Asianet Suvarna News Asianet Suvarna News

ಹೊಸ ವರ್ಷದ ದಿನ ಹೆಣ್ಣು ಮಕ್ಕಳಿಗೆ ಸಿಕ್ತು ಭರ್ಜರಿ ಗಿಫ್ಟ್

ಹೊಸ ವರ್ಷದ ದಿನ ಹೆಣ್ಣು ಮಕ್ಕಳಿಗೆ ಭರ್ಜರಿ ಗಿಫ್ಟ್ ದೊರೆತಿದೆ. ಹೊಸ ವರ್ಷದ ದಿನ ಜನಿಸಿದ ಐದು ಹೆಣ್ಣು ಮಕ್ಕಳು ಪಿಂಕ್ ಬೇಬಿ ಯೋಜನೆಯ ಅಡಿ 5 ಲಕ್ಷ ಹಣವನ್ನು ಪಡೆದುಕೊಂಡಿವೆ.

Five baby girls gets BBMPs Pink Baby scheme Benefit
Author
Bengaluru, First Published Jan 2, 2019, 8:44 AM IST

ಬೆಂಗಳೂರು :  ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳ ಪೈಕಿ ಐದು ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ (ಜ.1) ಸಹಜ ಹೆರಿಗೆ ಮೂಲಕ ಐದು ಹೆಣ್ಣು ಮಕ್ಕಳು ಜನಿಸಿದ್ದು, ಆ ಐದೂ ಹೆಣ್ಣು ಮಕ್ಕಳಿಗೆ ತಲಾ .5 ಲಕ್ಷ ಬ್ಯಾಂಕ್‌ ಠೇವಣಿ ಇಡುವ ಪಾಲಿಕೆಯ ‘ಪಿಂಕ್‌ ಬೇಬಿ’ ಯೋಜನೆಯ ಭಾಗ್ಯ ದೊರೆಯಲಿದೆ. ಜೊತೆಗೆ ಪಾಲಿಕೆಯ ಉಳಿದ 19 ಆಸ್ಪತ್ರೆಗಳಲ್ಲಿ ಮಾರ್ಚ್ ಅಂತ್ಯದೊಳಗೆ ಯಾವುದೇ ದಿನದ ಮೊದಲು ಜನಿಸುವ ಹೆಣ್ಣು ಮಗುವಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಹೊಸ ವರ್ಷಕ್ಕೆ ಐದು ಹೆಣ್ಣು ಮಗು ಜನನ:  ತಾವರೆಕೆರೆ, ಗಂಗಾನಗರ, ರಾಜಾಜಿನಗರ, ನಂದಿನಿ ಬಡಾವಣೆ ಮತ್ತು ತಿಮ್ಮಯ್ಯ ರಸ್ತೆಯ ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಹೆಣ್ಣು ಮಕ್ಕಳು ಜನಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಪಾಲಿಕೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾವರೆಕೆರೆಯ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಲಕ್ಷ್ಮಿಬುಡಾ ಅವರಿಗೆ ಸೋಮವಾರ ರಾತ್ರಿ 12.59ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗಂಗಾನಗರದ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ನಗರದ ಆಶಾ ಉದಯ್‌ಕುಮಾರ್‌ ಅವರಿಗೆ ರಾತ್ರಿ 1.12ಕ್ಕೆ, ರಾಜಾಜಿನಗರದ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಶಶಿಕಲಾ ಮತ್ತು ಶಿವು ದಂಪತಿಗೆ ಮಂಗಳವಾರ ಬೆಳಗಿನ ಜಾವ 4.8ಕ್ಕೆ, ನಂದಿನಿ ಬಡಾವಣೆಯ ಹೆರಿಗೆ ಆಸ್ಪತ್ರೆಯಲ್ಲಿ ಮುಜಾಕೀರಾ ಬಾನು ಅವರಿಗೆ ಬೆಳಗ್ಗೆ 5.36ಕ್ಕೆ ಹಾಗೂ ತಿಮ್ಮಯ್ಯ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿ ಬೆಳಗ್ಗೆ 8.22ಕ್ಕೆ ನೂರ್‌ ಫಾತಿಮಾ ಮತ್ತು ಸೈಯದ್‌ ವಾಸೀಮ್‌ ದಂಪತಿಗೆ ಹೆಣ್ಣುಮಗು ಜನಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ ಯೋಜನೆ ಅನ್ವಯ

ಬಿಬಿಎಂಪಿಯು ತನ್ನ 24 ಹೆರಿಗೆ ಆಸ್ಪತ್ರೆಗಳಲ್ಲೂ ಹೊಸ ವರ್ಷದಲ್ಲಿ ಆಯಾ ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ ‘ಪಿಂಕ್‌ ಬೇಬಿ’ ಯೋಜನೆ ಜಾರಿಗೊಳಿಸಿತ್ತು. ಅದರಂತೆ ವರ್ಷದ ಮೊದಲ ಐದು ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಹೆಣ್ಣು ಮಕ್ಕಳಿಗೆ ಯೋಜನೆಯ ಫಲ ದೊರೆಯಲಿದೆ. ಇನ್ನೂ ಉಳಿದಿರುವ 19 ಆಸ್ಪತ್ರೆಗಳಲ್ಲಿ ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಯಾವುದೇ ದಿನ ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿಗೆ ಈ ಯೋಜನೆ ಅನ್ವಯಿಸಲಿದೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

‘ಪಿಂಕ್‌ ಬೇಬಿ’ ಯೋಜನೆ ವರ್ಷದ ಮೊದಲ ದಿನ ಜನಿಸಿದ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಮಾಚ್‌ರ್‍ವರೆಗೆ ಯೋಜನೆ ಚಾಲ್ತಿಯಲ್ಲಿರಲಿದ್ದು, ಆ ಕಾಲಾವಧಿಯಲ್ಲಿ ಯಾವುದೇ ದಿನ ಬಿಬಿಎಂಪಿಯ ಯಾವುದೇ ಹೆರಿಗೆ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿಗೆ ಯೋಜನೆ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಲಿಕೆ ಬಜೆಟ್‌ನಲ್ಲೇ ಪಿಂಕ್‌ ಬೇಬಿ ಯೋಜನೆ ಘೋಷಿಸಿ .1.20 ಕೋಟಿ ಅನುದಾನ ಮೀಸಲಿಡಲಾಗಿದೆ. ಹಾಗಾಗಿ 24 ಆಸ್ಪತ್ರೆಗಳಲ್ಲೂ ಹುಟ್ಟುವ ವರ್ಷದ ಮೊದಲ ಹೆಣ್ಣು ಮಕ್ಕಳಿಗೆ ಈ ಯೋಜನೆಯಡಿ ತಲಾ .5 ಲಕ್ಷ ಬ್ಯಾಂಕ್‌ ಠೇವಣಿ ಇಡುವುದು ಪಾಲಿಕೆಯ ಉದ್ದೇಶವಾಗಿದೆ. ಹಾಗಾಗಿ ಬಿಬಿಎಂಪಿಯ ಪ್ರತಿ ಹೆರಿಗೆ ಆಸ್ಪತ್ರೆಯಲ್ಲೂ ಜನಿಸಿದ ವರ್ಷದ ಮೊದಲ ಹೆಣ್ಣುಮಕ್ಕಳಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ. ಆ ಹೆಣ್ಣು ಮಗು ಮಾಚ್‌ 31ರೊಳಗೆ ಯಾವ ದಿನ ಜನಿಸಿದರೂ ಯೋಜನೆಗೆ ಅರ್ಹವಾಗುತ್ತದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios