ಬಿಬಿಎಂಪಿಯ ವಾರ್ಡ್ ಮೀಸಲಾತಿಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆ
ರಾಜ್ಯ ಸರ್ಕಾರ ಅಗಸ್ಟ್ 3ರಂದು ಪ್ರಕಟಿಸಿದ್ದ ಬಿಬಿಎಂಪಿಯ ಮೀಸಲಾತಿ ಕರಡು ಪಟ್ಟಿಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆಯಾಗಿದೆ.
ಬೆಂಗಳೂರು (ಆ.10): ಬಿಬಿಎಂಪಿಯ ವಾರ್ಡ್ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಗಡುವು ಬುಧವಾರಕ್ಕೆ ಅಂತ್ಯಗೊಳ್ಳಲಿದ್ದು, ಈವರೆಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ರಾಜ್ಯ ಸರ್ಕಾರ ಅಗಸ್ಟ್ 3ರಂದು ಪ್ರಕಟಿಸಿದ್ದ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಬುಧವಾರಕ್ಕೆ ಪೂರ್ಣಗೊಳ್ಳಲಿದೆ. ಮೂಲಗಳ ಪ್ರಕಾರ ಈವರೆಗೆ 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ. ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಗುರುವಾರದಿಂದ ಪರಿಶೀಲನಾ ಕಾರ್ಯ ಮಾಡಲಾಗುತ್ತದೆ. ಅಗತ್ಯವಿದ್ದರೆ, ಆಕ್ಷೇಪಣೆ ಸಮರ್ಥನೀಯವಾಗಿದ್ದರೆ ಮೀಸಲಾತಿಯನ್ನು ಬದಲಿಸಲಾಗುತ್ತದೆ. ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಅದಾದ ನಂತರ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜತೆಗೆ ಚುನಾವಣಾ ಆಯೋಗಕ್ಕೆ ಅಂತಿಮ ಮೀಸಲಾತಿ ಪಟ್ಟಿಸಲ್ಲಿಸಲಾಗುತ್ತದೆ. ಸುಪ್ರೀಂಕೋರ್ಚ್‌ನಲ್ಲಿ ಆ.26ರಂದು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಬರಲಿದೆ. ಅಷ್ಟರೊಳಗೆ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಅಂತಿಮ ಪಟ್ಟಿಸಲ್ಲಿಸಿ ಮುಂದಿನ ಪ್ರಕ್ರಿಯೆಗೆ ಅನುಕೂಲವಾಗುವಂತೆ ಮಾಡಬೇಕಿದೆ.
ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿಲ್ಲ: ಮೀಸಲಾತಿ ಕರಡು ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೆ ಪ್ರತಿಭಟನೆ ಮಾಡಿದ್ದರು. ಅದರ ಜತೆಗೆ ಹೈಕೋರ್ಚ್‌ನಲ್ಲೂ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ನಗರಾಭಿವೃದ್ಧಿ ಇಲಾಖೆಗೆ ಮೀಸಲಾತಿಯಲ್ಲಾಗಿರುವ ಲೋಪಗಳನ್ನು ಮುಂದಿಟ್ಟುಕೊಂಡು ಆಕ್ಷೇಪಣೆಯನ್ನೂ ಸಲ್ಲಿಸಲಾಗಿದೆ.
ನಿಯಮ ಉಲ್ಲಂಘನೆ: ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡನ್ನು ಸಾಮಾನ್ಯ ವರ್ಗಕ್ಕೆ ನೀಡದೇ ಎಲ್ಲ ವಾರ್ಡ್‌ಗಳನ್ನೂ ಮೀಸಲಾತಿ ಹಂಚಿಕೆ ಮಾಡಿರುವುದು ಸಂವಿಧಾನದ 234ಟಿ ವಿಧಿಯ 1ರಿಂದ 3ನೇ ಉಪವಿಧಿವರೆಗೆ ಉಲ್ಲಂಘನೆಯಾಗಿದೆ. ಪದ್ಮನಾಭ ನಗರ 5, ಬೆಂಗಳೂರು ದಕ್ಷಿಣ-5, ಚಿಕ್ಕಪೇಟೆ-4, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ-5 ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಮರು ಪರಿಷ್ಕರಿಸುವಂತೆ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಅಕ್ಕ-ಪಕ್ಕದ ವಾರ್ಡ್‌ಗಳತ್ತ ಮಾಜಿ ಕಾರ್ಪೊರೇಟರ್‌ಗಳ ಚಿತ್ತ:
ರಾಜ್ಯ ಸರ್ಕಾರ ಪ್ರಕಟಿಸಿದ ಬಿಬಿಎಂಪಿ ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಂಡ ಪಾಲಿಕೆ ಮಾಜಿ ಸದಸ್ಯರು ಇದೀಗ ಅಕ್ಕ-ಪಕ್ಕದಲ್ಲಿ ತಮಗೆ ಅನುಕೂಲಕರವಾದ ಕ್ಷೇತ್ರಗಳ ಹುಡುಕಾಟ ಆರಂಭಿಸಿದ್ದಾರೆ.
ವಾರ್ಡ್ ಮೀಸಲಾತಿ ಕರಡು ಪಟ್ಟಿಯಿಂದಾಗಿ ಕಾಂಗ್ರೆಸ್ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಮಾಜಿ ಸದಸ್ಯರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿವೆ. ಮೀಸಲಾತಿಯಿಂದಾಗಿ ಘಟಾನುಘಟಿ ಅಭ್ಯರ್ಥಿಗಳಿಗೆ ಈ ಹಿಂದೆ ಸ್ಪರ್ಧಿಸಿ ಗೆಲವು ಸಾಧಿಸಿದ್ದ ವಾರ್ಡ್‌ಗಳಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ. ಹೀಗಾಗಿ ಅಕ್ಕಪಕ್ಕದ ಅಥವಾ ತಮಗೆ ಅನುಕೂಲವಾಗುವ ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು: ಬಿಬಿಎಂಪಿ ಮೀಸಲು ವಿರುದ್ಧ ಕಾಂಗ್ರೆಸ್ ಹೋರಾಟ
ರಾಜ್ಯ ಸರ್ಕಾರ ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿದೆ. ಒಬಿಸಿ, ಎಸ್‌ಸಿ/ಎಸ್ಟಿಸಮುದಾಯಗಳಿಗೆ ಶೇ. 50 ಮೀಸಲಾತಿ ಜತೆಗೆ ಶೇ. 50 ವಾರ್ಡ್‌ಗಳಲ್ಲಿ ಮಹಿಳಾ ಮೀಸಲು ನಿಗದಿ ಮಾಡಿದೆ. ಹೀಗಾಗಿ ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸಲು ಆಗದಂತಹ ಸ್ಥಿತಿ ಎದುರಿಸುತ್ತಿದ್ದಾರೆ.
ಇದರಿಂದಾಗಿ ಮಾಜಿ ಸದಸ್ಯರು ಈಗಾಗಲೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇನ್ನು ಕೆಲವರು ತಮ್ಮ ವಾರ್ಡ್‌ಗಳು ಮಹಿಳಾ ಮೀಸಲಾದ ಹಿನ್ನೆಲೆಯಲ್ಲಿ ಪತ್ನಿ ಅಥವಾ ಸಂಬಂಧಿಕರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಬಿಬಿಎಂಪಿ ಚುನಾವಣೆ: 243 ವಾರ್ಡ್ ಮೀಸಲಾತಿ ಕರಡುಪಟ್ಟಿಗೆ ಹೆಚ್ಚಿದ ವಿರೋಧ
ಅಸಮಾಧಾನಿತರಿಗೆ ಗಾಳ: ಮೀಸಲಾತಿಯಿಂದಾಗಿ ಹಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಅದನ್ನು ನೀಗಿಸಲು ಪಕ್ಷ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಅದಕ್ಕಾಗಿಯೇ ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಅಸಮಧಾನಗೊಂಡಿರುವವರನ್ನು ಸಂಪರ್ಕಿಸುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.