ಬೆಂಗಳೂರು(ನ.22):  ಅಮೆರಿಕದಲ್ಲಿ ಶೇ.60 ಜನರು ತಾವು ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಭಾರತದಲ್ಲಿ ಲಸಿಕೆ ತೆಗೆದುಕೊಳ್ಳಲು ಜನರು ಹಿಂಜರಿಯುತ್ತಿಲ್ಲ. ಇದು ಆಶಾದಾಯಕ ಬೆಳವಣಿಗೆ ಎಂದು ಮೆಲಿಂದಾ ಗೇಟ್ಸ್‌ ಪ್ರತಿಷ್ಠಾನದ ಹಿರಿಯ ಸಲಹೆಗಾರ ಹರೀಶ್‌ ಅಯ್ಯರ್‌ ಹೇಳಿದ್ದಾರೆ.

ಅವರು ಬೆಂಗಳೂರು ಟೆಕ್‌ ಶೃಂಗದಲ್ಲಿ ‘ಲಸಿಕೆಗಳು: ಸಂಶೋಧನೆ ಮತ್ತು ಅಭಿವೃದ್ಧಿ’ ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಜನರನ್ನು ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸುವಲ್ಲಿ ನಾಯಕತ್ವದ ಪಾತ್ರ ಹಿರಿದು ಎಂದು ಅಭಿಪ್ರಾಯಪಟ್ಟರು.

ಇದೀಗ ಲಸಿಕೆ ಬಂದರೂ ಕೂಡ ಅದು ತುರ್ತು ಬಳಕೆಗೆ ಮಾತ್ರ ಲಭ್ಯವಿರುವ ಸಾಧ್ಯತೆಯೇ ಹೆಚ್ಚು. ಲಸಿಕೆಯ ಆಯುಷ್ಯವನ್ನು ಹೆಚ್ಚಿಸುವ ಸವಾಲು ಕೂಡ ವೈದ್ಯಕೀಯ ವಿಜ್ಞಾನದ ಮುಂದಿದೆ. ಲಸಿಕೆಯ ಆಯುಷ್ಯ ಹೆಚ್ಚಿದ್ದಷ್ಟೂ ಒಳ್ಳೆಯದು. ಲಸಿಕೆಯ ಸಂಗ್ರಹ, ಸಾಗಣೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅದನ್ನು ನೀಡುವ ಕಠಿಣ ಸವಾಲಿದೆ ಎಂದರು.

ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ಬೇಡ: ಸದ್ಗುರು

‘ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಕಂಡುಹಿಡಿಯಬೇಕಾದರೆ ಹಲವು ವರ್ಷಗಳು ಬೇಕಾಗುತ್ತವೆ. ಮಾನವನ ಜೈವಿಕ ವ್ಯವಸ್ಥೆಯ ಮೇಲೆ ಲಸಿಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ನಾನಾ ಹಂತದ ಪ್ರಯೋಗ ನಡೆಸಬೇಕಾಗುತ್ತದೆ. ಆದರೆ ಕೋವಿಡ್‌-19ರ ಲಸಿಕೆಯ ಪ್ರಯೋಗಗಳು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಸೋಂಕಿಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಸಂಶೋಧನಾ ಸಂಸ್ಥೆಗಳಿಗೆ ಔಷಧ ತಯಾರಿಕಾ ಸಂಸ್ಥೆಗಳು ಸಹಕಾರ ನೀಡಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್‌ ರಾಘವನ್‌ ವರದರಾಜನ್‌ ತಿಳಿಸಿದ್ದಾರೆ.

‘ಲಸಿಕೆಯನ್ನು ಸಂಶೋಧಿಸುವ ಸಂದರ್ಭದಲ್ಲಿ ದೀರ್ಘಕಾಲೀನ ಸುರಕ್ಷತೆ, ಶ್ವಾಸಕೋಶದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ, ದೀರ್ಘಕಾಲೀನ ಪ್ರತಿರೋಧ ಶಕ್ತಿ, ಅನ್ಯ ಸೋಂಕಿನಿಂದ ರಕ್ಷಣೆ, ಸಾಮೂಹಿಕ ಜೀವ ನಿರೋಧಕತೆ, ವೈರಸ್‌ನ ವಿವಿಧ ತಳಿಗಳ ಮೇಲೆ ಲಸಿಕೆಯ ಪ್ರಭಾವ ಮುಂತಾದವುಗಳನ್ನು ಪರಿಗಣಿಸಬೇಕಾಗುತ್ತದೆ’ ಎಂದು ಎಮೋರಿ ವ್ಯಾಕ್ಸಿನ್‌ ಸೆಂಟರ್‌ನ ಪ್ರೊಫೆಸರ್‌ ಡಾ.ರಾಮರಾವ್‌ ಹೇಳಿದರು.