ಬೆಂಗಳೂರು [ಜು.29]: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ‘ಇಂದಿರಾ’ ಕ್ಯಾಂಟೀನ್‌ ಯೋಜನೆಯ ಹೆಸರನ್ನು ‘ಅನ್ನಪೂರ್ಣ’ ಕ್ಯಾಂಟೀನ್‌ ಎಂದು ಬದಲಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಂತಹದೊಂದು ಮಾತುಗಳು ಕೇಳಿ ಬರುತ್ತಿವೆ. ಬಿಬಿಎಂಪಿ ಕೆಲವು ಸದಸ್ಯರು ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಬೇಕೆಂಬ ಸಲಹೆಯನ್ನು ತಮ್ಮ ನಾಯಕರ ಮುಂದಿಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಪಕ್ಷದ ಮುಖಂಡರ ಮುಂದೆ ಇಂದಿರಾ ಕ್ಯಾಂಟೀನ್‌ಗೆ ವಾಜಪೇಯಿ ಕ್ಯಾಂಟೀನ್‌ ಎಂದು ಹೆಸರಿಸಬೇಕೆಂದು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದರಾದರೂ, ಪಕ್ಷದ ನಾಯಕತ್ವ ಇದನ್ನು ಒಪ್ಪಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಯಾವುದೇ ರಾಜಕೀಯ ನಾಯಕರ ಹೆಸರು ಇಡುವುದು ಬೇಡ. ಆ ರೀತಿ ಕಾಂಗ್ರೆಸ್‌ ನಾಯಕರ ಹೆಸರು ತೆಗೆದು ಬಿಜೆಪಿ ನಾಯಕರ ಹೆಸರು ನಾಮಕರಣ ಮಾಡಿದರೆ ಜನರಿಗೆ ತಪ್ಪು ಅಭಿಪ್ರಾಯ ಬರುತ್ತದೆ. ಹಾಗಾಗಿ ಅನ್ನಪೂರ್ಣ ಕ್ಯಾಂಟೀನ್‌ ಎಂದು ನಾಮಕರಣ ಮಾಡಿ ಎಂದು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಿಸಿತ್ತು. ನಂತರ ರಾಜ್ಯದ ವಿವಿಧ ಕಡೆ ಸಹ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು.