Asianet Suvarna News Asianet Suvarna News

Omicron Threat: ಕೊರೋನಾ ಲಸಿಕೆ ಪಡೆಯದವರಿಗೆ ಮನೆ ಮನೆ ಹುಡುಕಾಟ..!

*   ಒಮಿಕ್ರೋನ್‌ ಪತ್ತೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಹೈ ಆಲರ್ಟ್‌
*  ಮನೆಗೇ ಹೋಗಿ ಲಸಿಕೆ ಪಡೆಯವರಿಗೆ ಬಿಬಿಎಂಪಿಯಿಂದ ಲಸಿಕೆ
*  ಮನೆ ಬಾಗಿಲಲ್ಲೇ ಲಸಿಕೆ ನೀಡಲು 430ಕ್ಕೂ ಹೆಚ್ಚು ತಂಡ ನಿಯೋಜನೆ
 

BBMP Search for Those Who Not Get the Covid Caccine in Bengaluru grg
Author
Bengaluru, First Published Dec 8, 2021, 6:15 AM IST

ಬೆಂಗಳೂರು(ಡಿ.08):  ಕೋವಿಡ್‌(Covid19) ವೈರಸ್‌ನ ರೂಪಾಂತರಿ ಒಮಿಕ್ರೋನ್‌(Omicron)  ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ನಗರದಲ್ಲಿ ಲಸಿಕೆ(Vaccine) ಪಡೆಯುವವರ ಸಂಖ್ಯೆ ದ್ವಿಗುಣಗೊಂಡಿದೆ. ಬಿಬಿಎಂಪಿ(BBMP) ಕೂಡ ಸೋಂಕು ನಿಯಂತ್ರಣದ ಉದ್ದೇಶದಿಂದ ಆರೋಗ್ಯ ಸಿಬ್ಬಂದಿ ತಂಡದ ಮೂಲಕ ಜನರ ಮನೆ ಬಾಗಿಲಲ್ಲೇ ಲಸಿಕೆ ನೀಡಲಾರಂಭಿಸಿದೆ.

ನಗರದಲ್ಲಿ ಎರಡು ಒಮಿಕ್ರೋನ್‌ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಈ ಹಿಂದೆ ಲಸಿಕೆ ಪಡೆಯದವರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಲಸಿಕಾ ಶಿಬಿರಗಳು, ಸರ್ಕಾರಿ ಆಸ್ಪತ್ರೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇದುವರೆಗೆ ಒಂದೂ ಡೋಸ್‌ ಲಸಿಕೆ ಪಡೆಯದವರು ಹಾಗೂ ಅವಧಿ ಮುಗಿದರೂ ಎರಡನೇ ಡೋಸ್‌ ಲಸಿಕೆ ಪಡೆಯದವರು ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ.

Covid 19 Vaccine: ಒಮಿಕ್ರೋನ್‌ ಭೀತಿ: 3ನೇ ಡೋಸ್‌ ನೀಡಲು ಸರ್ಕಾರಕ್ಕೆ IMA ಆಗ್ರಹ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 9 ದಿನಗಳಲ್ಲಿ ಬರೋಬ್ಬರಿ 6,15,012 ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಕೋವಿನ್‌ ಡ್ಯಾಶ್‌ಬೋರ್ಡ್‌ ಮತ್ತು ಬಿಬಿಎಂಪಿ ಮಾಹಿತಿ ಪ್ರಕಾರ ಒಮಿಕ್ರೋನ್‌ ಪತ್ತೆಯಾದ ಬಳಿಕ ಡಿ.2ರಂದು 61,823, ಡಿ.3ರಂದು 64,458, ಡಿ.4ರಂದು 89,959, ಡಿ.5ರಂದು(ಭಾನುವಾರ) 42,734, ಡಿ.6ಕ್ಕೆ 81,496 ಮತ್ತು ಡಿ.7ರಂದು 72,938 ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟಸುಮಾರು 91.8 ಲಕ್ಷ ಮಂದಿ ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ. ಈ ಪೈಕಿ 82,14,066 ಮೊದಲ ಡೋಸ್‌, 63,05,263 ದ್ವಿತೀಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಮೊದಲ ಡೋಸ್‌ ಪಡೆಯಲು ಬಾಕಿ ಇರುವವ ಸಂಖ್ಯೆ 7.66 ಲಕ್ಷ ಮಂದಿ. ಮನೆ ಬಾಗಿಲಿಗೆ ತೆರಳಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ಪಾಲಿಕೆಯು 430ಕ್ಕೂ ಹೆಚ್ಚು ತಂಡಗಳನ್ನು ನಿಯೋಜನೆ ಮಾಡಿದೆ.

ಒಮಿಕ್ರೋನ್‌ ಪತ್ತೆಯ ನಂತರ ಪಾಲಿಕೆಯು ಲಸಿಕಾ ಪ್ರಮಾಣ ಹೆಚ್ಚಿಸಿದ್ದು, ಲಸಿಕೆ ಹಾಕಿಸಿಕೊಳ್ಳದವರ ಮನೆ ಮನೆ ಹುಡುಕಿ ಲಸಿಕೆ ನೀಡುತ್ತಿದೆ. ಮಾಲ್‌ಗಳು, ಮಾರುಕಟ್ಟೆಗಳು, ಚಿತ್ರಮಂದಿರಗಳು, ಅಂಗಡಿ ಮುಗ್ಗಟ್ಟುಗಳು, ಕೊಳಗೇರಿಗಳಲ್ಲಿ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿದೆ. ಹೀಗಾಗಿ ಕಳೆದೊಂದು ವಾರದಿಂದ ಲಸಿಕಾಕರಣಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

539 ಕೇಂದ್ರಗಳಲ್ಲಿ ಲಸಿಕೆ:

ಪಾಲಿಕೆಯ ಎಂಟು ವಲಯಗಳಲ್ಲಿ 366 ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳು ಸೇರಿದಂತೆ 539 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಸಿಂಗಸಂದ್ರ 986, ಅಮೃತ್ತಹಳ್ಳಿ 555, ಬೇಗೂರು 702, ಮಲ್ಲತ್ತಹಳ್ಳಿ 690, ಶ್ರೀರಾಂಪುರ 523, ಕರ್ನಾಟಕ ಸರ್ಕಾರಿ ಶಾಲೆ 505, ಯಶವಂತಪುರ 500, ಅಗ ಆಗರ 632 ಡೋಸ್‌ ಲಸಿಕೆಯನ್ನು ಮಂಗಳವಾರ ಒಂದೇ ದಿನದಲ್ಲಿ ನೀಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.

ಇಂದು ಒಂದೇ ದಿನ 4.5 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬುಧವಾರ (ಡಿ.8) ಲಸಿಕಾ ಮೇಳ ನಡೆಯಲಿದೆ. ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚು ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ(Department of Health) ಸಕಲ ಸಿದ್ಧತೆ ಮಾಡಿಕೊಂಡಿದ್ದು ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಲಸಿಕೆ ನೀಡಲಿದೆ. ಪ್ರಸ್ತುತ ನಿತ್ಯ ಸರಾಸರಿ 65 ಸಾವಿರಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಬುಧವಾರ 4.5 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದುವರೆಗೂ ಒಂದೂ ಡೋಸ್‌ ಲಸಿಕೆ ಪಡೆಯದವರು, ಮೊದಲ ಡೋಸ್‌ ಲಸಿಕೆ ಪಡೆದು 83 ದಿನ ಪೂರ್ಣಗೊಂಡವರು(ಕೋವ್ಯಾಕ್ಸಿನ್‌ 28 ದಿನ) ಸಮೀಪದ ಲಸಿಕಾ ಶಿಬಿರಕ್ಕೆ ಆಗಮಿಸಿ ಲಸಿಕೆ ಪಡೆಯಬೇಕು ಎಂದು ಬಿಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ.ತ್ರಿಲೋಕಚಂದ್ರ ಮನವಿ ಮಾಡಿದ್ದಾರೆ.

ಸೋಂಕು ಕೊಂಚ ಏರಿಕೆ: 215 ಮಂದಿಗೆ ವೈರಸ್‌

ನಗರದಲ್ಲಿ(Bengaluru)  ಕೊರೋನಾ(Coronavirus) ಸೋಂಕಿನ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ಮಂಗಳವಾರ ಹೊಸದಾಗಿ 215 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರು ಮೃತಪಟ್ಟಿದ್ದಾರೆ(Death).

ಒಟ್ಟು ಸೋಂಕಿತರ ಸಂಖ್ಯೆ 12,57,875ಕ್ಕೆ ಏರಿಕೆ ಆಗಿದೆ. ಮೂವರ ಸಾವಿನಿಂದ ಒಟ್ಟು ಸಾವಿನ ಸಂಖ್ಯೆ 16,352 ತಲುಪಿದೆ. 97 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,36,229ಕ್ಕೆ ಏರಿದೆ. ಸಕ್ರಿಯವಾಗಿರುವ 5,294 ಕೋವಿಡ್‌ ರೋಗಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Omicron variant : ಎಚ್ಚರ ತಪ್ಪಿದರೆ 3 ನೇ ಅಲೆ, ಅಂಕಿ ಅಂಶ ನೋಡಿ!

ಕಂಟೈನ್ಮೆಂಟ್‌ ವಲಯ 80ಕ್ಕೆ ಏರಿಕೆ:

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿನ ಒಟ್ಟು ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿಯಲ್ಲಿ 23, ದಕ್ಷಿಣ ವಲಯ 10, ಪೂರ್ವ 15, ಪಶ್ಚಿಮ 5, ಯಲಹಂಕ 9, ಮಹದೇವಪುರ 14, ಆರ್‌ಆರ್‌ ನಗರ 3, ದಾಸರಹಳ್ಳಿಯಲ್ಲಿ 1 ಕಂಟೈನ್ಮೆಂಟ್‌ ವಲಯಗಳು ಇವೆ.

ಬೆಳ್ಳಂದೂರಲ್ಲಿ ನಿತ್ಯ 6 ಕೇಸ್‌:

ಕಳೆದ 10 ದಿನದಲ್ಲಿ ಬೆಳ್ಳಂದೂರು ವಾರ್ಡ್‌ ವ್ಯಾಪ್ತಿಯಲ್ಲಿ ಅಧಿಕ 6 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಹಗದೂರಲ್ಲಿ 5, ದೊಡ್ಡನೆಕ್ಕುಂದಿ, ವಸಂತಪುರ ಮತ್ತು ಬೇಗೂರಿನಲ್ಲಿ ತಲಾ 4, ಎಚ್‌ಎಸ್‌ಆರ್‌ ಬಡಾವಣೆ, ಹೊರಮಾವು, ವಿಜ್ಞಾನ ನಗರ, ಹೂಡಿ, ಹೊಸ ತಿಪ್ಪಸಂದ್ರಗಳಲ್ಲಿ ತಲಾ 3 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಆ ಭಾಗದ ಜನ ಆತಂಕದಲ್ಲಿದ್ದಾರೆ. ಅಂತೆಯೇ ಕೆಲವು ದಿನಗಳಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಈಜಿಪುರ, ಹೊಂಬೇಗೌಡ ನಗರ, ಸುಂಕೇನಹಳ್ಳಿ, ಆಜಾದ್‌ ನಗರ, ಕೆ.ಆರ್‌.ಮಾರುಕಟ್ಟೆ, ಛಲವಾದಿಪಾಳ್ಯ, ರಾಯಪುರ, ಜಗಜೀವನ್‌ರಾಮ್‌ ನಗರ ಮತ್ತು ಪಾದರಾಯನಪುರ ವಾರ್ಡ್‌ ವ್ಯಾಪ್ತಿಯ ಜನರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎಂದು ಬಿಬಿಎಂಪಿಯ ಕೊರೋನಾ ವರದಿ ತಿಳಿಸಿದೆ.
 

Follow Us:
Download App:
  • android
  • ios