ಪಾಲಿಕೆಗೆ 3.5 ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲ, ಮೀಸಲಾತಿ, ಪುನರ್‌ವಿಂಗಡಣೆ ನೆಪದಲ್ಲಿ ಪಾಲಿಕೆ ಚುನಾವಣೆ ಮುಂದೂಡಿದ್ದ ಸರ್ಕಾರ 

ಬೆಂಗಳೂರು(ಮೇ.16):  ವಿಧಾನಸಭೆ ಚುನಾವಣೆ ನಂತರ ಇದೀಗ ನೂತನ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ಸವಾಲು ಎದುರಿಸಬೇಕಿದೆ. ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್‌ ನಾಯಕರೇ ಬಿಬಿಎಂಪಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು. ಇದೀಗ ಅವರೇ ಅಧಿಕಾರಕ್ಕೆ ಬಂದಿದ್ದು, ಬಿಬಿಎಂಪಿ ಚುನಾವಣೆ ನಡೆಸಬೇಕಿದೆ. ರಾಜಧಾನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಿದೆ.

ಬಿಬಿಎಂಪಿ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡಿದೆ. ಅದಾದ ನಂತರ ರಾಜ್ಯ ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರಚನೆ, ವಾರ್ಡ್‌ ಮರುವಿಂಗಡಣೆಯಂತಹ ಕಾರ್ಯಗಳಿಗೆ ಚಾಲನೆ ನೀಡಿತು. ಹೀಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಈ ಕುರಿತಂತೆ ಬಿಬಿಎಂಪಿ ಮಾಜಿ ಸದಸ್ಯರಾದ ಕಾಂಗ್ರೆಸ್‌ನ ಎಂ.ಶಿವರಾಜು, ಅಬ್ದುಲ್‌ ವಾಜಿದ್‌ ಅವರು ಚುನಾವಣೆ ನಡೆಸಲು ಸೂಚಿಸುವಂತೆ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೂ, ನಾನಾ ಕಾರಣಗಳಿಂದಾಗಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮೂರುವರೆ ವರ್ಷಗಳಿಂದ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದಂತಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಕ್ಷಣ ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

ಹಿಂದಿನ ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್‌ ಮರುವಿಂಗಡಣೆಯ ಕುರಿತಂತೆ ಕಾಂಗ್ರೆಸ್‌ನ ಮಾಜಿ ಸದಸ್ಯರು, ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಕಾಂಗ್ರೆಸ್‌ ಸರ್ಕಾರ ಮರುವಿಂಗಡಣೆ ಕ್ರಮವನ್ನು ಹಿಂಪಡೆದು ಹೊಸದಾಗಿ ವಾರ್ಡ್‌ ಮರುವಿಂಗಡಣೆ ಮಾಡುವ ಕುರಿತು ಕಾಂಗ್ರೆಸ್‌ ನಾಯಕರು ಈಗಾಗಲೇ ಚರ್ಚಿಸಿದ್ದಾರೆ. ಅಲ್ಲದೆ, ಬಿಬಿಎಂಪಿ ಮಾಜಿ ಸದಸ್ಯರು ಈ ಕುರಿತಂತೆ ಪಕ್ಷದ ಹಿರಿಯರಿಗೂ ತಿಳಿಸಿದ್ದು, ವಾರ್ಡ್‌ ಮರುವಿಂಗಡಣೆಯಿಂದ ಕಾಂಗ್ರೆಸ್‌ ಸದಸ್ಯರಿದ್ದ ವಾರ್ಡ್‌ಗಳಲ್ಲಿ ವ್ಯತ್ಯಾಸವಾಗಿದೆ, ಅದನ್ನು ಸರಿಪಡಿಸಬೇಕು. ಜತೆಗೆ ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ. ಅದಕ್ಕೆ ಹಿರಿಯ ನಾಯಕರು ಈ ಕುರಿತು ಸರ್ಕಾರ ರಚನೆಯಾದ ನಂತರ ಸಚಿವ ಸಂಪುಟದಲ್ಲಿ ಚರ್ಚಿಸಿ ಚುನಾವಣೆ ಘೋಷಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಬಂಡಾಯದ ಬಿಸಿಗೆ ಚುನಾವಣೆ ಮುಂದಕ್ಕೆ?

ಬಿಬಿಎಂಪಿ ಚುನಾವಣೆ ಮುಂದೂಡಲು ಪ್ರಮುಖ ಕಾರಣ ವಿಧಾನಸಭೆ ಚುನಾವಣೆಯೂ ಹೌದು ಎಂಬುದು ಬಿಬಿಎಂಪಿ ಮಾಜಿ ಸದಸ್ಯರ ಆಕ್ಷೇಪವಾಗಿದೆ. ಬಿಬಿಎಂಪಿ ಚುನಾವಣೆ ನಡೆದಿದ್ದರೆ ಟಿಕೆಟ್‌ ವಂಚಿತ ಆಕಾಂಕ್ಷಿಗಳು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡುತ್ತಾರೆ ಎಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿತ್ತು. ಹೀಗಾಗಿ ವಾರ್ಡ್‌ ಮರುವಿಂಗಡಣೆ, ಮೀಸಲಾತಿ ಹೆಸರಿನಲ್ಲಿ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದರು. ಇದೀಗ ವಿಧಾನಸಭೆ ಚುನಾವಣೆ ಮುಗಿದಿದ್ದು, ಯಾವುದೇ ಆತಂಕವಿಲ್ಲದೆ ಬಿಬಿಎಂಪಿ ಚುನಾವಣೆ ನಡೆಸಬಹುದಾಗಿದೆ.

ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಲು ಅರ್ಜಿ

ಕಾಂಗ್ರೆಸ್‌ಗೆ ಶಾಸಕರ ಬಲವಿಲ್ಲ

ಬಿಬಿಎಂಪಿ ಚುನಾವಣೆ ಮೇಲೆ ರಾಜ್ಯ ಸರ್ಕಾರಕ್ಕಿಂತ ಸ್ಥಳೀಯ ಶಾಸಕರ ಪ್ರಭಾವ ಹೆಚ್ಚಿರಲಿದೆ. ಆದರೆ, ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನ ಶಾಸಕರ ಸಂಖ್ಯೆ ಬೆಂಗಳೂರಿನಲ್ಲಿ ಬಿಜೆಪಿಗಿಂತ ಕಡಿಮೆಯಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಆನೇಕಲ್‌ ಹೊರತುಪಡಿಸಿ ಉಳಿದ 27 ಕ್ಷೇತ್ರಗಳು ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ಅವುಗಳಲ್ಲಿ ಬಿಜೆಪಿಯ 15, ಕಾಂಗ್ರೆಸ್‌ನ 12 ಶಾಸಕರು ಆಯ್ಕೆಯಾಗಿದ್ದಾರೆ. ಸದ್ಯ ಬಿಬಿಎಂಪಿ ಚುನಾವಣೆ ನಡೆದರೆ ಬಿಜೆಪಿಗೆ ಸಹಕಾರಿಯಾಗಬಹುದಾಗಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿರುವ ಕಾರಣ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಕೂಡ ಎಲ್ಲ ಪ್ರಯತ್ನ ಮಾಡಲಿದೆ.

ಬಿಬಿಎಂಪಿ ಚುನಾವಣೆಗೆ ನಡೆಸಬೇಕು ಎಂದು ಕಾಂಗ್ರೆಸ್‌ ಹಿಂದಿನಿಂದಲೂ ಒತ್ತಾಯಿಸುತ್ತಿತ್ತು. ಅದರಂತೆ ಹಿಂದಿನ ಸರ್ಕಾರ ಮಾಡಿರುವ ವಾರ್ಡ್‌ ಮರುವಿಂಗಡಣೆಯನ್ನು ರದ್ದು ಮಾಡಿ ಹೊಸದಾಗಿ ಮರುವಿಂಗಡಣೆ ಮಾಡುವ ಕುರಿತು ಚರ್ಚಿಸಲಾಗಿದೆ. ಪಕ್ಷದ ಹಿರಿಯ ನಾಯಕರಿಗೆ ಈ ಕುರಿತು ಮನವಿ ಮಾಡಿದ್ದು, ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಅಂತ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ತಿಳಿಸಿದ್ದಾರೆ.