ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಆ.11] :  ಪ್ರಸಕ್ತ ಸಾಲಿನಲ್ಲಿ ಸರ್ಕಾರವು ಒಂದು ರುಪಾಯಿ ಅನುದಾನವನ್ನೂ ನೀಡದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆ ಬಿಬಿಎಂಪಿಗೆ ದೊಡ್ಡ ಹೊರೆಯಾಗಿದೆ.

ಅಭಿವೃದ್ಧಿ ಕಾಮಗಾರಿಗಾಗಿ ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಬಿಬಿಎಂಪಿ ಈಗ ವರ್ಷಕ್ಕೆ 150 ಕೋಟಿ ರು. ಮೊತ್ತವನ್ನು ಇಂದಿರಾ ಕ್ಯಾಂಟೀನ್‌ ಬಾಬ್ತಿಗೆ ವೆಚ್ಚ ಮಾಡುವ ಅನಿವಾರ್ಯತೆಗೆ ಸಿಲುಕಿದೆ.

ಒಂದು ವರ್ಷದಿಂದ ಒಂದು ರುಪಾಯಿ ನೀಡದ ಸರ್ಕಾರ ಈ ಹಿಂದಿನ ಎರಡು ವರ್ಷಗಳ ಹಣವನ್ನು ಸಹ ಬಾಕಿ ಉಳಿಸಿಕೊಂಡಿದೆ.

ಕ್ಯಾಂಟೀನ್‌ ಆರಂಭಿಸುವಾಗ ರಾಜ್ಯ ಸರ್ಕಾರ ಪೂರ್ಣ ಅನುದಾನ ನೀಡುವುದಾಗಿ ಹೇಳಿತ್ತು. ಆದರೆ ಕಳೆದ 2019-20ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಯಾವುದೇ ಅನುದಾನ ಮೀಸಲಿಡಲಿಲ್ಲ. ಇದರಿಂದ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಯ ಸಂಪೂರ್ಣ ಹೊರೆ ಬಿಬಿಎಂಪಿ ಮೇಲೆ ಬಿದ್ದಿದೆ.

ರಾಜ್ಯ ಸರ್ಕಾರ 2017-18ರಲ್ಲಿ ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರು. ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಿತ್ತು. ಆದರೆ ಆ ವರ್ಷ ವೆಚ್ಚಾಗಿದ್ದು 124 ಕೋಟಿ ರು., 2018-19 ಸಾಲಿನಲ್ಲಿ 115 ಕೋಟಿ ರು. ಬಿಡುಗಡೆ ಮಾಡಿತ್ತಾದರೂ ವೆಚ್ಚವಾಗಿದ್ದು 145 ಕೋಟಿ ರು. ಇನ್ನು 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡಲಿಲ್ಲ. ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಬಿಬಿಎಂಪಿ ಮಾತ್ರ 2019-20ನೇ ಸಾಲಿನಲ್ಲಿ ಕ್ಯಾಂಟೀನ್‌ ನಿರ್ವಹಣೆಗೆ 152 ಕೋಟಿ  ರು. ಅಂದಾಜು ಮಾಡುವುದರ ಜತೆಗೆ ಈ ಹಿಂದಿನ ವರ್ಷದಲ್ಲಿ ಹೆಚ್ಚುವರಿಯಾಗಿ ವೆಚ್ಚ ಮಾಡಿದ 58 ಕೋಟಿ ರು. ಸೇರಿದಂತೆ ಒಟ್ಟು 210 ಕೋಟಿ  ರು. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಿದರೂ ಬಿಬಿಎಂಪಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇಂದಿರಾ ಕ್ಯಾಂಟೀನ್‌ನ ಹೆಸರು ಬದಲಾವಣೆ ?

ಪ್ರಸಕ್ತ ಸಾಲಿನ ನಾಲ್ಕು ತಿಂಗಳು ಪೂರ್ಣಗೊಂಡಿದೆ. ಬಿಬಿಎಂಪಿ ಗುತ್ತಿಗೆದಾರರಿಗೆ ಜೂನ್‌ವರೆಗೆ 26 ಕೋಟಿ ರು. ಬಿಲ್‌ ಪಾವತಿ ಮಾಡಿದ್ದು, ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಬಿಬಿಎಂಪಿ ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆ ನಿರ್ವಹಣೆ ದುಸ್ತರ:

ಪಾಲಿಕೆಗೆ ಪ್ರತಿವರ್ಷ ಆಸ್ತಿ ತೆರಿಗೆ ಮೂಲಕ ಸುಮಾರು .2,500 ಕೋಟಿ ಸಂಗ್ರಹವಾಗಲಿದೆ. ಅದರಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರು.ಗಳನ್ನು ಕಸ ವಿಲೇವಾರಿಗೆ ವೆಚ್ಚ ಮಾಡುತ್ತಿದೆ. ಉಳಿದ .1,500 ಕೋಟಿಗಳಲ್ಲಿ ಪಾಲಿಕೆ ಆಡಳಿತ, ಉದ್ಯಾನವನ, ಪಾಲಿಕೆ 24 ಆಸ್ಪತ್ರೆ, 158 ಶಾಲೆ- ಕಾಲೇಜುಗಳ ನಿರ್ವಹಣೆ ಮಾಡಬೇಕಾಗಿದೆ. ಅದರ ಜತೆಗೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ 150 ರಿಂದ 170 ಕೋಟಿ ವಿನಿಯೋಗಿಸುವುದು ದುಸ್ತರವಾಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಅನುದಾನ ಬಿಡುಗಡೆ ಮತ್ತು ವೆಚ್ಚದ ವಿವರ

ವರ್ಷ    ಸರ್ಕಾರದ ಘೋಷಣೆ    ಬಿಡುಗಡೆ    ಪಾಲಿಕೆ ವೆಚ್ಚ [ರು.ಗಳಲ್ಲಿ]

2017-18    100    100    124

2018-19    145    115    137

2019-20    -    -    26 (ಜೂನ್‌ ಅಂತ್ಯಕ್ಕೆ)

ಅಂಕಿ ಅಂಶ

174: ಸ್ಥಿರ ಇಂದಿರಾ ಕ್ಯಾಂಟೀನ್‌

24: ಮೊಬೈಲ್‌ ಇಂದಿರಾ ಕ್ಯಾಂಟೀನ್‌

20: ಕೇಂದ್ರೀಕೃತ ಅಡುಗೆ ಮನೆ

2.15: ಲಕ್ಷ ಪ್ರತಿದಿನ ಮಂದಿ ಊಟ, ತಿಂಡಿ ಸೇವನೆ

1200: ಮಂದಿ ಸರಾಸರಿ ಪ್ರತಿ ದಿನ ಪ್ರತಿ ಕ್ಯಾಂಟೀನ್‌ನಲ್ಲಿ ಊಟ, ತಿಂಡಿ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಘೋಷಣೆ ಮಾಡಿಲ್ಲ. ಆದರೆ, ಅನುದಾನ ನೀಡಲಿದೆ ಎಂಬ ವಿಶ್ವಾಸವಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಪಾಲಿಕೆಯಿಂದ ಕಾಲಕಾಲಕ್ಕೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸುತ್ತಿದೆ.

-ಎನ್‌.ಮಂಜುನಾಥ್‌ ಪ್ರಸಾದ್‌, ಆಯುಕ್ತರು ಬಿಬಿಎಂಪಿ.

 ಎರಡು ವರ್ಷ ಪೂರ್ಣ

ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಿ ಇದೇ ಆ.17ಕ್ಕೆ ಬರೋಬ್ಬರಿ ಎರಡು ವರ್ಷ ಪೂರ್ಣಗೊಳಿಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2017ರ ಆಗಸ್ಟ್‌ 17ರಿಂದ 2018ರ ಆಗಸ್ಟ್‌ 16ರ ಒಂದು ವರ್ಷದ ಅವಧಿಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ 6 ಕೋಟಿ ಮಂದಿ ಆಹಾರ ಸೇವನೆ ಮಾಡಿದ್ದರು. ಈ ವರ್ಷ ಆರು ಕೋಟಿಗೂ ಹೆಚ್ಚು ಮಂದಿ ಆಹಾರ ಸೇವೆ ಮಾಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.