ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿರುವ ಏರ್ ಶೋ ಹಿನ್ನೆಲೆಯಲ್ಲಿ, ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಯಲಹಂಕದ 14 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಹದ್ದುಗಳು ಮತ್ತು ಮಾಂಸಾಹಾರಿ ಪಕ್ಷಿಗಳ ಹಾರಾಟವು ಯುದ್ಧ ವಿಮಾನಗಳಿಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಲಾಗಿದೆ.
ಬೆಂಗಳೂರು (ಜ.18): ಇಡೀ ದೇಶದಲ್ಲಿ ಗರಿಷ್ಠ ಮಾಂಸಾಹಾರಿಗಳಿರುವ ಜನರ ಸಂಖ್ಯೆ ಬಂದಾಗ ಕರ್ನಾಟಕ ಕೂಡ ಅದರಲ್ಲಿ ಸ್ಥಾನ ಪಡೆಯುತ್ತದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಈ ಏರಿಯಾದ ಜನರು ಮುಂದಿನ 26 ದಿನಗಳ ಕಾಲ ಯಾವುದೇ ರೀತಿಯ ಮಾಂಸಾಹಾರ ಸೇವಿಸುವಂತಿಲ್ಲ. ಈ ಬಗ್ಗೆ ಬಿಬಿಎಂಪಿಯೇ ಆದೇಶ ಹೊರಡಿಸಿದೆ. ಇದೇ ಜನವರಿ 23 ರಿಂದ ಫೆಬ್ರವರಿ 17ರವರೆಗೆ ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದ್ದು, ಹಾಗೇನಾದರೂ ನಿಯಮ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಏರ್ ಶೋ ಹಿನ್ನಲೆಯಲ್ಲಿ ನಿರ್ಧಾರ: ಬೆಂಗಳೂರಿನ ಯಲಹಂಕದಲ್ಲಿ ಫೆಬ್ರವರಿ 10 ರಿಂದ 14ರವರಗೆ 15ನೇ ಆವೃತ್ತಿಯ ಏರ್‌ಶೋ ನಡೆಯಲಿದೆ. ಈ ಕಾರಣಕ್ಕಾಗಿ ಏರ್‌ಶೋ ನಡೆಯುವ ಯಲಹಂಕದ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಸೂಚನೆ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿವಿಧ ದೇಶಗಳ ಯುದ್ಧವಿಮಾನಗಳು ಯಲಹಂಕ ವಾಯುನೆಲೆಗೆ ಬರಲು ಆರಂಭವಾಗಲಿದೆ. ಈ ಕಾರಣಕ್ಕಾಗಿ 26 ದಿನಗಳ ಕಾಲ ಈ ವಲಯದಲ್ಲಿ ಮಾಂಸ ಮಾರಾಟ ಇರೋದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಮಾಂಸ ಮಾರಾಟ ಮಾಡುವ ಪ್ರದೇಶಗಳಲ್ಲಿ ಹದ್ದುಗಳು ಹಾಗೂ ವಿವಿಧ ಮಾಂಸಾಹಾರಿ ಪಕ್ಷಿಗಳ ಹಾರಾಟ ಹೆಚ್ಚಿರುತ್ತದೆ. ಇದು ಯುದ್ಧವಿಮಾನಗಳ ಹಾರಾಟಕ್ಕೆ ಸಮಸ್ಯೆ ನೀಡಬಹುದು ಎನ್ನುವ ಕಾರಣಕ್ಕೆ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗುತ್ತದೆ.
ಯಲಹಂಕ ವಲಯದ ಮಾಂಸ ಮಾರಾಟ ಉದ್ದಿಮೆಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸಿದಲ್ಲಿ, ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಲಹಂಕ ವಲಯ ಜಂಟಿ ಆಯುಕ್ತರಿಂದ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಈ ಭಾಗದಲ್ಲಿ ಕ್ರೇನ್ ಬಳಸಿ ಕಟ್ಟಡ ನಿರ್ಮಾಣ ನಿಷೇಧಿಸಿದ ಬಿಬಿಎಂಪಿ!
ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಈ ಏರ್‌ಶೋ ನಡೆಯಲಿದೆ. ಇದೇ ವೇಳೆ “ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್” ಕಾರ್ಯಕ್ರಮದಡಿ ಜಾಗತಿಕ ಹಾಗೂ ಭಾರತೀಯ ಏರೋಸ್ಪೇಸ್ ಉದ್ಯಮಗಳಲ್ಲಿನ ಪ್ರಗತಿಗಾಗಿ ಪಾಲುದಾರಿಕೆಗಳನ್ನು ಉತ್ತೇಜಿಸುವುದರೊಂದಿಗೆ ಸ್ವದೇಶೀ ಉದ್ಯಮಕ್ಕೆ ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದು ಇದರ ಉದ್ದೇಶವಾಗಿದೆ. ಕಾರ್ಯಕ್ರಮದ ಮೊದಲ ಮೂರು ದಿನಗಳಲ್ಲಿ (ಫೆಬ್ರವರಿ 10, 11 ಮತ್ತು 12) ಉದ್ಯಮಗಳ ನಡುವೆ ವ್ಯವಹಾರಕ್ಕಾಗಿ ನಿಗದಿ ಪಡಸಿದ್ದು, ಇನ್ನುಳಿದ 13 ಮತ್ತು 14 ನೇ ತಾರೀಖಿನಂದು ಸಾರ್ವಜನಿಕರಿಗಾಗಿ ಭಾರತೀಯ ವಾಯು ಸೇನೆ ಪ್ರದರ್ಶನಗಳನ್ನು ಆಯೋಜಿಸಲಿದೆ.
ಫೆ.10ರಿಂದ ನಡೆಯುವ ಏರೋ ಇಂಡಿಯಾ 2025ಕ್ಕೆ ಕಾವೇರಿ ನೀರು ಸರಬರಾಜು ಖಚಿತ
