ಬೆಂಗ್ಳೂರಿನ ಕೆರೆಗಳ ಮೇಲೆ ಕಣ್ಣಿಡಲು ಬರಲಿದೆ ಆ್ಯಪ್..!
ಬಿಬಿಎಂಪಿಯ ಅಧೀನದಲ್ಲಿ ಇರುವ 202 ಕೆರೆಗಳ ಪೈಕಿ 19 ಕೆರೆಗಳು ಅನುಪಯುಕ್ತಗೊಂಡಿದೆ. 183 ಕೆರೆಗಳನ್ನು ಬಿಬಿಎಂಪಿ ಕೆರೆ ವಿಭಾಗದಿಂದ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 114 ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. 42 ಕೆರೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ 27 ಕೆರೆಗಳನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.07): ರಾಜಧಾನಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕೆರೆಗಳು ನಿರ್ಜೀವಗೊಳ್ಳುತ್ತಿರುವುದನ್ನು ತಪ್ಪಿಸಿ ಸುಸ್ಥಿತಿಯನ್ನು ನಿರ್ವಹಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಿಬಿಎಂಪಿ ಕೆರೆ ವಿಭಾಗದಿಂದ ಲೇಕ್ ಮಾನಿಟರಿಂಗ್ ಆ್ಯಪ್ ಅಭಿವೃದ್ಧಿ ಪಡಿಸಲು ಮುಂದಾಗಿದೆ.
ಬಿಬಿಎಂಪಿಯ ಅಧೀನದಲ್ಲಿ ಇರುವ 202 ಕೆರೆಗಳ ಪೈಕಿ 19 ಕೆರೆಗಳು ಅನುಪಯುಕ್ತಗೊಂಡಿದೆ. 183 ಕೆರೆಗಳನ್ನು ಬಿಬಿಎಂಪಿ ಕೆರೆ ವಿಭಾಗದಿಂದ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 114 ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. 42 ಕೆರೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ 27 ಕೆರೆಗಳನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಬಿಎಂಟಿಸಿ ಬಸ್ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು: ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು
ಪ್ರಸಕ್ತ ವರ್ಷ ಪಾಲಿಕೆ 15 ಕೆರೆಗಳಲ್ಲಿ ಅಳವಡಿಸಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ವಹಣೆ ಸೇರಿದಂತೆ ಒಟ್ಟು 174 ಕೆರೆಗಳ ವಾರ್ಷಿಕ ನಿರ್ವಹಣೆಗೆ 35 ಕೋಟಿ ರು. ವೆಚ್ಚ ಮಾಡುವುದಕ್ಕೆ ನಿರ್ಧರಿಸಿದೆ. ಇದೇ ರೀತಿ ಪ್ರತಿ ವರ್ಷವೂ ಕೋಟ್ಯಾಂತರ ರು. ಕೆರೆಗಳ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತದೆ. ಈ ಬಗ್ಗೆ ನಿಗಾ ವಹಿಸುವುದಕ್ಕೆ 10 ಲಕ್ಷ ರು. ವೆಚ್ಚದಲ್ಲಿ ಲೇಕ್ ಮಾನಿಟರಿಂಗ್ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ.
ದೂರು ದಾಖಲಿಗೂ ಅವಕಾಶ: ಕೆರೆ ಸ್ವಚ್ಛತೆ, ಕೆರೆ ಅಂಗಳದಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರೂ ಈ ಆ್ಯಪ್ ಬಳಕೆ ಮಾಡಿಕೊಂಡು ದೂರು ನೀಡಬಹುದಾಗಿದೆ. ಈ ದೂರು ಸಂಬಂಧಪಟ್ಟ ವಲಯ ಅಥವಾ ವಿಭಾಗದ ಅಧಿಕಾರಿಗಳಿಗೆ ಹೋಗಲಿದೆ. ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ
ಕೆರೆಗಳ ಸಂಪೂರ್ಣ ಮಾಹಿತಿ: ಬಿಬಿಎಂಪಿಯ ವ್ಯಾಪ್ತಿಯ ಎಲ್ಲಾ ಕೆರೆಗಳ ಮಾಹಿತಿಯನ್ನು ಆ್ಯಪ್ನಲ್ಲಿ ದಾಖಲು ಮಾಡಲಾಗುತ್ತಿದೆ. ಕೆರೆ ನೀರಿನ ಪ್ರದೇಶ ಎಷ್ಟು ಎಕರೆ ಇದೆ. ಕೆರೆ ಅಂಗಳ ಎಷ್ಟು ವಿಸ್ತೀರ್ಣ ಇದೆ. ಕೆರೆ ಅಂಗಳದಲ್ಲಿ ಮಕ್ಕಳ ಆಟಿಕೆ ಇವೆಯೇ, ವ್ಯಾಯಾಮ ಉಪಕರಣ ಇವೆಯೇ ಎಂಬ ಮಾಹಿತಿ ಲಭ್ಯವಾಗಲಿದೆ.
ಆ್ಯಪ್ ಕೆಲಸ ಏನು?:
ಕೆರೆಗಳ ನಿರ್ವಹಣೆ ಮಾಡುವುದಕ್ಕೆ ಬಿಬಿಎಂಪಿ ಗುತ್ತಿಗೆ ನೀಡಲಿದೆ. ಗುತ್ತಿಗೆ ಪಡೆದವರು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆಯೋ ಇಲ್ಲವೋ ತಿಳಿಯುವುದಿಲ್ಲ. ಈ ಆ್ಯಪ್ ಆರಂಭಗೊಂಡರೆ, ಪ್ರತಿ ಕೆರೆಯಲ್ಲಿ ದಿನ ನಿತ್ಯ ಕೈಗೊಳ್ಳುವ ನಿರ್ವಹಣೆ ಕೆಲಸಗಳ ಫೋಟೋಗಳನ್ನು ಅಪ್ಲೋಡ್ ಮಾಡಬೇಕಾಗಲಿದೆ. ಇದರಿಂದ ಅಧಿಕಾರಿಗಳು ಪ್ರತಿ ದಿನ ಎಲ್ಲಾ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಅವಶ್ಯತೆ ಇಲ್ಲ. ಆನ್ ಲೈನ್ನಲ್ಲಿಯೇ ವೀಕ್ಷಣೆ ಮಾಡಬಹುದಾಗಿದೆ.
ಕೆರೆಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಬಿಬಿಎಂಪಿ ಲೇಕ್ ಮಾನಿಟರಿಂಗ್ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಶೀಘ್ರದಲ್ಲಿ ಬಳಕೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.