Asianet Suvarna News Asianet Suvarna News

ವಾರ್ಡ್‌ಗೊಂದೇ ಗಣೇಶ ನಿರ್ಬಂಧ ಬೆಂಗ್ಳೂರಲ್ಲಿ ರದ್ದು: ಅದ್ಧೂರಿ ಗಣೇಶೋತ್ಸವಕ್ಕೆ ಅಸ್ತು

ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ. ಅದ್ಧೂರಿಯಾಗಿ ಆಚರಿಸಬಹುದಾಗಿದೆ. ಆದರೆ, ಗಣೇಶ ಪ್ರತಿಷ್ಠಾಪನೆಗೆ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದ ತುಷಾರ್‌ ಗಿರಿನಾಥ್‌

BBMP Permission for Grand ganeshotsav in Bengaluru grg
Author
Bengaluru, First Published Aug 21, 2022, 6:45 AM IST

ಬೆಂಗಳೂರು(ಆ.21):  ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ವಾರ್ಡ್‌ಗೆ ಒಂದೇ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿದ್ದ ಬಿಬಿಎಂಪಿ, ವಾರ್ಡ್‌ಗೆ ಒಂದರ ಮಿತಿ ಸೇರಿದಂತೆ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿ, ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ. ಶನಿವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಡಳಿತ, ಬೆಸ್ಕಾಂ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್‌ ಗಿರಿನಾಥ್‌, ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ. ಅದ್ಧೂರಿಯಾಗಿ ಆಚರಿಸಬಹುದಾಗಿದೆ. ಆದರೆ, ಗಣೇಶ ಪ್ರತಿಷ್ಠಾಪನೆಗೆ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.  ಈ ವರ್ಷ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂದು ‘ಕನ್ನಡಪ್ರಭ’ ಆ.19ರಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಣ್ಣಿನ ಗಣಪನಾ? ಪಿಓಪಿ ಗಣೇಶನಾ? ಗೊಂದಲದಲ್ಲಿ ಭಕ್ತರು!

63 ಏಕಗವಾಕ್ಷಿ ಕೇಂದ್ರ:

ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಪಾಲಿಕೆಯ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದು. ಬಿಬಿಎಂಪಿ, ಪೊಲೀಸ್‌, ಬೆಸ್ಕಾಂ ಮತ್ತು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಏಕಗವಾಕ್ಷಿ ಕೇಂದ್ರದಲ್ಲಿ ಅನುಮತಿ ನೀಡಲಿದ್ದಾರೆ. ಅನುಮತಿ ನೀಡುವ ವೇಳೆ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಪಾಲನೆ ಮಾಡಬೇಕಾದ ನಿಯಮಾವಳಿ ಹಾಗೂ ವಿಸರ್ಜನಾ ಸ್ಥಳದ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ವಿಸರ್ಜನೆಗೆ 4 ಕೆರೆ:

ಗಣೇಶ ವಿಸರ್ಜನೆಗೆ ನಗರದ ಸ್ಯಾಂಕಿ ಕೆರೆ, ಹಲಸೂರು, ಯಡಿಯೂರು ಮತ್ತು ಹೆಬ್ಬಾಳ ಕೆರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ಜತೆಗೆ ಸಣ್ಣ ಕೆರೆ ಮತ್ತು ಕಲ್ಯಾಣಿಗಳಲ್ಲಿಯೂ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುವುದು. ಕೆರೆಗಳು ಹಾಗೂ ಕಲ್ಯಾಣಿಗಳ ಸುತ್ತಲೂ ಬ್ಯಾರಿಕೇಡ್‌ ಅಳವಡಿಕೆ, ತಲಾ 10 ಮಂದಿ ನುರಿತ ಈಜುಗಾರರ ನಿಯೋಜನೆ, ಅಗತ್ಯ ಸಹಾಯಕ ಸಿಬ್ಬಂದಿ ನೇಮಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಚಿಕ್ಕ ಮೂರ್ತಿಗಳ ವಿಸರ್ಜನೆಗೆ ಆಯಾ ವಲಯಗಳ ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಟ್ಯಾಂಕ್‌ ವ್ಯವಸ್ಥೆ. ವಾರ್ಡ್‌ವಾರು ಸಂಚಾರಿ ವಿಸರ್ಜನಾ ಘಟಕ (ಮೊಬೈಲ… ಟ್ಯಾಂಕ್‌) ಸ್ಥಾಪಿಸಲು ಸೂಚಿಸಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಮತ್ತೆ ಈದ್ಗಾ ವಿವಾದ: ಗಣೇಶೋತ್ಸವಕ್ಕೆ ಅವಕಾಶ ಕೋರಿ ಮನವಿ

ಪಿಒಪಿ ನಿಷೇಧ:

ರಾಸಾಯನಿಕ ಬಣ್ಣಗಳು, ಥರ್ಮಕೊಲ… ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರಿಸರಕ್ಕೆ ಮಾರಕವಾದ ವಸ್ತುಗಳಿಂದ ಗಣೇಶ ತಯಾರಿಸುವ, ಮಾರಾಟಗಾರರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಂಟು ವಲಯಗಳ ಜಂಟಿ ಆಯುಕ್ತರ ನೇತೃತ್ವದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು

ಫ್ಲೆಕ್ಸ್‌, ಬ್ಯಾನರ್‌ ನಿಷೇಧ:

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವುದಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಕುರಿತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮತ್ತು ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು (ಹೂವು, ಬಾಳೆಯ ಕಂದು, ತಳಿರು ತೋರಣ, ಇತರೆ) ನಿಗದಿತ ಕಂಟೈನರ್‌ಗಳ ಮೂಲಕ ಆಗಿಂದಾಗ್ಗೆ ತೆರವುಗೊಳಿಸಲು ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನ ಸಜ್ಜುಗೊಳಿಸಬೇಕು. ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳು, ಕ್ರೇನ್‌ಗಳ ವ್ಯವಸ್ಥೆಗಳನ್ನು ಕೂಡ ಸಿದ್ಧಪಡಿಸಿರಬೇಕು. ಹೆಚ್ಚಿನ ಜನರು ಸೇರದಂತೆ ಪೊಲೀಸ್‌ ಬಂದೋಬÓ್ತ… ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
 

Follow Us:
Download App:
  • android
  • ios