2019ರಲ್ಲಿ 240 ಮಾರ್ಷಲ್‌ಗಳ ನೇಮಕ, ಈಗ ಅವರ ಸಂಖ್ಯೆ 567ಕ್ಕೆ ಏರಿಕೆ, ಇವರ ವೇತನಕ್ಕಾಗಿ ಬಿಬಿಎಂಪಿಯಿಂದ ವರ್ಷಕ್ಕೆ 22 ಕೋಟಿ ವೆಚ್ಚ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.31): ನಗರದ ಕಸ ವಿಲೇವಾರಿ ನಿರ್ವಹಣೆಗಾಗಿ ಹೊರ ಗುತ್ತಿಗೆ ಆಧಾರದಲ್ಲಿ ಆರಂಭಿಸಿದ್ದ ಮಾರ್ಷಲ್‌ಗಳ ನೇಮಕಾತಿ ಸಂಖ್ಯೆ ಕಳೆದ ನಾಲ್ಕು ವರ್ಷದಲ್ಲಿ 567ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ವಾರ್ಷಿಕ ಬರೋಬ್ಬರಿ 22 ಕೋಟಿಗಳನ್ನು ಮಾರ್ಷಲ್‌ಗಳ ಗೌರವ ಧನಕ್ಕೆ (ವೇತನ) ಬಿಬಿಎಂಪಿ ವೆಚ್ಚ ಮಾಡುತ್ತಿದೆ.

ನಗರದ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ 2019ರ ಸೆಪ್ಟಂಬರ್‌ನಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಒಟ್ಟು 240 ಕ್ಲೀನ್‌ ಆಪ್‌ ಮಾರ್ಷಲ್‌ಗಳನ್ನು ಸೇವೆಗೆ ಪಡೆಯಲಾಗಿತ್ತು. 240 ಮಾರ್ಷಲ್‌ಗಳಿಗೆ ವೇತನಕ್ಕೆ ವಾರ್ಷಿಕ .8.30 ಕೋಟಿ ವೆಚ್ಚಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಅದಾದ ಬಳಿಕ 2020ರ ಸೆಪ್ಟಂಬರ್‌ನಿಂದ ಮತ್ತೆ ನಾಲ್ಕು ತಿಂಗಳು ಮುಂದುವರೆಸುವುದಕ್ಕೆ ಸರ್ಕಾರ ಅನುಮೋದನೆ ನೀಡಿ ವೇತನವನ್ನು ಬಿಬಿಎಂಪಿಯ ಸಂಪನ್ಮೂಲದಿಂದಲೇ ಭರಿಸುವಂತೆ ಸೂಚಿಸಿತ್ತು.

BBMP Recruitment: 3500 ಪೌರ ಕಾರ್ಮಿಕರ ನೇಮಕಾತಿಗೆ ಬರೋಬ್ಬರಿ 11,500ಕ್ಕೂ ಹೆಚ್ಚು ಅರ್ಜಿ!

2020ರಲ್ಲಿ ಕೋವಿಡ್‌ ಸೋಂಕು ನಿರ್ವಹಣೆಗೆ ಹೆಚ್ಚುವರಿಯಾಗಿ 31 ಮಾರ್ಷಲ್‌ ಮತ್ತು 10 ಜೆಸಿಒ, ಬಿಬಿಎಂಪಿಯ ವಾರ್ಡ್‌ ಸಂಖ್ಯೆ 243ಕ್ಕೆ ಹೆಚ್ಚಳವಾಗುತ್ತಿದ್ದಂತೆ ಹೆಚ್ಚುವರಿಯಾಗಿ 20 ಮಾರ್ಷಲ್‌ ಮತ್ತು 9 ಜೆಸಿಒಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ 2019ರ ಸೆಪ್ಟಂಬರ್‌ನಿಂದ 2023ರ ವರೆಗೆ ಒಟ್ಟು 567 ಮಂದಿ ಮಾರ್ಷಲ್‌ಗಳನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿದೆ. 567 ಮಾರ್ಷಲ್‌ಗಳಿಗೆ ಮಾಸಿಕ ವೇತನಕ್ಕೆ .1.51 ಕೋಟಿ ಪಾವತಿ ಮಾಡಿದರೆ, ಜಿಎಸ್‌ಟಿ ರೂಪದಲ್ಲಿ .27 ಲಕ್ಷ ಪಾವತಿಸುತ್ತಿದೆ. ಒಟ್ಟಾರೆ ವಾರ್ಷಿಕ .22 ಕೋಟಿಗಳನ್ನು ಬಿಬಿಎಂಪಿ ತನ್ನ ಸಂಪನ್ಮೂಲದಿಂದ ಭರಿಸುತ್ತಿದೆ.

ಮಾರ್ಷಲ್‌ ಮುಂದುವರೆಸಲು ಪ್ರಸ್ತಾವನೆ

ಸರ್ಕಾರದಿಂದ 2019ರಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾದರ್ಶಕತೆ (ಕೆಟಿಪಿಪಿ) ಕಾಯ್ದೆ ಸೆಕ್ಷನ್‌ 4 ಜಿ.(ತ್ವರಿತವಾಗಿ ಟೆಂಡರ್‌ ಇಲ್ಲದೆ ಅನುಮೋದನೆ) ವಿನಾಯಿತಿಯಡಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಮಾರ್ಷಲ್‌ಗಳನ್ನು ಕಳೆದ ಮೂರು ವರ್ಷದಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇದೀಗ ಮಾಸಿಕ .1.78 ಕೋಟಿ ವೇತನದೊಂದಿಗೆ ಮಾರ್ಷಲ್‌ಗಳ ಸೇವೆಯನ್ನು ಮುಂದುವರೆಸುವುದಕ್ಕೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು ಆಡಳಿತಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜತೆಗೆ, ಬಿಬಿಎಂಪಿಯ 2023-24ನೇ ಆಯವ್ಯಯದಲ್ಲಿ .36 ಕೋಟಿ ಮಾರ್ಷಲ್‌ಗಳ ಗೌರವ ಧನ ಭರಿಸುವುದಕ್ಕೆ ಅನುಮೋದನೆ ನೀಡುವಂತೆ ಕೋರಲಾಗಿದೆ.

ಮಾರ್ಷಲ್‌ ನಿರ್ವಹಿಸುತ್ತಿರುವ ಕೆಲಸಗಳು

ವಾರ್ಡ್‌ನಲ್ಲಿ ಆಟೋ ಹಾಗೂ ಪೌರಕಾರ್ಮಿಕರ ಹಾಜರಾತಿ, ಬ್ಲಾಕ್‌ ಸ್ಪಾಟ್‌ಗಳ ಸ್ವಚ್ಛತೆ, ರಸ್ತೆ ಸ್ವಚ್ಛತೆ ಬಗ್ಗೆ ನಿರ್ವಹಣೆ ಹಾಗೂ ವಾರ್ಡ್‌ ಸ್ವಚ್ಛತೆಯ ಉಸ್ತುವಾರಿ, ಮಾರುಕಟ್ಟೆಸ್ವಚ್ಛತೆ, ಕೋವಿಡ್‌-19 ತುರ್ತು ಪರಿಸ್ಥಿತಿ ನಿರ್ವಹಣೆ, ಸ್ವಚ್ಛತಾ ಸರ್ವೇಕ್ಷಣ ನಿರ್ವಹಣೆ, ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ತ್ಯಾಜ್ಯ ಸುರಿಯದಂತೆ ತಡೆಗಟ್ಟುವುದು, ಭೂ ಭರ್ತಿ ಕೇಂದ್ರಗಳಿಗೆ ಅನಧಿಕೃತ ತ್ಯಾಜ್ಯ ವಿಲೇವಾರಿ ತಡೆಗಟ್ಟವುದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಕಲುಷಿತಗೊಳಿಸಿ ಪೂಜೆ ಯಾಕೆ: ಬಿಬಿಎಂಪಿಗೆ ಕೋರ್ಟ್‌ ಪ್ರಶ್ನೆ

ಮಾರ್ಷಲ್‌ ವಿವರ

ಮಾರ್ಷಲ್‌ ಹುದ್ದೆ ಸಂಖ್ಯೆ ಗೌರವ ಧನ (ಮಾಸಿಕ)
ಚೀಫ್‌ ಮಾರ್ಷಲ್‌ 01 97,225
ವಾರ್ಡ್‌ ಮಾರ್ಷಲ್‌ 418 25,000
ವಾರ್ಡ್‌/ಕೆರೆ ಸೂಪರ್‌ವೈಜರ್‌ 33 35,000-45,475
ಲ್ಯಾಂಡ್‌ ಫೀಲ್‌ ಮಾರ್ಷಲ್‌ 24 28,987
ತ್ಯಾಜ್ಯ ಸಂಸ್ಕರಣಾ ಘಟಕ 49 25,480
ಕೆರೆ 42 29,462
ಒಟ್ಟು 567 1,78,55,975 (ಜಿಎಸ್‌ಟಿ ಸೇರಿ)

ಬಿಬಿಎಂಪಿಯ ವಿವಿಧ ಕಾರ್ಯಗಳಿಗೆ ಮಾರ್ಷಲ್‌ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ 4 ಜಿ. ಅಡಿ ನೇಮಕಾತಿ ಮತ್ತು ಅವರನ್ನು ಮುಂದುವರೆಸುವ ಬಗ್ಗೆ ಪರಿಶೀಲಿಸಲಾಗುವುದು ಅಂತ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ಕುಮಾರ್‌ ತಿಳಿಸಿದ್ದಾರೆ.