Asianet Suvarna News Asianet Suvarna News

ದಾರಿಯ ಜಾಗ ಒತ್ತುವರಿ ಮಾಡಿ ಮಸೀದಿ ನಿರ್ಮಾಣ, BBMP ನೋಟಿಸ್‌

ದಾರಿ ಒತ್ತುವರಿ ಮಾಡಿದ ಮಸೀದಿಗೆ  ಕಟ್ಟಡ ತೆರವಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ.  ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿನ ಮಸೀದಿ ಜನರ ಓಡಾಟಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕೇಸ್‌

BBMP notice to  bengaluru Mosque against  Land Encroachment gow
Author
Bengaluru, First Published Jul 19, 2022, 8:28 AM IST

ಬೆಂಗಳೂರು (ಜು.19): ಸಾರ್ವಜನಿಕರ ಓಡಾಟಕ್ಕೆಂದು ಮೀಸಲಾಗಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಸೀದಿಯ ಒತ್ತುವರಿ ಜಾಗದಲ್ಲಿರುವ ಭಾಗವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮಸ್‌ಜಿದ್‌ ಎ ಅಲ್‌ ಖುಬ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಿದೆ. ವಿಜಯನಗರದ ಆರ್‌ಪಿಸಿ ಲೇಔಟ್‌ ಹೊಸಹಳ್ಳಿ ಬಡಾವಣೆಯ 3ನೇ ಮುಖ್ಯ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ 13 ಮತ್ತು 15 ಖಾಸಗಿ ಮಾಲಿಕತ್ವದ ಸ್ವತ್ತಾಗಿದ್ದು, ಇವುಗಳ ನಡುವಿನ ನಿವೇಶನ ಸಂಖ್ಯೆ 14 (5/45 ಚದರ ಅಡಿ) ಸಾರ್ವಜನಿಕರ ಓಡಾಟಕ್ಕೆಂದು ಮೀಸಲಾಗಿದ್ದ (ಪ್ಯಾಸೇಜ್‌) ಜಾಗವಾಗಿತ್ತು. ಆದರೆ, ಖಾಸಗಿ ಮಾಲೀಕತ್ವದ ಎರಡು ನಿವೇಶನಗಳನ್ನು ಪಡೆದಿದ್ದ ಮೆ.ಫೈಜುಲ್ಲಾ ಬಕಿಯಥ್‌ ಇಸ್ಲಾಮಿಕ್‌ ವೆಲ್ಫೇರ್‌ ಟ್ರಸ್ಟ್‌ ಸಾರ್ವಜನಿಕರಿಗೆ ಮೀಸಲಾಗಿಟ್ಟಜಾಗವನ್ನು ಕಬಳಿಸಿ ಮಸೀದಿ ನಿರ್ಮಿಸಿತ್ತು ಎನ್ನಲಾಗಿದ್ದು, ಪ್ರಕರಣವು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರದವರ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ವಾದ, ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ. ನಿವೇಶನ ಸಂಖ್ಯೆ14ರ 5/45 ಚ.ಅಡಿ ಸ್ವತ್ತು ಪಾಲಿಕೆ ಸ್ವತ್ತೆಂದು ಘೋಷಿಸಲಾಗಿದೆ. ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ. ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಒತ್ತುವರಿ ತೆರವುಗೊಳಿಸುವ ಕುರಿತು ಜಾರಿ ಮಾಡಿದೆ.

ಆರ್‌ಪಿಸಿ ಲೇಔಟ್‌ ಹೊಸಹಳ್ಳಿ ಬಡಾವಣೆಯ 3ನೇ ಮುಖ್ಯ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ 13ರ (45/32 ಚ.ಅಡಿಗಳು) ಸ್ವತ್ತನ್ನು ಬಿ.ಬಾಷಾ ಎಂಬುವರು ಖರೀದಿಸಿದ್ದರು. ನಿವೇಶನ ಸಂಖ್ಯೆ 15ರ (45/31 ಚ. ಅಡಿಗಳು) ಸ್ವತ್ತನ್ನು ಪೀರ್‌ಸಾಬ್‌ ಎಂಬುವರು ಖರೀದಿಸಿದ್ದರು. ಈ ಎರಡು ಸ್ವತ್ತುಗಳ ಮಧ್ಯೆ ನಿವೇಶನ ಸಂಖ್ಯೆ 14 (5/45 ಚ.ಅಡಿ) ಇದ್ದು, ಈ ಸ್ವತ್ತು ಪಾಲಿಕೆಗೆ ಸೇರಿದ ಪ್ಯಾಸೇಜ್‌ ಆಗಿದೆ.

ಬಿ.ಬಾಷಾ ಎಂಬುವರು ತಮ್ಮ ನಿವೇಶನ ಸಂಖ್ಯೆ 13ರ ಸ್ವತ್ತನ್ನು ಮೆ. ಫೈಜುಲ್ಲಾ ಬಕಿಯಥ್‌ ಇಸ್ಲಾಮಿಕ್‌ ವೆಲ್ಫೇರ್‌ ಟ್ರಸ್ಟ್‌ಗೆ ಮಾರಾಟ ಮಾಡಿದ್ದಾರೆ. ಆ ನಂತರ ನಿವೇಶನ ಸಂಖ್ಯೆ 15ಅನ್ನು ಅಮೀನಾ ಬಿ. ಕೋ.ಪೀರ್‌ಸಾಬ್‌ ಮತ್ತು ಇತರರು ನೋಂದಣಿ ಮಾಡದ ದಸ್ತಾವೇಜಿನ ಮುಲಕ ಮೆ. ಫೈಜುಲ್ಲಾ ಬಕಿಯಥ್‌ ಇಸ್ಲಾಮಿಕ್‌ ವೆಲ್ಫೇರ್‌ ಟ್ರಸ್ಟ್‌ಗೆ ವರ್ಗಾವಣೆ ಮಾಡಿ ಕೊಟ್ಟಿದ್ದಾರೆ. ಈ ಟ್ರಸ್ಟ್‌ ನಿವೇಶನ 13 ಮತ್ತು 15ಅನ್ನು ಒಗ್ಗೂಡಿ ಮಸೀದಿಯನ್ನು ನಿರ್ಮಿಸುವಾಗ ಈ ಎರಡು ನಿವೇಶನಗಳ ನಡುವೆ ಇದ್ದ 5/45 ಚ.ಅಡಿಯ ಬಿಬಿಎಂಪಿಯ ಪ್ಯಾಸೆಜ್‌ ಸ್ವತ್ತನ್ನು ಸಹ ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗಿತ್ತು.

Follow Us:
Download App:
  • android
  • ios