ಬೆಂಗಳೂರು(ಏ.17): ಬಿಬಿಎಂಪಿಯ ಕೆಲವು ವಾರ್ಡ್‌ಗಳನ್ನು ‘ಕೊರೋನಾ ಹಾಟ್‌ಸ್ಪಾಟ್‌’ ಘೋಷಣೆ ಕುರಿತು ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌, ಹಾಟ್‌ಸ್ಪಾಟ್‌ ವಾರ್ಡ್‌ಗಳ ಬಗ್ಗೆ ಅಧಿಕಾರಿಗಳಲ್ಲಿಯೇ ಗೊಂದಲ ಇದೆ. ಒಬ್ಬ ಅಧಿಕಾರಿ 38, ಮತ್ತೊಬ್ಬ ಅಧಿಕಾರಿ 32 ಹಾಟ್‌ಸ್ಪಾಟ್‌ ವಾರ್ಡ್‌ ಎನ್ನುತ್ತಾರೆ. ಆದರೆ, ಸರಿಯಾದ ಮಾಹಿತಿಯನ್ನು ಯಾವೊಬ್ಬ ಅಧಿಕಾರಿಯೂ ನೀಡುತ್ತಿಲ್ಲ, ಇಷ್ಟಕ್ಕೂ ಬಿಬಿಎಂಪಿಯ ವಾರ್ಡ್‌ಗಳನ್ನು ಹಾಟ್‌ಸ್ಪಾಟ್‌ ವಾರ್ಡ್‌ಗಳು ಎಂದು ಘೋಷಣೆ ಮಾಡುವುದಕ್ಕೆ ಇವರಿಗೆ ಅಧಿಕಾರ ನೀಡಿದವರು ಯಾರು ಪ್ರಶ್ನಿಸಿದರು.

COVID19: ರಾಜ್ಯದ ಕೊರೋನಾ ಅಪ್‌ಡೇಟ್ಸ್, ಇಲ್ಲಿದೆ ವಿಡಿಯೋ

ಮುಖ್ಯಮಂತ್ರಿಗೆ ಪತ್ರ:

ಹಾಟ್‌ಸ್ಪಾಟ್‌ ವಾರ್ಡ್‌ಗಳ ಬಗ್ಗೆ ನಗರ ಶಾಸಕರಿಗೆ ಹಾಗೂ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡುವಂತೆ ಹೇಳಲಾಗಿದ್ದರೂ ಅಧಿಕಾರಿಗಳು ನೀಡದೇ ಇದ್ದಾಗ ಅನಿವಾರ್ಯವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್‌ ಅವರಿಗೆ ಪತ್ರ ಬರೆದು ಪಟ್ಟಿಪಡೆದುಕೊಳ್ಳಬೇಕಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಕಳೆದ ಮಂಗಳವಾರ ಬಿಡುಗಡೆ ಮಾಡಿದ ವಾರ್‌ ರೂಂ ಬುಲೆಟಿನ್‌ನಲ್ಲಿ 38 ವಾರ್ಡ್‌ಗಳು ಹಾಟ್‌ಸ್ಪಾಟ್‌ ವಾರ್ಡ್‌ಗಳಿದ್ದವು. ಬಳಿಕ ಕೆಲವು ಶಾಸಕರು, ಪಾಲಿಕೆ ಸದಸ್ಯರು ಫೋನ್‌ ಮಾಡಿ ವಿವರಣೆ ಕೇಳಿದರು. ಅವರಿಗೆ ಸಂಪೂರ್ಣವಾಗಿ ವಿವರಿಸಲಾಗಿದೆ. ಬುಧವಾರ ಹಾಟ್‌ಸ್ಪಾಟ್‌ ವಾರ್ಡ್‌ ಪಟ್ಟಿಪರಿಷ್ಕರಿಸಲಾಗಿದ್ದು, ಕೊರೋನಾ ಸೋಂಕಿತರ ವಿಳಾಸದ ಆಧಾರದ ಮೇಲೆ ಹಾಟ್‌ಸ್ಪಾಟ್‌ ವಿಂಗಡನೆ ಮಾಡಲಾಗಿದೆ. ಇನ್ನು ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡು 28 ದಿನ ಆಗಿರುವ ಪ್ರದೇಶದಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳದ ವಾರ್ಡ್‌ಗಳನ್ನು ಹಾಟ್‌ಸ್ಪಾಟ್‌ ಪಟ್ಟಿಯಿಂದ ವಾರ್ಡ್‌ ಅನ್ನು ಕೈ ಬಿಟ್ಟು 32 ವಾರ್ಡ್‌ಗಳ ಪಟ್ಟಿಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಸದ್ಯ ಬಿಬಿಎಂಪಿಯ 32 ವಾರ್ಡ್‌ಗಳನ್ನು ಹಾಟ್‌ಸ್ಪಾಟ್‌ ವಾರ್ಡ್‌ ಎಂದು ಗುರುತಿಸಲಾಗಿದೆ. ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತರಾಗಿ ಇರಬೇಕು ಎಂಬ ಉದ್ದೇಶದಿಂದ ಹಾಟ್‌ ಸ್ಪಾಟ್‌ಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.