ಬೆಂಗಳೂರು [ಮಾ.12]: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಭೆ ಸಮಾರಂಭವನ್ನು ಸಾಧ್ಯವಾದ ಮಟ್ಟಿಗೆ ಆಚರಣೆ ಮಾಡದಂತೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸೂಚಿಸಿದೆ. 

ಆದರೂ ಕರಗ ಮಹೋತ್ಸವ ಆಚರಣೆಯ ಸಿದ್ಧತೆ ಕುರಿತ ಪ್ರಶ್ನೆಗೆ, ಉತ್ತರಿಸಿದ ವಿಧಾನ ಪರಿಷತ್ತು ಸದಸ್ಯ ಪಿ.ಆರ್‌.ರಮೇಶ್‌, ಕೇರಳದಲ್ಲಿ ಕೊರೋನಾ ಸೋಂಕಿತ ಮಹಿಳೆ ಈಗಾಗಲೇ ಗುಣಮುಖರಾಗಿದ್ದಾರೆ. 

ಎಲ್ಲ ವೈರಸ್‌ಗಳಂತೆ ಕೊರೋನಾ ಸಹ ಒಂದು ವೈರಸ್‌. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ತೊಂದರೆ ಇಲ್ಲ, ಕೊರೋನಾ ವೈರಸ್‌ಗೆ ಔಷಧಿ ಇದೆ ಎಂದು ಹೇಳಿದರು. ಆಗ ಪತ್ರಕರ್ತರು ಔಷಧಿ ಯಾವುದು ಹೇಳಿ ಎಂದು ಪ್ರಶ್ನಿಸಿದಾಗ, ನಾನು ಹೇಳಿದ್ದು ಆ ರೀತಿ ಅಲ್ಲ ಎಂದು ಜಾರಿಕೊಂಡರು.

ಬಳ್ಳಾರಿ: ದುಬೈನಿಂದ ಬಂದ ದಂಪತಿಗೆ ಕೊರೋನಾ ಭೀತಿ!.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾ.31ರಿಂದ ಏ.8ರ ವರೆಗೆ ನಡೆಯುವ ಕರಗ ಮಹೋತ್ಸವದ ಆಚರಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ, ಒಂದು ವೇಳೆ ಪರಿಸ್ಥಿತಿ ಬದಲಾದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಕರಗ ಮಹೋತ್ಸವ ಆಚರಣೆ ಸಿದ್ಧತೆ ಹಾಗೂ ಕೊರೋನಾ ಮತ್ತು ಕಾಲರ ಭೀತಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೇಯರ್‌ ಗೌತಮಕುಮರ್‌ ಹಾಗೂ ಚಿಕ್ಕಪೇಟೆ ಶಾಸಕ ಉದಯ್‌ ಗರುಡಾಚಾರ್‌ ನೇತೃತ್ವದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಪಾಲಿಕೆ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಆಯುಕ್ತರು ಈ ವಿಷಯ ತಿಳಿಸಿದರು.