ಬೆಂಗಳೂರು [ಜ.09]:  ಬಿಬಿಎಂಪಿಯ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಗುವಿಗೆ ನೀಡಲಾಗುತ್ತಿರುವ ಮಹಾಲಕ್ಷ್ಮಿ ಬಾಂಡ್‌ ವಿತರಣೆಗೆ ವಿವಿಧ ಮಾನದಂಡ ರೂಪಿಸಲಾಗಿದೆ. ಇದರ ಪ್ರಕಾರ ಸಹಜ ಹಾಗೂ ಸಿಸೇರಿಯನ್‌ ಅಥವಾ ಯಾವುದೇ ವಿಧಾನದಲ್ಲಿ ಬಿಬಿಎಂಪಿ 32 ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಕ್ಕಳು ಪಾಲಿಕೆಯ ಮಹಾಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲಿದ್ದಾರೆ. ಯೋಜನೆಯ ಲಾಭ ಪಡೆಯುವುದಕ್ಕೆ ಬಿಪಿಎಲ್‌ ಕಾರ್ಡ್‌ ಅವಶ್ಯಕತೆ ಇಲ್ಲ.

2018-19ನೇ ಸಾಲಿನ ಬಜೆಟ್‌ನಲ್ಲಿ ಪಿಂಕ್‌ಬೇಬಿ ಯೋಜನೆಯಡಿ ಹೊಸ ವರ್ಷದಂದು ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರು. ಬಾಂಡ್‌ ನೀಡುವ ಯೋಜನೆ ಜಾರಿ ಮಾಡಲಾಗಿತ್ತು. 2019-20ನೇ ಸಾಲಿನ ಬಜೆಟ್‌ನಲ್ಲಿ ಪಾಲಿಕೆಯ 6 ರೆಫರಲ್‌ ಹಾಗೂ 26 ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷವಿಡೀ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರು. ಬಾಂಡ್‌ ವಿತರಿಸುವ ಯೋಜನೆ ಘೋಷಿಸಿ 60 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು.

ಹೊಸ ವರ್ಷದ ದಿನ ಹೆಣ್ಣು ಮಕ್ಕಳಿಗೆ ಸಿಕ್ತು ಭರ್ಜರಿ ಗಿಫ್ಟ್...

ಇದೀಗ ಯೋಜನೆಯ ಫಲಾನುಭವಿಯ ಆಯ್ಕೆ ಹಾಗೂ ಅರ್ಹತೆಗೆ ಮಾನದಂಡಗಳನ್ನು ರೂಪಿಸಲಾಗಿದ್ದು, ಮುಂದಿನ ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡಿಸಿ ತದ ನಂತರ ಫಲಾನುಭವಿಗಳ ಆಯ್ಕೆಗೆ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ, ಮಾನದಂಡಗಳನ್ನು ರೂಪಿಸಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವರ್ಷದ ಅವಧಿಯಲ್ಲಿ ಸುಮಾರು ಐದರಿಂದ ಆರು ಸಾವಿರ ಹೆಣ್ಣು ಮಕ್ಕಳು ಪಾಲಿಕೆ ಆಸ್ಪತ್ರೆಗಳಲ್ಲಿ ಜನಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದರು.

ಬೆಂಗಳೂರಿನ ವಾಸಿ ಆಗಿರಬೇಕು ಎಂಬ ನಿಯಮವಿಲ್ಲ. ರಾಜ್ಯದ ಯಾವುದೇ ಜಿಲ್ಲೆಯ ನಿವಾಸಿಗಳಾದರೂ ಯೋಜನೆಯ ಲಾಭ ಪಡೆದುಕೊಳ್ಳಬಹುದು. 15 ವರ್ಷ ಬಾಂಡ್‌ ಅವಧಿಯಾಗಿದೆ. 15 ವರ್ಷದ ನಂತರ ಬಾಂಡ್‌ನ ಮೊತ್ತ ಮಗುವಿನ ಹೆಸರಿಗೆ ವರ್ಗಾವಣೆಯಾಗಲಿದೆ ಎಂದು ನಿರ್ಮಲಾ ಬುಗ್ಗಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಮಾನದಂಡಗಳು

*ಬಿಬಿಎಂಪಿ 6 ರೆಫರಲ್‌ ಆಸ್ಪತ್ರೆ ಹಾಗೂ 26 ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿರಬೇಕು

*1 ಏಪ್ರಿಲ್‌ 2019ರಿಂದ 31 ಮಾರ್ಚ್ 2020ರ ಅವಧಿಯಲ್ಲಿ ಜನಿಸಿರಬೇಕು

*ದಂಪತಿಗೆ ಜನಿಸಿದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ

*ಎರಡನೇ ಹೆರಿಗೆ ಸಂದರ್ಭದಲ್ಲಿ ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದರೆ ಆ ಎರಡು ಹೆಣ್ಣು ಮಕ್ಕಳಿಗೂ ಸೌಲಭ್ಯ.

*ಫೋಷಕರ ಆದಾಯ ಅನ್ವಯವಾಗುವುದಿಲ್ಲ.

*ಬಿಪಿಎಲ್‌ ಕಾರ್ಡ್‌ ಅವಶ್ಯಕತೆ ಇಲ್ಲ.

*ಫೋಷಕರು ಭಾರತೀಯ ಪ್ರಜೆಯಾಗಿರಬೇಕು.

*ಸಹಜ ಅಥವಾ ಸಿಸೇರಿಯನ್‌ ಯಾವುದೇ ವಿಧಾನದಲ್ಲಿ ಜನಿಸಿದ ಹೆಣ್ಣು ಮಗು ಯೋಜನೆಗೆ ಅರ್ಹ.