.40 ಗುತ್ತಿಗೆದಾರರಿಗೆ ನೀಡಲು ನಿರ್ಧರಿಸಲಾಗಿತ್ತು. ಆದರೂ ಟೆಂಡರ್‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಭಾಗವಹಿಸದಿರುವುದಕ್ಕೆ ಮತ್ತಷ್ಟು ಟೆಂಡರ್‌ ನಿಯಮ ಸಡಿಲಗೊಳಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ.

ಗುತ್ತಿಗೆದಾರರು ಹಿಂದೇಟಿಗೆ ಕಾರಣ?

ಗುತ್ತಿಗೆದಾರರು ಕಟ್ಟಡದಲ್ಲಿ ಸಿಸಿ ಕ್ಯಾಮರಾ, ಇ-ಟಿಕೆಟಿಂಗ್‌ ವ್ಯವಸ್ಥೆ, ಆಟೋ ಪೇ ಸಿಸ್ಟಂ ಅಳವಡಿಸಬೇಕಿದೆ. ಅದರ ಜತೆಗೆ ವಾಹನ ನಿಲುಗಡೆ ಮಾಡುವವರನ್ನು ಕಟ್ಟಡದಿಂದ ಹೊರಭಾಗಕ್ಕೆ ಕರೆತರುವ ಸಲುವಾಗಿ ವಾಹನದ ವ್ಯವಸ್ಥೆಯನ್ನು ಗುತ್ತಿಗೆದಾರರು ಮಾಡಬೇಕು. ಸುತ್ತಮುತ್ತಲಿನ ರಸ್ತೆಯಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ಸಾಕಷ್ಟುಸ್ಥಳಾವಕಾಶವಿದೆ. ಹೀಗಿರುವಾಗ ವಾಹನ ಮಾಲಿಕರು ಹಣ ಕೊಟ್ಟು ವಾಹನ ನಿಲುಗಡೆಗೆ ಆಗಮಿಸುವುದು ಕಷ್ಟ. ಇದರಿಂದ ನಷ್ಟಉಂಟಾಗಲಿದೆ ಎಂಬ ಆತಂಕ ಗುತ್ತಿಗೆದಾರರಿಗಿದೆ.

Bengaluru: ದಾಸರಹಳ್ಳಿ ವ್ಯಾಪ್ತಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿ; ಹೆಚ್ಚುತ್ತಿವೆ ಅಪಘಾತ!

ಹಲವು ಬಾರಿ ಗುತ್ತಿಗೆದಾರರೊಂದಿಗೆ ಸಭೆ ಮಾಡಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ಆದರೂ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ. ಇನ್ನಷ್ಟುಟೆಂಡರ್‌ ನಿಯಮ ಸಡಿಲಗೊಳಿಸಿ ಒಂದು ವಾರದಲ್ಲಿ ಮತ್ತೆ ಟೆಂಡರ್‌ ಆಹ್ವಾನಿಸಲಾಗುವುದು ಅಂತ ಬಿಬಿಎಂಪಿ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮರಳಸಿದ್ದಪ್ಪ ತಿಳಿಸಿದ್ದಾರೆ.  

1 ಸಾವಿರ ಕಾರು, ಬೈಕ್‌ ಪಾರ್ಕಿಂಗ್‌

ಬಹುಮಹಡಿ ವಾಹನ ಕಟ್ಟಡದಲ್ಲಿ 1001 ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಒಟ್ಟು ಮೂರು ಮಹಡಿಯ ಕಟ್ಟಡ ಇದಾಗಿದ್ದು, ಮೊದಲ ಮಹಡಿಯಲ್ಲಿ 445 ದ್ವಿಚಕ್ರ ವಾಹನ ಹಾಗೂ 118 ಕಾರುಗಳ ನಿಲುಗಡೆಗೆ ಅವಕಾಶವಿದೆ. ಉಳಿದಂತೆ 2ನೇ ಮಹಡಿ ಮತ್ತು 3ನೇ ಮಹಡಿಯಲ್ಲಿ ತಲಾ 219 ಕಾರುಗಳನ್ನು ನಿಲ್ಲಿಸಬಹುದಾಗಿದೆ.

ಶುಲ್ಕದ ವಿವರ: ವಾಹನ ಶುಲ್ಕ

*ಬೈಕ್‌ .20-.150
*ಬೈಕ್‌ ಮಾಸಿಕ ಪಾಸ್‌ .2,500
*ಕಾರು .40-.450
*ಕಾರು ಮಾಸಿಕ ಪಾಸ್‌ .8 ಸಾವಿರ
ಬಹುಮಹಡಿ ಪಾರ್ಕಿಂಗ್‌ ಕಟ್ಟಡದ ವಿವರ
*.79 ಕೋಟಿ: ಅಂದಾಜು ವೆಚ್ಚ
*556 ಕಾರು, 445 ಬೈಕ್‌: ಪಾರ್ಕಿಂಗ್‌ ಸೌಲಭ್ಯ
*4: ಒಟ್ಟು ಲಿಫ್ಟ್‌ಗಳು
*30 (ಮಹಿಳೆ), 18 (ಪುರುಷ): ಶೌಚಾಲಯಗಳು
*2015: ಕಾಮಗಾರಿ ಆರಂಭವಾದ ವರ್ಷ

Follow Us:
Download App:
  • android
  • ios