ಬೆಂಗಳೂರು(ನ.23): ಮೊದಲ ಹಂತದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಭಾಗಿಯಾದ ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸರಬರಾಜು ಮಾಡಿದರೆ ವಿವಿಧ ದೀರ್ಘ ಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮತ್ತು ವೃದ್ಧರಿಗೆ ಲಸಿಕೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.

ಕೊರೋನಾ ಸೋಂಕು ನಿರ್ವಹಣೆ ಮತ್ತು ನಿಯಂತ್ರಣ ಕಾರ್ಯಕ್ಕೆ ತೊಡಗಿಸಿಕೊಂಡ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು, ಲ್ಯಾಬ್‌ ಟೆಕ್ನೀಷಿಯನ್ಸ್‌, ಅಂಗನವಾಡಿ ಮತ್ತು ಆಶಾ ಕಾರ್ಯಕಾರ್ಯತೆಯರು ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ನೀಡುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಬಿಬಿಎಂಪಿ ಈಗಾಗಲೇ 95 ಸಾವಿರ ಕೋವಿಡ್‌ ವಾರಿಯರ್ಸ್‌ ಪಟ್ಟಿಸಿದ್ಧಪಡಿಸಿದೆ.

'ಭಾರತದಲ್ಲಿ ಕೊರೋನಾ ಲಸಿಕೆ ತೆಗೆದುಕೊಳ್ಳಲು ಜನ ಸಿದ್ಧರಿರುವುದೇ ಖುಷಿ ವಿಚಾರ'

ಒಂದು ವೇಳೆ ಕೇಂದ್ರ ಸರ್ಕಾರ ಬಿಬಿಎಂಪಿ ಸಲ್ಲಿಸಿದ ಲಸಿಕೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸರಬರಾಜು ಮಾಡಿದರೆ, ಹೆಚ್ಚುವರಿ ಲಸಿಕೆಯನ್ನು ದೀರ್ಘಕಾಲದಿಂದ ಆರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ವಯೋವೃದ್ಧರಿಗೆ ನೀಡುವುದಕ್ಕೆ ತೀರ್ಮಾನಿಸಿದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡದಿದ್ದರೆ, ಎರಡನೇ ಹಂತದಲ್ಲಿ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮುದ್ರಣ ಮತ್ತು ದೃಶ್ಯ ಮಾಧ್ಯಮದ ವರದಿಗಾರರು ಕೊರೋನಾ ವಾರಿಯರ್ಸ್‌ ಆಗಿದ್ದು, ಅವರಿಗೂ ಲಸಿಕೆ ನೀಡಲು ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬಿಬಿಎಂಪಿ ನಗರದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕಾರ್ಯಕ್ಕೆ ಶ್ರಮಿಸಿದವರ ಅವರ ಹೆಸರು, ಹುದ್ದೆ, ವಿಳಾಸ, ವಯಸ್ಸು, ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಒಳಗೊಂಡ ವಿವರವಾದ 95 ಸಾವಿರ ಜನರ ಪಟ್ಟಿಯನ್ನು ಈಗಾಗಲೇ ಬಿಬಿಎಂಪಿ ಸಿದ್ಧಪಡಿಸಿದೆ. ಆದರೀಗ ಕೇಂದ್ರ ಸರ್ಕಾರ ವಾರಿಯರ್ಸ್‌ ಪಟ್ಟಿಸಲ್ಲಿಸುವ ಕೊನೆಯ ದಿನಾಂಕವನ್ನು ನ.21ರಿಂದ ನ.30ಕ್ಕೆ ವಿಸ್ತರಣೆ ಮಾಡಿದೆ. ಹಾಗಾಗಿ, ಮತ್ತೊಂದು ಬಾರಿ ನಗರದ ಎಲ್ಲ ಖಾಸಗಿ ಮತ್ತು ಸರ್ಕಾರಿ ಆರೋಗ್ಯ ಕೇಂದ್ರದ ಮುಖ್ಯಸ್ಥರಿಗೆ ಪಟ್ಟಿಯಿಂದ ಹೊರಗೆ ಉಳಿದ ಕೊರೋನಾ ವಾರಿಯರ್ಸ್‌ ಹೆಸರುಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇನ್ನಷ್ಟು ಕೊರೋನಾ ವಾರಿಯರ್ಸ್‌ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಒಂದು ಲಕ್ಷ ದಾಟುವ ನಿರೀಕ್ಷೆ ಇದೆ.